- 2014ರ ಚುನಾವಣೇಲಿ ನನ್ನ ಮನೆ ಕಾದಿದ್ದು, ನಮ್ಮ ಪರ ಹರೀಶ ಪ್ರಚಾರ ಮಾಡಿದ್ದು ಸತ್ಯ - ಹರಿಹರ ಶಾಸಕರ ವಿರುದ್ಧ ರೇಣುಕಾಚಾರ್ಯ ಆರೋಪವನ್ನು ಸಮರ್ಥಿಸಿಕೊಂಡ ಸಚಿವರು - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾಜಿ ಸಚಿವ ರೇಣುಕಾಚಾರ್ಯ ಹೇಳಿರುವುದು ಸರಿಯಾಗಿಯೇ ಇದೆ. 2014ರ ಲೋಕಸಭೆ ಚುನಾವಣೆಯಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ ನಮ್ಮ ಮನೆ ಬಾಗಿಲು ಕಾಯುತ್ತಿದ್ದುದು, ನಮ್ಮ ಪರವಾಗಿಯೇ ಪ್ರಚಾರ ಮಾಡಿದ್ದು ನಿಜ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ಪಷ್ಪಪಡಿಸಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಹರೀಶ ಅಂದು ಸಿದ್ದೇಶ್ವರ ವಿರುದ್ಧ ಏನೆಲ್ಲಾ ಮಾತನಾಡಿದ್ದರೆಂಬುದೂ ಎಲ್ಲರಿಗೆ ಗೊತ್ತಿದೆ. ಕಾಂಗ್ರೆಸ್ ಸೇರಲು ಬಂದಿದ್ದು ರೇಣುಕಾಚಾರ್ಯ ಅಲ್ಲ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿಲ್ಲವೆಂದು ಹರೀಶ ಧರ್ಮಸ್ಥಳದಲ್ಲಿ ಗಂಟೆ ಹೊಡೆಯಲಿ ಎಂಬ ರೇಣುಕಾಚಾರ್ಯ ಹೇಳಿಕೆ ಸರಿಯಾಗಿದೆ ಎಂದರು.
ಹರೀಶ ನಂಗೇನೂ ಹೊಸಬನಲ್ಲ. ಈ ಹಿಂದೆ ಕಮ್ಯುನಿಷ್ಟ್ ಪಕ್ಷದಲ್ಲಿದ್ದಾಗ ಗೆಲ್ಲಿಸಿದ್ದು ನಾವೇ. ಹರೀಶನಿಗೆ ತನ್ನ ಅಪ್ಪನ ಸಮಾಧಿ ಎಲ್ಲಿದೆ ಎಂಬುದೂ ಗೊತ್ತಿರಲಿಲ್ಲ. ನಮಗೆ ಮಾರಿದ್ದ ಜಾಗದಲ್ಲಿ ಸಮಾಧಿ ಇದ್ದು. ನಾನೇ ಬಾರೋ ಹರೀಶ, ನಿಮ್ಮ ತಂದೆ ಸಮಾಧಿ ಸರಿಪಡಿಸಿಕೋ ಅಂತಾ ಹೇಳಿದ್ದೆ. ಕೊನೆಗೆ ನಮ್ಮ ಮೇಲೆಯೇ ಕೇಸ್ ದಾಖಲಿಸಿ, ಪೊಲೀಸ್ ಠಾಣೆಗೆ ಅಲೆದಾಡುವಂತೆ ಮಾಡಿದ್ದ. ನಮಗೇನೂ ಹರೀಶ ಹೊಸಬನಲ್ಲ ಎಂದು ಎಸ್‌ಎಸ್‌ಎಂ ಹೇಳಿದರು.ಮಾಜಿ ಸಚಿವ ಎಸ್.ಎ. ರವೀಂದ್ರನಾಥ್‌ಗೆ ಆಪರೇಷನ್ ಆಗಿತ್ತು. ರತ್ನಮ್ಮನವರಿಗೂ ಕಣ್ಣಿನ ಆಪರೇಷನ್ ಆಗಿದ್ದರಿಂದ ನಾನು, ಡಾ.ಪ್ರಭಾ ಇಬ್ಬರೂ ಹೋಗಿ, ಆರೋಗ್ಯ ವಿಚಾರಿಸಿಕೊಂಡು ಬಂದೆವು. ಅದಕ್ಕೆ ಎಲುಬಿಲ್ಲದ ನಾಲಿಗೆಯೆಂದು ಹರೀಶ ಏನೇನೋ ಮಾತನಾಡಿದ್ದಾನೆ. ಅವನಿಗೇನು ತಲೆಗಿಲೆ ಸರಿ ಐತೋ, ಇಲ್ಲವೋ? ಜನರು ಯಾಕೆ ಆಯ್ಕೆ ಮಾಡಿದ್ದಾರೋ ಅದಕ್ಕೆ ಕೆಲಸ ಮಾಡಬೇಕು. ಅದನ್ನು ಬಿಟ್ಟು, ಪೇಪರ್, ಟೀವಿಗೆ ಬರ್ತೀನಿ ಅಂತಾ ಏನೇನೋ ಮಾತನಾಡುವುದಾ? ದೇವರೇ ಕಾಪಾಡಬೇಕು ಎಂದು ಸಚಿವ ಮಲ್ಲಿಕಾರ್ಜುನ ಮಾತಲ್ಲೇ ಕುಟುಕಿದರು.
ಹೋರ್ಡಿಂಗ್ಸ್, ಬ್ಯಾನರ್ ಸಮಸ್ಯೆ ಆಗಿದ್ದರೆ ಜಿಪಂ ಸಭೆಗೆ ಆಗಮಿಸಿದ್ದಾಗಲೇ ಸುಮಾರು ಹೊತ್ತು ನಮ್ಮೊಂದಿಗೆ ಇದ್ದಾಗಲೇ ಮಾತನಾಡಬೇಕಿತ್ತು. ಇದೇ ಹರೀಶನ ಮಗ ಸಹ ಜಾಹೀರಾತು ಹೋರ್ಡಿಂಗ್ಸ್ ಏಜೆನ್ಸಿ ನಡೆಸುತ್ತಾನೆ. ಟೆಂಡರ್ ಸಹ ಹರೀಶ ಮಗ ಪಡೆದಿದ್ದಾನೆ. ಎಲ್ಲ ಪಾರ್ಟಿ ಸುತ್ತಾಡಿರುವ ಹರೀಶ ಯಾವ ಲೆಕ್ಕ ನಮಗೆ ಎಂದು ಹರಿಹರ ಬಿಜೆಪಿ ಶಾಸಕರ ವಿರುದ್ಧ ಎಸ್.ಎಸ್.ಎಂ. ವಾಗ್ದಾಳಿ ನಡೆಸಿದರು.- - -
ಕೋಟ್ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಮೊದಲು ಪಾಲಿಕೆ ಸದಸ್ಯನಾಗಲು ಅವನಣ್ಣ ಶ್ರೀನಿವಾಸ ಕಾರಣ. ಶ್ರೀನಿವಾಸ ನಮ್ಮ ಸ್ನೇಹಿತ, ಅಣ್ಣ, ತಮ್ಮನ ಮಧ್ಯೆ ಏನೇನೋ ಇದೆ. ಅದರಲ್ಲಿ ನಮ್ಮ ಪಾತ್ರವಿಲ್ಲ. ಅವನಣ್ಣ ಇರಲಿಲ್ಲ ಅಂದಿದ್ದರೆ ಪಾಲಿಕೆ ಸದಸ್ಯ ಆಗ್ತಿರಲಿಲ್ಲ, ಶಾಸಕನೂ ಆಗುತ್ತಿರಲಿಲ್ಲ. ಯಾರೋ ಇರಲಿ ಅಂತಾ ಅಣ್ಣ ಶ್ರೀನಿವಾಸ ಹೇಳಿದರೆ, ತಮ್ಮ ಬಸವರಾಜ ಬೇಡ ಅಂತಾನೆ- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ