ಭದ್ರಾ ಹಿನ್ನೀರಿಂದ ದೂರವಾಗಿದ್ದ ಗ್ರಾಮಸ್ಥರನ್ನು ಹತ್ತಿರಕ್ಕೆ ತಂದ ಹೊನ್ನೇಕೊಡಿಗೆ ಸೇತುವೆ

KannadaprabhaNewsNetwork |  
Published : Apr 11, 2026, 01:30 AM IST
 ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೋಮವಾರ ಉದ್ಘಾಟನೆ  ಮಾಡಲಿರುವ ನರಸಿಂಹರಾಜಪುರ ತಾಲೂಕಿನ ಹೊನ್ನೇಕೊಡಿಗೆ ಸಂಪರ್ಕ ಸೇತುವೆ | Kannada Prabha

ಸಾರಾಂಶ

ನರಸಿಂಹರಾಜಪುರಬಯಲು ಸೀಮೆಯ ದಾಹ ತಣಿಸಲು 1957ರಲ್ಲಿ ನಿರ್ಮಾಣವಾದ ಭದ್ರಾ ಡ್ಯಾಂನಿಂದ ಎನ್‌.ಆರ್.ಪುರ ತಾಲೂಕಿನ ಅರ್ಧ ಭಾಗದಲ್ಲಿ ಭದ್ರೆಯ ಹಿನ್ನೀರು ನಿಂತು ತಾಲೂಕಿನ ಕೆಲವು ಗ್ರಾಮಗಳೇ ಪಟ್ಟಣದಿಂದ ಬೇರ್ಪಟ್ಟಿತ್ತು. ಇದರಿಂದ ಉಂಟಾಗಿದ್ದ ಅನಾನುಕೂಲ ನಿವಾರಿಸುವ ಬಹುದಿನದ ಕನಸು ನನಸಾಗುವ ಕಾಲ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯಿಂದ ಸನ್ನಿಹಿತವಾಗಿದೆ.

ಹುಟ್ಟೂರಿನ ನೆನಪಿಗೆ ಐತಿಹಾಸಿಕ ಸೇತುವೆ ಕಟ್ಟಿಸಿದ ಎಂ.ಶ್ರೀನಿವಾಸ್ । ಸಿಎಂ ಸಿದ್ದರಾಮಯ್ಯರಿಂದ 38 ಕೋಟಿ ವೆಚ್ಚದ ಸೇತುವೆ ಉದ್ಘಾಟನೆ

ಯಡಗೆರೆ ಮಂಜುನಾಥ್,

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬಯಲು ಸೀಮೆಯ ದಾಹ ತಣಿಸಲು 1957ರಲ್ಲಿ ನಿರ್ಮಾಣವಾದ ಭದ್ರಾ ಡ್ಯಾಂನಿಂದ ಎನ್‌.ಆರ್.ಪುರ ತಾಲೂಕಿನ ಅರ್ಧ ಭಾಗದಲ್ಲಿ ಭದ್ರೆಯ ಹಿನ್ನೀರು ನಿಂತು ತಾಲೂಕಿನ ಕೆಲವು ಗ್ರಾಮಗಳೇ ಪಟ್ಟಣದಿಂದ ಬೇರ್ಪಟ್ಟಿತ್ತು. ಇದರಿಂದ ಉಂಟಾಗಿದ್ದ ಅನಾನುಕೂಲ ನಿವಾರಿಸುವ ಬಹುದಿನದ ಕನಸು ನನಸಾಗುವ ಕಾಲ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯಿಂದ ಸನ್ನಿಹಿತವಾಗಿದೆ.

₹ 38 ಕೋಟಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ನಿರ್ಮಾಣದಿಂದ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ 6 ಗ್ರಾಮಗಳ 19 ಹಳ್ಳಿಗಳ ಅಂದಾಜು 2 ಸಾವಿರ ಜನರಿಗೆ ಪಟ್ಟಣ ಹತ್ತಿರವಾಗಿದ್ದು ಹೊಸ ಇತಿಹಾಸ ಸೃಷ್ಟಿಯಾಗಿದೆ. ತಾಲೂಕಿನ ಹೊನ್ನೇಕೊಡಿಗೆ ಗ್ರಾಪಂನಲ್ಲಿ 8 ಗ್ರಾಮಗಳಿದ್ದು ಡ್ಯಾಂ ನಿರ್ಮಾಣದಿಂದ ಹಂದೂರು, ಸಾಲೂರು, ಹೊನ್ನೇ ಕೊಡಿಗೆ, ವರ್ಕಾಟೆ,ಸಾರ್ಯ, ಬಿಳಾಲು ಕೊಪ್ಪ ಗ್ರಾಮಗಳ ಹಲವು ಭಾಗಗಳು ನೀರಿನಿಂದ ಆವೃತವಾದವು.

ನಂದಿಗಾವೆ, ದಂಡು ಬಿಟ್ಟಹಾರ ಗ್ರಾಮಗಳು ಸಂಪರ್ಕ ಕಡಿತಗೊಂಡು ತರೀಕೆರೆ ತಾಲೂಕಿಗೆ ಹತ್ತಿರವಾದವು. ಹೊನ್ನೇಕೊಡಿಗೆಯಿಂದ ನರಸಿಂಹರಾಜಪುರ ಪಟ್ಟಣಕ್ಕಿದ್ದ ಮುಖ್ಯ ಸಂಪರ್ಕ ರಸ್ತೆ ಮುಳುಗಡೆಯಾಗಿ 6 ಗ್ರಾಮಗಳ ಹಳ್ಳಿ ಗಳಾದ ಹಂದೂರು, ಬಿಳಾಲುಕೊಪ್ಪ, ಸಾಲೂರು, ಕುಂಬಸಾಲೂರು, ಮೋರಿ ಮಠ, ಹೊನ್ನೇಕೊಡಿಗೆ, ಹಂತುವಾನಿ, ಹಂಚಿನಮನೆ, ಬಿದಿರುಮನೆ, ಕಲ್ಲು ಗಡ್ಡೆ, ವರ್ಕಾಟೆ, ಅಡ್ಡಟ್ಟೆ, ಹೊಸಗದ್ದೆ, ಕೋಡಿಗದ್ದೆ,ಬಸರಿಗಳಲೆ, ಸಾರ್ಯ, ಕೂಸಗಲ್ಲು, ಸಾರ್ಯ, ಕರ್ಕೂಟ ಸೇರಿದಂತೆ 19 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ನರಸಿಂಹರಾಜಪುರಕ್ಕೆ ಬರಲು15-20 ಕಿ.ಮೀ. ಬಳಸಿಕೊಂಡು ಬಾಳೆಹೊನ್ನೂರು ರಸ್ತೆ, ಬಿ.ಎಚ್.ಕೈಮರ ಮೂಲಕ ಬರಬೇಕಾಯಿತು.

ಭದ್ರಾ ಡ್ಯಾಂಗಾಗಿ ತಮ್ಮ ಜಮೀನು ಕಳೆದುಕೊಂಡ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ಇಂಧನ ಮತ್ತು ಸಮಯ ವ್ಯಯಿಸಿ ಸುತ್ತು ಹಾಕಿಕೊಂಡು ಬರುವಂತಾಗಿತ್ತು. ಹಲವು ವರ್ಷ ಹೊನ್ನೇಕೊಡಿಗೆ ಗ್ರಾಪಂ ಗ್ರಾಮಸ್ಥರು ದೋಣಿ ಮೂಲಕವೇ ಪಟ್ಟಣಕ್ಕೆ ಬರುತ್ತಿದ್ದರು.

-- ಬಾಕ್ಸ್ --

ಹುಟ್ಟೂರಿನ ಅಭಿವೃದ್ಧಿಗಾಗಿ ಶ್ರಮಿಸಿದ ಎಂ.ಶ್ರೀನಿವಾಸ್

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರ ಹುಟ್ಟೂರಾದ ನರಸಿಂಹರಾಜಪುರದ ಋಣ ತೀರಿಸಲು ತಾಲೂಕಿನ ಅಭಿವೃದ್ಧಿಗೆ ಮುಂದಾಗಿ ಶ್ರಮಿಸಿದವರು. ತಮ್ಮ ಊರಿನ ಜನರ ಬವಣೆ ಅರಿತಿದ್ದ ಅವರು ಕಡಹಿನ ಬೈಲು ಏತ ನೀರಾವರಿ ಯೋಜನೆ ಉದ್ಘಾಟನೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊನ್ನೇಕೊಡಿಗೆ ಸಂಪರ್ಕ ಸೇತುವೆಗಾಗಿ ಮನವಿ ಮಾಡಿದ್ದರಿಂದ ಸಿದ್ದರಾಮಯ್ಯ ಸೇತುವೆಗೆ ಹಣ ಮಂಜೂರು ಮಾಡಿದ್ದರು. 2017ರಲ್ಲಿ ಸ್ವತಃ ಸಿದ್ದರಾಮಯ್ಯ ಆಗಮಿಸಿ ಹೊನ್ನೇಕೊಡಿಗೆ ಸೇತುವೆಗೆ ಶಂಕುಸ್ಥಾಪನೆ ಮಾಡಿದ್ದರು. 8 ವರ್ಷಗಳ ಬಳಿಕ ಸೇತುವೆ ಪೂರ್ಣ ಗೊಂಡಿದ್ದು ಸಿದ್ದರಾಮಯ್ಯ ಅವರಿಂದಲೇ ಏ.13 ರ ಸೋಮವಾರ ಬೆಳಿಗ್ಗೆ ಲೋಕಾರ್ಪಣೆಗೊಳ್ಳುತ್ತಿದೆ.

ಈಗ ₹38.46 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಈ ಬೃಹತ್ ಸೇತುವೆ ಕಾರ್ಯಾರಂಭಿಸಲು ಮದು ಮಗನಂತೆ ಸಿಂಗಾರಗೊಂಡಿದೆ. ಸೇತುವೆ 504 ಮೀ. ಉದ್ದ, 7.50 ಮೀ. ಅಗಲವಿದೆ. 14 ಪಿಲ್ಲರ್ ಗಳಿಂದ ನಿಂತಿರುವ ಸೇತುವೆ ಎರಡೂ ಭಾಗದಲ್ಲಿ ಭದ್ರಾ ಹಿನ್ನೀರಿನ ದೃಶ್ಯದಿಂದ ಕಣ್ತುಂಬಿಕೊಳ್ಳುವಂತಿದೆ.

-- ಬಾಕ್ಸ್ --

ನರಸಿಂಹರಾಜಪುರದ 2 ಸೇತುವೆಗಳ ಕಥೆ

ನರಸಿಂಹರಾಜಪುರ ತಾಲೂಕಿನ 2 ಸೇತುವೆಗಳು ತಮ್ಮ ಕಥೆ ಹೇಳುತ್ತಿವೆ. ಒಂದು ಭದ್ರಾ ಹಿನ್ನೀರಿನಲ್ಲಿ ಮುಳುಗಡೆಯಾದ ತಡಸ ಸೇತುವೆ. ಇನ್ನೊಂದು ಸ್ಥಳೀಯರ ಬಹಳ ದಿನಗಳ ಕನಸು ನನಸಾಗಿಸುತ್ತಿರುವ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಹೊಸ ಕಥೆಗೆ ಮುನ್ನುಡಿ ಬರೆದಿದೆ.

ತಾಲೂಕಿನ ಅರ್ಧ ಭಾಗವನ್ನು ಭದ್ರಾ ಹಿನ್ನೀರು ಆಪೋಷನ ತೆಗೆದುಕೊಳ್ಳುವ ಮುನ್ನಾ ತರೀಕೆರೆಯಿಂದ ನರಸಿಂಹರಾಜ ಪುರಕ್ಕೆ ತಡಸ ಸೇತುವೆ ಮೂಲಕ ರೈಲು ಬರುತ್ತಿತ್ತು. ನರಸಿಂಹರಾಜಪುರದಿಂದ ಕೇವಲ 5 ಕಿ.ಮೀ.ದೂರದ ತಡಸ ಎಂಬಲ್ಲಿ ಇದ್ದ ದೊಡ್ಡ ಹಳ್ಳಕ್ಕೆ ಬ್ರಿಟಿಷರು ಕಲ್ಲಿನಿಂದಲೇ ಸೇತುವೆ ನಿರ್ಮಿಸಿದ್ದರಿಂದ ಅದರ ಮೇಲೆ ವಾಹನ ಹಾಗೂ ಒಂದು ಬದಿಯಲ್ಲಿ ರೈಲು ಸಂಚರಿಸುತ್ತಿತ್ತು. ಭದ್ರಾ ಹಿನ್ನೀರಿನಲ್ಲಿ ಈ ತಡಸ ಸೇತುವೆ ಮುಳುಗಡೆಯಾಗಿ ಗತಕಾಲ ಸೇರಿತು. ಬರಗಾಲದಲ್ಲಿ ಹಿನ್ನೀರು ಕ್ಷೀಣಿಸಿದಾಗ ಕಾಣುವ ತಡಸಾ ಸೇತುವೆ ವೀಕ್ಷಣೆಗೆ ತಂಡೋಪ ತಂಡವಾಗಿ ಜನ ಬರುತ್ತಾರೆ.

- ಬಾಕ್ಸ್-

ಸಮೀಪ ಮಾರ್ಗ ಸೃಷ್ಟಿಸಿದ ಸೇತುವೆ

ಈ ನೂತನ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಮೂಲಕ ಮುಂದೆ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿಗೆ ಹೋಗಲು ಅನುಕೂಲವಾಗಲಿದೆ. ನರಸಿಂಹರಾಜಪುರದಿಂದ ಚಿಕ್ಕಮಗಳೂರಿಗೆ ಹೋಗಲು 90 ಕಿ.ಮೀ. ಆಗಲಿದೆ. ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಮೂಲಕ ಹಂದೂರು, ಸಾಲೂರು, ಮೋರಿಮಠ,ಹೆಬ್ಬೆ ಭವಾನಿ ಶಂಕರ ದೇವಸ್ಥಾನದ ಹತ್ತಿರದವರೆಗೆ ರಸ್ತೆ ಇದೆ. ಅಲ್ಲಿ ಭದ್ರಾ ನದಿಗೆ ಸೇತುವೆ ನಿರ್ಮಿಸಿದರೆ ಮುಂದೆ ಹಿಪ್ಲಾ, ಮಾಡ್ಲ, ಮುತ್ತೋಡಿ, ಮಲ್ಲಂದೂರು ಮಾರ್ಗವಾಗಿ ಇರುವ ರಸ್ತೆ ಮೂಲಕ ಚಿಕ್ಕಮಗಳೂರಿಗೆ ಸೇರಬಹುದು. ಈ ರಸ್ತೆಯಲ್ಲಿ ಹೋದರೆ 40 ಕಿ.ಮೀ.ಉಳಿತಾಯವಾಗಲಿದೆ.

-- ಕೋಟ್ --

ಹೊನ್ನೇಕೊಡಿಗೆ ಸೇತುವೆಯಿಂದ ಈ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಸೇತುವೆ ನಿರ್ಮಾಣದಿಂದ ಹತ್ತಾರು ಕಿ.ಮೀ. ಸುತ್ತುವರಿದು ನರಸಿಂಹರಾಜಪುರಕ್ಕೆ ಹೋಗುವ ಸಮಯ, ಇಂಧನ ಉಳಿತಾಯವಾಗಲಿದೆ. ಇದಕ್ಕಾಗಿ ಶ್ರಮಿಸಿದ ಎಂ.ಶ್ರೀನಿವಾಸ್ ಹಾಗೂ ಶಾಸಕ ಟಿ.ಡಿ.ರಾಜೇಗೌಡರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಹೇಳುತ್ತೇವೆ.

ಮೀನಾಕ್ಷಿ ಕಾಂತರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ, ಹೊನ್ನೇಕೊಡಿಗೆ

-- ಕೋಟ್ --

ಹೊನ್ನೇಕೊಡಿಗೆ ಸಂಪರ್ಕ ಸೇತುವೆ ನನಗೆ ತೃಪ್ತಿಕೊಟ್ಟ ಜೀವನದ ದೊಡ್ಡ ಸಾಧನೆ. ಹೊನ್ನೇಕೊಡಿಗೆ ಗ್ರಾಪಂ ಗ್ರಾಮಸ್ಥರ ಕನಸು ನನಸಾಗಿದೆ. ಕಳೆದ 65 ವರ್ಷದಿಂದ 15-20 ಕಿ.ಮೀ. ಸುತ್ತುವರಿದು ಪಟ್ಟಣಕ್ಕೆ ಬರುತ್ತಿದ್ದವರು ಈಗ ಕೇವಲ 4 ರಿಂದ 5 ಕಿ.ಮೀ. ಬಂದರೆ ಪಟ್ಟಣಕ್ಕೆ ಸೇರಬಹುದು. ₹60 ಕೋಟಿ ವೆಚ್ಚದಲ್ಲಿ ಎನ್.ಆರ್.ಪುರ ಪಟ್ಟಣದ ರಸ್ತೆ ಅಗಲೀಕರಣ ಸಹ ಆಗಲಿದೆ.

ಎಂ.ಶ್ರೀನಿವಾಸ್, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಚ್ಚಮ್ಮ ದೇವಿಯ ವೈಭವದ ಮಹಾರಥೋತ್ಸವ
ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಪಾತ್ರ ಮಹತ್ವದ್ದು