ಉಪ್ಪಿನಂಗಡಿಯ ಹೊನ್ನಪ್ಪ ಗೌಡ ವರೆಕ್ಕಾ ಎಂಬವರು ಕೆಲ ವರ್ಷಗಳಿಂದ ಉಪ್ಪಿನಂಗಡಿಯ ಸ್ಮಶಾನದಲ್ಲಿ ಯಾವುದೇ ಸಂಭಾವನೆ ಪಡೆಯದೆ ಆತ್ಮಸಂತೋಷಕ್ಕಾಗಿ ಶವ ಸಂಸ್ಕಾರ ನಡೆಸಿ ಗಮನ ಸೆಳೆದಿದ್ದಾರೆ.
ಉಪ್ಪಿನಂಗಡಿ: ಶವ ಸಂಸ್ಕಾರ ಎನ್ನುವುದು ಒಂದು ತೆರನಾದ ಯಜ್ಞ. ಮಾನವನ ಮೃತ ಶರೀರವನ್ನು ಪಂಚಭೂತಗಳಲ್ಲಿ ಲೀನಗೊಳಿಸುವ ಈ ಕಾರ್ಯವನ್ನು ಉಪ್ಪಿನಂಗಡಿಯ ಹೊನ್ನಪ್ಪ ಗೌಡ ವರೆಕ್ಕಾ ಎಂಬವರು ಯಾವುದೇ ಸಂಭಾವನೆ ಪಡೆಯದೆ ಆತ್ಮಸಂತೋಷಕ್ಕಾಗಿ ನಡೆಸುತ್ತಿದ್ದು, ಮಾದರಿಯಾಗಿದ್ದಾರೆ.
ಉಪ್ಪಿನಂಗಡಿಯ ದುರ್ಗಾಗಿರಿಯಲ್ಲಿನ ಶ್ರೀ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಉದಾರವಾಗಿ ನೀಡಲ್ಪಟ್ಟ ಎರಡು ಸಿಲಿಕಾನ್ ದಹನ ಘಟಕವಿದೆ. ಇಲ್ಲಿ ಕೊರೋನಾ ಸಮಯದಲ್ಲಿ ಮೃತಪಟ್ಟ ಬಹಳಷ್ಟು ಮಂದಿಯ ಅಂತ್ಯ ಸಂಸ್ಕಾರವನ್ನು ಸೇವಾ ಭಾರತಿಯ ಸ್ವಯಂ ಸೇವಕರ ಸಹಕಾರದೊಂದಿಗೆ ನಡೆಸಲಾಗಿತ್ತು. ಬಳಿಕದ ದಿನಗಳಲ್ಲಿ ಅಂತ್ಯಸಂಸ್ಕಾರ ಕಾರ್ಯ ನಿರಂತರ ನಡೆಸುತ್ತಾ ಬರುತ್ತಿದ್ದರೂ, ಇದನ್ನು ನಿರ್ವಹಿಸುತ್ತಿರುವ ಹೊನ್ನಪ್ಪ ಗೌಡ ಕಳೆದ ಐದು ವರ್ಷಗಳಿಂದ ತನ್ನ ಆತ್ಮ ಸಂತೋಷಕ್ಕಾಗಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತಿ ಶವ ಸಂಸ್ಕಾರದಲ್ಲಿ ತಲಾ ೫೦೦ ರು. ಸ್ವಚ್ಛತೆಯ ನೆಲೆಯಲ್ಲಿ ಅವರಿಗೆ ಸ್ಮಶಾನ ಸಮಿತಿಯು ನೀಡಬಯಸಿದರೂ, ಸ್ಮಶಾನದಲ್ಲಿನ ಮೂಲಭೂತ ಅವಶ್ಯಕತೆಗಳು ಈಡೇರುವ ವರೆಗೆ ತನಗೆ ಯಾವುದೇ ಸಂಭಾವನೆ ಬೇಡವೆಂದು, ಪಾವತಿಸಬಯಸುವ ಸ್ವಚ್ಛತಾ ಸಂಭಾವನೆಯನ್ನು ಸಮಿತಿಗೆ ಹಿಂತಿರುಗಿಸುತ್ತಿದ್ದಾರೆ. ತನ್ಮೂಲಕ ತನ್ನ ಶ್ರಮ, ತನ್ನ ಸಮಯವನ್ನು ಸಮಾಜಕ್ಕೆ ಅರ್ಪಿಸಿ, ಭಾರತೀಯ ಜೀವನ ಮೌಲ್ಯಗಳಾದ ತ್ಯಾಗ ಮತ್ತು ಸೇವೆಯನ್ನು ತನ್ನ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.