ಹೊನ್ನಾರು ಉತ್ಸವ: ಕೃಷಿ ಚಟುವಟಿಕೆಗೆ ಚಾಲನೆ

KannadaprabhaNewsNetwork |  
Published : Mar 22, 2026, 02:45 AM IST
ಹೊನ್ನಾರು  ಉತ್ಸವ ಸಂದರ್ಭ | Kannada Prabha

ಸಾರಾಂಶ

ಕುಶಾಲನಗರ ತಾಲೂಕಿನ ತೊರೆನೂರು, ಶಿರಂಗಾಲ, ಮಣಜೂರು, ಕೂಡ್ಲೂರು ಗ್ರಾಮಗಳಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ರೈತರು ಹೊನ್ನಾರು ಉತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕಿನ ತೊರೆನೂರು, ಶಿರಂಗಾಲ, ಮಣಜೂರು, ಕೂಡ್ಲೂರು ಗ್ರಾಮಗಳಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ರೈತರು ಹೊನ್ನಾರು ಉತ್ಸವ ಆಚರಿಸಿದರು.

ಬೇಸಾಯದ ಕೆಲಸ ಆರಂಭಿಸುವ ಮೊದಲ ದಿನವಾದ ಯುಗಾದಿ ಸಂದರ್ಭದಲ್ಲಿ ರೈತರು ಭೂಮಿಗೆ ಪೂಜೆ ಸಲ್ಲಿಸಿ, ಹೊನ್ನಾರು ಉಳುಮೆ ಆರಂಭಿಸುವ ಮೂಲಕ ಹೊಸ ಸಂವತ್ಸರದ ಕೃಷಿ ಚಟುವಟಿಕೆಗಳಿಗೆ ಚಾಲನೆ

ನೀಡಿದರು. ಚಂದ್ರಮಾನ ಯುಗಾದಿಯಂದು ಹೊಸ ವರ್ಸದ ಪ್ರಯುಕ್ತ ಜನಪದ ಸಂಸ್ಕೃತಿಯ ಪ್ರತೀಕವಾದ ‘ಹೊನ್ನಾರು ಉತ್ಸವ’ವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.

ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆಗಳು, ಹಳ್ಳಿಗಳನ್ನು ತಳಿರು–ತೋರಣಗಳಿಂದ ಸಿಂಗರಿಸಿ ರಂಗೋಲಿಯ ಚಿತ್ತಾರ ಬಿಡಿಸಿ, ಸಿಂಗರಿಸಿದರು.ಬೆಳಗಿನ ಜಾವ ಎತ್ತು ಹಾಗೂ ದನ, ಕರುಗಳನ್ನು ನದಿಗೆ ಕರೆದೊಯ್ದು, ನೀರಿನಿಂದ ತೊಳೆದು ಅವುಗಳಿಗೆ ಗವುಸು ಹಾಗೂ ವಸ್ತ್ರಾಲಂಕಾರಗಳಿಂದ ಸಿಂಗರಿಸಿ, ಮನೆ ಮಂದಿ ಹೊಸ ಉಡುಗೆ ಧರಿಸಿ, ಜಾನುವಾರು ಹಾಗೂ ಕೃಷಿಪರಿಕರಗಳಿಗೆ ಪೂಜೆ ಸಲ್ಲಿಸಿದರು. ಇದರ ಜತೆಗೆ ಹಬ್ಬಕ್ಕಾಗಿ ಸಿದ್ದಪಡಿಸಿದ ಒಬ್ಬಟ್ಟು ಪಾಯಸ, ವಿವಿಧ ಭಕ್ಷ್ಯಗಳನ್ನು ಜಾನುವಾರುಗಳಿಗೂ ತಿನ್ನಿಸಿ ಸಂತಸಪಟ್ಟರು.

ಅತಿಥಿಗಳು ಹಾಗೂ ಮನೆ ಮಂದಿ ಒಟ್ಟಾಗಿ ಭೋಜನ ಸವಿದರು. ಮನೆ ಮಂದಿಯೆಲ್ಲ ಬೇವು– ಬೆಲ್ಲ ತಿಂದು ಪರಸ್ಪರ ಹೊಸ ವರ್ಷದ ಶುಭಾಶಯ ವಿನಮಯ ಮಾಡಿಕೊಂಡರು.ನಂತರ ತೊರೆನೂರು, ಶಿರಂಗಾಲ ಗ್ರಾಮಗಳಲ್ಲಿ ಹೊನ್ನಾರು ಮೆರವಣಿಗೆ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಸಲ್ಲಿಸಿ ಅಲ್ಲಿಂದ ಮಂಗಳವಾದ್ಯಗಳೊಂದಿಗೆ ಹೊರಟು ಗ್ರಾಮದಲ್ಲಿ ಮೆರವಣಿಗೆ ನಡೆಸಿ ರೈತರು ತಮ್ಮ ತಮ್ಮ ಜಮೀನಿನಲ್ಲಿ ಉಳುಮೆ ಆರಂಭಿಸಿದರು. ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆ- ಬೆಳೆಯಾಗಲಿ ಎಂದು ಪ್ರಕೃತಿ ಪೂಜಿಸಿದರು

ರೈತರು ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿದರು.ಈ ಸಂದರ್ಭ ಉಪಸ್ಥಿತರಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವು ಗ್ರಾಮೀಣ ಕೃಷಿ ಬದುಕಿನ ಚಿತ್ರಣವನ್ನು ಪ್ರತಿಬಿಂಬಿಸುತ್ತದೆ. ಯುಗಾದಿ ಸಂದರ್ಭದಲ್ಲಿ ರೈತರು ತಮ್ಮ‌ ಜಮೀನಿನಲ್ಲಿ ಹೊಸದಾಗಿ ಹೊನ್ನಾರು ಉಳುಮೆ ಅಂದರೆ‌ ಮೊದಲ ಚಿನ್ನದ ಉಳುಮೆ ಆರಂಭಿಸುವ ಮೂಲಕ ಭೂಮಿಯನ್ನು ಪೂಜಿಸಿ ಉತ್ತಮ ಮಳೆ- ಬೆಳೆ‌ ಹಾಗೂ ಕೃಷಿ ಫಸಲು ಬರಲಿ ಎಂದು ಪ್ರಕೃತಿಗೆ‌ ನಮಿಸುವುದು ಮೊದಲಿನಿಂದಲೂ‌ ವಾಡಿಕೆಯಂತೆ‌ ನಡೆದುಕೊಂಡು ಬರಲಾಗುತ್ತಿದೆ ಎಂದರು.ತೊರೆನೂರು ಗ್ರಾಮದಲ್ಲಿ ರೈತ ಟಿ.ವಿ. ಬಸವರಾಜು ದೇವಸ್ಥಾನ ಸಮಿತಿಯ ಜಮೀನಿನಲ್ಲಿ ಭೂಮಿಗೆ ಪೂಜೆ ಸಲ್ಲಿಸಿ ಮೊದಲ ಹೊನ್ನಾರು ಉಳುಮೆ ಆರಂಭಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಜಿ. ಜಗದೀಶ್, ಕಾರ್ಯದರ್ಶಿ ಟಿ.ಎಲ್. ಮಹೇಶ್ ಕುಮಾರ್, ಸಮಿತಿಯ

ಗೌರವಾಧ್ಯಕ್ಷ ಟಿ.ಡಿ. ಈಶ್ವರ್, ಮಾಜಿ ಅಧ್ಯಕ್ಷ ಟಿ.ಟಿ. ಗೋವಿಂದ, ಟಿ.ಕೆ. ವಿಶ್ವೇಶ್ವರಯ್ಯ, ಸಮಿತಿ ಉಪಾಧ್ಯಕ್ಷ ಟಿ.ಬಿ. ಚಿದಾನಂದ, ನಿರ್ದೇಶಕ ಟಿ.ಸಿ. ಶಿವಕುಮಾರ್, ಟಿ.ವಿ. ಶಿವಣ್ಣ, ಟಿ.ಬಿ. ಮಂಜುನಾಥ್, ಟಿ.ಜಿ. ಶಿವಣ್ಣ, ಟಿ.ಆರ್. ಧರ್ಮ, ಟಿ.ಎಸ್. ಪ್ರಕಾಶಚಾರಿ, ಟಿ.ಎಂ. ವಿಕ್ರಂ, ಟಿ.ಜಿ. ಸುಂದರ, ಟಿ.ಎ. ರವಿಚಂದ್ರ, ಪ್ರಮುಖರಾದ ವಿ.ಟಿ. ದೇವರಾಜ್, ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು, ರೈತರು ಇದ್ದರು.

ಮಹಿಳೆಯರು ಹೊನ್ನಾರು ಉತ್ಸವದಲ್ಲಿ ಭಾಗವಹಿಸಿದ್ದ ರೈತರಿಗೆ ಎಲೆ ಅಡಿಕೆ ನೀಡಿ ಜಮೀನು ಉಳುಮೆಗೆ ಶುಭಾಶಯಗಳನ್ನು ಕೋರಿದರು. ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಗಳೂರಿಗೆ ಆಗಮಿಸಿದ ಕಚ್ಚಾತೈಲ ಹಡಗು
ಶೈವ-ವೈಷ್ಣವರ ಅಪರೂಪದ ಸಂಗಮ ಕ್ಷೇತ್ರ