ಕಾರವಾರ: ಹೊನ್ನಾವರ ಸಾಲ್ಕೋಡನ ಗೋ ಹಂತಕರು ಗೋವಿನ ಫೋಟೋ, ಮಾಂಸವನ್ನು ಆನ್‌ಲೈನ್ ಮೂಲಕ ತೋರಿಸಿ ಗ್ರಾಹಕರನ್ನು ಕುದುರಿಸಿ ಮಾರಾಟ ಮಾಡಿ ಗೂಗಲ್ ಪೇದಿಂದ ಹಣ ಪಡೆಯುತ್ತಿದ್ದರು. ಆರೋಪಿಗಳು ಇದನ್ನೇ ಕಸುಬಾಗಿಸಿಕೊಂಡಿದ್ದರು. ಗೋ ಹಂತಕರು ಸೆರೆಯಾಗುತ್ತಿದ್ದಂತೆ ಈ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ.ಈ ಘಟನೆಯಲ್ಲಿ ಮೊದಲನೇ ಆರೋಪಿ ತೌಫೀಕ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಫೈಜಾನ್ ಎಂಬಾತನ ಹೆಸರು ಹೇಳಿದ್ದಾನೆ. ಪ್ರಮುಖ ಆರೋಪಿಗಳಾದ ವಾಸಿಮ್, ಮುಜಾಮಿಲ್ (ತಲೆಮರೆಸಿಕೊಂಡಿದ್ದಾರೆ), ಫೈಜಾನ್ ಹಾಗೂ ತೌಫೀಕ್ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದು, ದನಗಳ ಫೋಟೋ ಹಾಕುತ್ತಿದ್ದರು. ನಂತರ ಆ ದನದ ಮಾಂಸದ ಫೋಟೋ ಹಾಕುತ್ತಿದ್ದರು. ಬೇಡಿಕೆ ಬಂದಾಗ ಮಾಂಸ ಕಳುಹಿಸಿಕೊಟ್ಟು ಗೂಗಲ್ ಪೇ ಮೂಲಕ ಹಣ ಪಡೆಯುತ್ತಿದ್ದರು.ಆರೋಪಿಗಳ ಮೊಬೈಲ್‌ನಲ್ಲಿ ಹಲವು ಹಸುಗಳ ಫೋಟೋಗಳು, ಮಾಂಸದ ಫೋಟೋಗಳು ಇರುವುದು ಪತ್ತೆಯಾಗಿದೆ. ಗೂಗಲ್ ಪೇ ಮೂಲಕ ಹಣ ಪಡೆಯುತ್ತಿರುವುದೂ ಬೆಳಕಿಗೆ ಬಂದಿದೆ. ಘಟನೆ ನಡೆದ ಫೆ. 18ರಂದು ಆರೋಪಿಗಳು ನಾಲ್ವರು ಹಾಗೂ ಸ್ಥಳೀಯ ಇಬ್ಬರು ಹಿಂದುಗಳ ಸಹಕಾರದಿಂದ ಮಾಂಸ ಕಡಿದು ಪ್ಯಾಕ್ ಮಾಡಿದರು. ಫೈಜಾನ್ ಸ್ಕೂಟಿಯ ಮೂಲಕ ಮದುವೆಗೆ ಈ ಮಾಂಸ ಸಾಗಾಟ ಮಾಡಿದ್ದು. ಗೂಗಲ್ ಪೇ ಮೂಲಕ ಹಣ ಪಾವತಿಸಿಕೊಂಡಿದ್ದಾರೆ.ಇವರ ಕೃತ್ಯಕ್ಕೆ ಸ್ಥಳೀಯರಾದ ಇಬ್ಬರು ಹಿಂದುಗಳೂ ಸಹಕರಿಸಿರುವುದು ತನಿಖೆ ವೇಳೆ ಪೊಲೀಸರ ಗಮನಕ್ಕೆ ಬಂದಿದೆ. ಈಗ ಪೊಲೀಸರು ಪ್ರಮುಖ ಆರೋಪಿಗಳಾದ ವಾಸಿಮ್, ಮುಜಾಮಿಲ್ ಹಾಗೂ ಸಹಕರಿಸಿದ ಇಬ್ಬರು ಹಿಂದುಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಫೈಜಾನ್‌ನನ್ನು ಮಹಜರಿಗಾಗಿ ಕರೆದೊಯ್ಯುತ್ತಿದ್ದಾಗ ವಂದೂರು ಸಮೀಪ ದುಗ್ಗೂರು ಗುಡ್ಡದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದಾಗ ಸಿಪಿಐ ಸಿದ್ಧರಾಮೇಶ್ವರ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ, ಮತ್ತೆ ದಾಳಿಗೆ ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ತನಿಖೆಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರಗಳನ್ನು ನೀಡಿದರು. ಆರೋಪಿಯಿಂದ ದಾಳಿಗೊಳಗಾದ ಪೊಲೀಸರು ಹಾಗೂ ಆರೋಪಿ ಫೈಜಾನ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಸುಳಿವು ನೀಡಿದವರಿಗೆ ₹50 ಸಾವಿರ ಬಹುಮಾನಪ್ರಮುಖ ಆರೋಪಿ ಸುಳಿವು ನೀಡಿದವರಿಗೆ ₹50 ಸಾವಿರ ಬಹುಮಾನವನ್ನು ಜಿಲ್ಲಾ ಪೊಲೀಸ್ ವರಿಷ್ಠರು ಘೋಷಣೆ ಮಾಡಿದ್ದು, ಸುಳಿವು ನೀಡುವವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ಪೊಲೀಸ್ ವರಿಷ್ಠ ಎಂ. ನಾರಾಯಣ ತಿಳಿಸಿದ್ದಾರೆ.
ಗೋಹತ್ಯೆ ಮಾಡಿದರೆ ಮಸೀದಿಯಿಂದ ಬಹಿಷ್ಕಾರಕಾರವಾರ: ಗೋಹತ್ಯೆ ಮಾಡಿದರೆ ಮಸೀದಿಯಿಂದ ಬಹಿಷ್ಕಾರ ಹಾಕುವಂತೆ ಭಟ್ಕಳದ ತಂಜಿಂ ನಿರ್ಣಯ ಮಾಡಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಟ್ಕಳದಲ್ಲಿ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಎಲ್ಲ ಅಕ್ರಮ ಕಸಾಯಿಖಾನೆಯನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ.ಗೋಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ವಾಸಿಮ್ ಹಾಗೂ ಮುಜಾಮಿಲ್ ಬಂಧನವಾದ ಮೇಲೆ ಹೆಚ್ಚಿನ ಮಾಹಿತಿ ತಿಳಿಯಲಿದೆ. ಆರೋಪಿ ಫೈಜಾನ್‌ಗೆ ಕಾರವಾರದ ಕ್ರಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೌಫೀಕ್‌ಗೆ ಉನ್ನತ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಗಾಯಗೊಂಡಿರುವ ಮೂವರು ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದರು.