ಹೊನ್ನಾವರದಿಂದ ಪಾಕ್‌ಗೆ ರಫ್ತಾಗುತ್ತಿದ್ದ ವೀಳ್ಯದೆಲೆ ವ್ಯಾಪಾರ ಸ್ಥಗಿತ

KannadaprabhaNewsNetwork |  
Published : May 11, 2025, 11:55 PM IST
ಹೊನ್ನಾವರದ ವೀಳ್ಯದೆಲೆ | Kannada Prabha

ಸಾರಾಂಶ

ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಳಸಿ ದಶಕಗಳೇ ಸಂದಿವೆ. ಇದೀಗ ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂದೂರವನ್ನು ನಡೆಸಿದೆ‌. ಇದಕ್ಕೆ ಶತಕೋಟಿ ಭಾರತೀಯರ ಬೆಂಬಲವೂ ಇದೆ.

ಹೊನ್ನಾವರ: ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹಳಸಿ ದಶಕಗಳೇ ಸಂದಿವೆ. ಇದೀಗ ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂದೂರವನ್ನು ನಡೆಸಿದೆ‌. ಇದಕ್ಕೆ ಶತಕೋಟಿ ಭಾರತೀಯರ ಬೆಂಬಲವೂ ಇದೆ. ಪಾಕಿಸ್ತಾನವನ್ನು ಮಟ್ಟಹಾಕಲು ಭಾರತ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಇದಕ್ಕೆ ಬೆಂಬಲವಾಗಿ ಹೊನ್ನಾವರ ತಾಲೂಕಿನ ರೈತರು ಸಹ ನಿಂತಿದ್ದಾರೆ.

ತಾಲೂಕಿನ ಜೀವನದಿ ಶರಾವತಿಯ ಇಕ್ಕೆಲಗಳಲ್ಲಿ ಬೆಳೆಯುವ ವೀಳ್ಯದೆಲೆ ಹೆಚ್ಚು ಫೇಮಸ್. ಹೊಸಾಕುಳಿಯ ರಾಣಿ ಎಲೆ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ವೀಳ್ಯದೆಲೆ ಉತ್ತರ ಭಾರತದ ಮುಖಾಂತರ ಪಾಕಿಸ್ತಾನಕ್ಕೆ ತಲುಪುತ್ತಿತ್ತು.

ಹೊನ್ನಾವರದಿಂದ ರಾಣಿಬೆನ್ನೂರಿಗೆ ಕಳುಹಿಸಿ ಅಲ್ಲಿಂದ ಭೋಪಾಲ್ ಗೆ ಕಳುಹಿಸಲಾಗುತ್ತದೆ. ಅಲ್ಲಿಂದ ರೈಲು ಅಥವಾ ವಿಮಾನಗಳಲ್ಲಿ ಪಾಕ್ ಗೆ ಕಳುಹಿಸಲಾಗುತ್ತಿತ್ತು. ಇನ್ನು ಕೊಂಕಣ ರೈಲ್ವೆಯ ಮೂಲಕ ಮುಂಬೈಗೆ ಕಳುಹಿಸಿ ಮುಂಬೈಯಿಂದ ಸಹ ಪಾಕ್ ಗೆ ರಾಣಿ ಎಲೆ ಸರಬರಾಜು ಆಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹದಗೆಟ್ಟಿರುವುದರಿಂದ ಉತ್ತರ ಭಾರತಕ್ಕೆ ಹೋಗುತ್ತಿದ್ದ ರಾಣಿ ಎಲೆ ವ್ಯಾಪಾರ ಸ್ಥಗಿತಗೊಂಡಿದೆ.

ಹೊನ್ನಾವರ ತಾಲೂಕಿನ ವಿವಿಧೆಡೆ ಬೆಳೆಯುವ ವೀಳ್ಯದೆಲೆಗೆ ಪಾಕಿಸ್ಥಾನದಲ್ಲಿ ಬೇಡಿಕೆ ಇದೆ. ತಾಲೂಕಿನ ಹೊಸಾಕುಳಿಯಿಂದ ನಿತ್ಯ ಒಂದು ಮಿನಿ ಲಾರಿ ಲೋಡ್‌ ನಷ್ಟು ವೀಳ್ಯದೆಲೆ ಉತ್ತರ ಭಾರತ ತಲುಪಿ ಅಲ್ಲಿನ ವ್ಯಾಪಾರಿಗಳ ಮೂಲಕ ಪಾಕಿಸ್ತಾನಕ್ಕೆ ರಫ್ತಾಗುತ್ತಿತ್ತು.

ಪಾಕಿಸ್ತಾನಕ್ಕೆ ವೀಳ್ಯದೆಲೆ ಕಳುಹಿಸುವುದಾದರೆ ನಾವು ಮುಂಬಯಿ ಮತ್ತು ಉತ್ತರದ ರಾಜ್ಯಗಳ ವ್ಯಾಪಾರಿಗಳಿಗೆ ವೀಳ್ಯದೆಲೆ ಕೊಡುವುದಿಲ್ಲ ಎಂದು ವೀಳ್ಯದೆಲೆ ವ್ಯಾಪಾರಿಗಳು ತಿಳಿಸಿದ್ದಾರೆ.

ಕೈಗೆಟುಕದ ದರ: ಹೊಸಾಕುಳಿಯ ವೀಳ್ಯದೆಲೆಗೆ ಹೆಚ್ಚಿನ ರುಚಿ ಇರುತ್ತದೆ. ಇದನ್ನು ಸವಿಯಲು ಜನರು ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ ಈ ಎಲೆಗೆ ವಿಶೇಷ ಮಾನ್ಯತೆ ಇದೆ. ಅದರಲ್ಲೂ ಉತ್ತರ ಭಾರತದ ಪಾನ್ ಪ್ರಿಯರು ಸಹ ಇಲ್ಲಿನ ವೀಳ್ಯದೆಲೆಯನ್ನು ಕೊಂಡುಕೊಳ್ಳಲು ಮುಗಿಬೀಳುತ್ತಾರೆ. ಆದರೂ ಸಹ ಬೆಳೆದ ರೈತನಿಗೆ ಸರಿಯಾದ ದರ ಸಿಗದೇ ಇರುವುದು ಮಾತ್ರ ದುರಂತವೇ ಸರಿ.

ಸದ್ಯ ನಾವು ವೀಳ್ಯದೆಲೆಯನ್ನು ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶಗಳಿಗೆ ಕಳುಹಿಸುತ್ತಿದ್ದೇವೆ. ಆದರೆ ಈಗ ಯುದ್ಧ ನಡೆಯುತ್ತಿರುವುದರಿಂದ ಎಲೆಯನ್ನು ದೆಹಲಿಯ ವ್ಯಾಪಾರಿಗಳು ಖರೀದಿಸುತ್ತಿಲ್ಲ. ಹೀಗಾಗಿ ನಾವು ಎಲೆಯನ್ನು ನಿರೀಕ್ಷೆಯಂತೆ ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ, ಉತ್ತರ ಭಾರತದ ವ್ಯಾಪಾರಸ್ಥರು ಎಲೆಯನ್ನು ಖರೀದಿಸಿ ಪಾಕಿಸ್ತಾನಕ್ಕೆ ಕೊಡುತ್ತಾರೆ ಎಂದಾದರೆ ನಾವು ಇಲ್ಲಿಂದ ಸರಬರಾಜು ಮಾಡುವುದಿಲ್ಲ ಎನ್ನುತ್ತಾರೆ ವೀಳ್ಯದೆಲೆ ವ್ಯಾಪಾರಸ್ಥ ಸತೀಶ್ ಭಟ್.

ದೇಶದ ಹಿತಾಸಕ್ತಿಯ ವಿಷಯ ಬಂದಾಗ ನಾವೆಲ್ಲರೂ ಒಟ್ಟಾಗಿ ಇರಬೇಕು. ವೀಳ್ಯದೆಲೆಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ ಎಂದಾದರೆ ನಮಗೆ ಅಲ್ಲಿಯ ಮಾರುಕಟ್ಟೆ ಬೇಡ. ವೀಳ್ಯದೆಲೆ ಖರೀದಿ ಆಗದೇ ನಮಗೆ ನಷ್ಟ ಆದರೂ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ರೈತ ನಾರಾಯಣ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ