ಅರಣ್ಯ ಇಲಾಖೆಗೆ ಒಪ್ಪಿಗೆ ಸಿಗದೆ ನನೆಗುದಿಗೆ ಬಿದ್ದ ಹೊನ್ನೇಕೊಡಿಗೆ ಏತ ನೀರಾವರಿ

KannadaprabhaNewsNetwork |  
Published : Aug 31, 2026, 02:00 AM IST
ನರಸಿಂಹರಾಜಪುರ ತಾಲೂಕು ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಗಾಗಿ ನಿರ್ಮಿಸಿರುವ ಪಂಪ್ ಹೌಸ್ | Kannada Prabha

ಸಾರಾಂಶ

ನರಸಿಂಹರಾಜಪುರ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಗೆ ಪೈಪ್ ಲೈನ್ ಹಾದು ಹೋಗಲು ಅರಣ್ಯ ಇಲಾಖೆ ಒಪ್ಪಿಗೆ ನೀಡದೆ 5 ದಶಕಗಳ ಗ್ರಾಮಸ್ಥರ ಕನಸಿನ ನೀರಾವರಿ ಯೋಜನೆ ಮರೀಚಿಕೆಯಾಗಿದೆ.

- 48 ವರ್ಷದ ಹಿಂದಿನ ಪ್ರಸ್ತಾವನೆ । ನೀರಾವರಿಗಾಗಿ ಎ.ಎಸ್.ಕೃಷ್ಣಯ್ಯ ಭಗೀರಥ ಪ್ರಯತ್ನ । ಫಲಿತಾಂಶ ಶೂನ್ಯ

ಯಡಗೆರೆ ಮಂಜುನಾಥ್,

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಗೆ ಪೈಪ್ ಲೈನ್ ಹಾದು ಹೋಗಲು ಅರಣ್ಯ ಇಲಾಖೆ ಒಪ್ಪಿಗೆ ನೀಡದೆ 5 ದಶಕಗಳ ಗ್ರಾಮಸ್ಥರ ಕನಸಿನ ನೀರಾವರಿ ಯೋಜನೆ ಮರೀಚಿಕೆಯಾಗಿದೆ.

1958 ರಲ್ಲಿ ಬಯಲು ಸೀಮೆಗೆ ನೀರು ಕೊಡಲು ಲಕ್ಕವಳ್ಳಿಯಲ್ಲಿ ಭದ್ರಾ ಡ್ಯಾಂ ಕಟ್ಟಿದ್ದರಿಂದ ಈ ಭದ್ರಾ ಹಿನ್ನೀರು ತಾಲೂಕಿನ ಹಲವು ಗ್ರಾಮಗಳನ್ನು ಆಪೋಷನ ಪಡೆಯಿತು. ಇದರಲ್ಲಿ ಹೊನ್ನೇಕೊಡಿಗೆ ಗ್ರಾಪಂನ ಹಂದೂರು, ಹೊನ್ನೇಕೊಡಿಗೆ, ಬಿಳಾಲುಕೊಪ್ಪ, ಸಾಲೂರು, ವರ್ಕಾಟೆ ಮುಂತಾದ ಗ್ರಾಮಗಳು ಸೇರಿತ್ತು. ಜನರ ಜಮೀನಿಗೆ ಮಳೆ ನೀರೇ ಮೂಲ ಆಶ್ರಯವಾಗಿದ್ದರಿಂದ ಹತ್ತಿರದಲ್ಲೇ ಇದ್ದ ಭದ್ರಾ ಹಿನ್ನೀರನ್ನು ಬಳಸಿ ನೀರಾವರಿ ಜಮೀನು ಮಾಡಬಹುದೆಂದು ಗ್ರಾಮದ ಹಿರಿಯರು ಹಾಗೂ ತಾಲೂಕು ಬೋರ್ಡಿನ ಸದಸ್ಯರಾಗಿದ್ದ ಎ.ಎಸ್.ಕೃಷ್ಣಯ್ಯ ಮೊದಲ ಬಾರಿಗೆ 1978 ರಲ್ಲಿ ಅಂದಿನ ನೀರಾವರಿ ಸಚಿವ ಡಿ.ಬಿ. ಚಂದ್ರೇ ಗೌಡರಿಗೆ ಮನವಿ ಸಲ್ಲಿಸಿದರು.

ಕಾವೇರಿ ಜಲಾನಯನ ಇಲಾಖೆ ಅಧಿಕಾರಿಗಳು ಸರ್ವೆ ಮಾಡಿಸಿ ಈ ಏತ ನೀರಾವರಿಯಿಂದ 1200 ಎಕರೆ ಜಮೀನು ನೀರಾವರಿ ಆಗಲಿದೆ ಎಂದು ಅಂದಾಜು ಪಟ್ಟಿ ಸಲ್ಲಿಸಿದ್ದರು. ನಂತರ ಕಾವೇರಿ ಜಲಾನಯನದ ಇಲಾಖೆಯಿಂದ ಭದ್ರಾ ನೀರಾವರಿ ಯೋಜನೆಗೆ ಸೇರಿಸಲಾಯಿತು. 1991ರಲ್ಲಿ ಭದ್ರಾ ನದಿಯಿಂದ ನೀರೆತ್ತಲು ಅನುಮತಿ ದೊರೆಯಿತು. ಟೆಂಡರ್ ಸಹ ಕರೆಯಲಾಗಿತ್ತು. 2008ರಲ್ಲಿ ಶಾಸಕರಾಗಿದ್ದ ಡಿ.ಎನ್.ಜೀವರಾಜ್ ಸರ್ಕಾರದಿಂದ ₹3.50 ಕೋಟಿ ಮಂಜೂರು ಮಾಡಿಸಿ ದ್ದರು. ಟೆಂಡರ್ ಹಿಡಿದ ಕಂಪನಿ ಭದ್ರಾ ಹಿನ್ನೀರಿನ ಹೆಬ್ಬೆ ದೋಣಿಗಂಡಿ ಹತ್ತಿರ ಪಂಪ್ ಹೌಸ್ ನಿರ್ಮಿಸಿ ಸಂಬಂಧ ಪಟ್ಟ ಪೈಪ್ ಸಹ ತಂದು ಹಾಕಿದ್ದರು. ಆದರೆ, ಭದ್ರಾ ಹಿನ್ನೀರಿನಿಂದ ಓವರ್ ಟ್ಯಾಂಕ್ ಗೆ ಪೈಪ್ ಮೂಲಕ ಹೋಗುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದೆಂದು ಇಲ್ಲಿ ಪೈಪ್ ಹಾಕಲು ಇಲಾಖೆ ತಡೆ ಹಿಡಿಯಿತು. ಅಲ್ಲಿಂದ ಈವರೆಗೂ ಪೈಪ್ ಲೈನ್ ಗೆ ಅರಣ್ಯ ಇಲಾಖೆ ಅನುಮತಿ ನೀಡೇ ಇಲ್ಲ.

ಕಾಲ, ಕಾಲಕ್ಕೆ ತಾಲೂಕು ಬೋರ್ಡಿನ ಮಾಜಿ ಸದಸ್ಯ ಎಸ್.ಎಚ್.ಕೃಷ್ಣಯ್ಯ ಹಾಗೂ ಗ್ರಾಮಸ್ಥರು ಪ್ರಯತ್ನಿಸುತ್ತಾ ಜನಪ್ರತಿನಿಧಿ, ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬಂದಿದ್ದಾರೆ. ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ಮಾತ್ರ ಸ್ಥಗಿತವಾಗಿದೆ. ಯೋಜನೆಗೆ ತಂದಿದ್ದ ಅನೇಕ ಪೈಪ್ ಗಳು ದಿಕ್ಕಾಪಾಲಾಗಿವೆ. ಕೆಲವು ಕಳ ವಾಗಿದೆ. ಕಬ್ಬಿಣದ ಪರಿಕರ ತುಕ್ಕು ಹಿಡಿಯುತ್ತಿದೆ. ಜಾಕ್ ವೆಲ್, ಪಂಪ್ ಹೌಸ್ ಅನಾಥವಾಗಿದೆ. ಈ ವರ್ಷ ಏ. 12 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನರಸಿಂಹರಾಜಪುರಕ್ಕೆ ಬಂದಾಗ ಹೊನ್ನೇಕೊಡಿಗೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಸಿಗದೆ ಅರ್ಧಕ್ಕೆ ನಿಂತ ಬಗ್ಗೆ ಮನವಿ ಅರ್ಪಿಸಿದ್ದಾರೆ.

--- ಬಾಕ್ಸ್ ---

5 ಗ್ರಾಮಗಳ 1200 ಎಕ್ರೆ ನೀರಾವರಿ ಸೌಲಭ್ಯ

ಭದ್ರಾ ನದಿ ಪಕ್ಕದ ಹೆಬ್ಬೆ ದೋಣಿ ಗುಂಡಿ ಹತ್ತಿರ ಜಾಕ್ ವೆಲ್, ಪಂಪ್ ಹೌಸ್ ನಿರ್ಮಿಸಲಾಗಿದೆ. ಅಲ್ಲಿಂದ 1.77 ಹೆಕ್ಟೇರ್ ಅರಣ್ಯ ಜಾಗದಲ್ಲಿ ಪೈಪ್ ಮೂಲಕ ನೀರನ್ನು ಸಾಲೂರು ಗ್ರಾಮದ ಎತ್ತರದ ಜಾಗದಲ್ಲಿ ಓವರ್ ಟ್ಯಾಂಕ್ ಗೆ ತುಂಬಿಸ ಲಾಗು ತ್ತದೆ. ಅಲ್ಲಿಂದ ಗ್ರಾವಿಟಿ ಮೂಲಕ 60 ಕೆರೆಗಳಿಗೆ ನೀರು ತುಂಬಿಸುವುದು ಯೋಜನೆ ಮುಖ್ಯ ಉದ್ದೇಶ. ಇದರಿಂದ ಅಂದಾಜು 5 ಗ್ರಾಮಗಳ 1200 ಎಕರೆ ನೀರಾವರಿಯಾಗಲಿದೆ.

--- ಬಾಕ್ಸ್ ---

48 ವರ್ಷ ಕಳೆದರೂ ಈಡೇರದ ಗ್ರಾಮಸ್ಥರ ಕನಸು: ಗ್ರಾಮವನ್ನು ನೀರಾವರಿ ಮಾಡಬೇಕು ಎಂಬ ಕನಸು ಹೊತ್ತ ತಾಲೂಕು ಬೋರ್ಡಿನ ಮಾಜಿ ಸದಸ್ಯ ಎ.ಎಸ್.ಕೃಷ್ಣಯ್ಯ ಮೊದಲ ಬಾರಿಗೆ ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಗೆ ಮುನ್ನುಡಿ ಬರೆದಿದ್ದರು. 48 ವರ್ಷ ಕಳೆದರೂ ಎ.ಎಸ್. ಕೃಷ್ಣಯ್ಯ ಹಾಗೂ ಗ್ರಾಮಸ್ಥರ ಕನಸು ಈಡೇರಿಲ್ಲ. ಸರ್ಕಾರ ಗ್ರಾಮ ಗಳ ಜನರಿಗೆ ನೀರು ಕೊಡಲು ಕೋಟ್ಯಂತರ ವೆಚ್ಚ ಮಾಡಿ ಯೋಜನೆ ರೂಪಿಸಿದ್ದರೂ ಸರ್ಕಾರದ ಇನ್ನೊಂದು ಭಾಗ ವಾದ ಅರಣ್ಯ ಇಲಾಖೆ ಪೈಪ್ ಲೈನ್‌ಗೆ ಒಪ್ಪಿಗೆ ನೀಡದಿ ರುವುದು ಈಗಿನ ಪ್ರಜಾಪ್ರಭುತ್ವದ ಅಣಕ. ಜನಪ್ರತಿನಿಧಿಗಳು, ಅಧಿಕಾರಿಗಳು ಅರಣ್ಯ ಇಲಾಖೆ ಒಪ್ಪಿಗೆ ಪಡೆದು ಯೋಜನೆ ಪೂರ್ಣಗೊಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

---ಕೋಟ್- --

ನಾನು ಮೊದಲ ಬಾರಿಗೆ 1979 ರಲ್ಲಿ ಹೊನ್ನೇಕೊಡಿಗೆ ಏತ ನೀರಾವರಿಗೆ ಅರ್ಜಿ ಸಲ್ಲಿಸಿದ್ದೆ.1991 ರಲ್ಲಿ ಬಜೆಟ್ ಗೆ ಸೇರಿಸ ಲಾಗಿತ್ತು.1991 ರಲ್ಲಿ ನೀರೆತ್ತಲು ಅನುಮತಿ ಸಿಕ್ಕಿತ್ತು.2008 ರಲ್ಲಿ ಜೀವರಾಜ್ ಶಾಸಕರಾಗಿದ್ದಾಗ ₹3.50 ಕೋಟಿ ಮಂಜೂ ರಾಗಿತ್ತು. ಪಂಪ್ ಹೌಸ್, ಜಾಕ್ ವೆಲ್ ಆಗಿದೆ.ಪೈಪ್ ಬಂದು ಹಲವಾರು ವರ್ಷ ಕಳೆದಿದೆ.ಪೈಪ್ ಹಾಕಲು ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಅರಣ್ಯ ಇಲಾಖೆ ಒಪ್ಪಿಗೆ ನೀಡದೆ ಇರುವುದರಿಂದ ಯೋಜನೆ ನೆನಗುದಿಗೆ ಬಿದ್ದಿದೆ.

- ಎ.ಎಸ್.ಕೃಷ್ಣಯ್ಯ, ತಾಲೂಕು ಬೋಡ್‌ ಮಾಜಿ ಸದಸ್ಯ

-- ಕೋಟ್ ---

ಅರಣ್ಯ ಇಲಾಖೆ ಆಕ್ಷೇಪಣೆ ಸರಿಯಲ್ಲ. ನೀರಾವರಿ ಯೋಜನೆ ರೂಪಿಸುವಾಗ ಸರ್ವೆ ಕಾರ್ಯ ಸರಿಯಾಗಿ ಮಾಡ ಬೇಕಿತ್ತು. ಪೈಪ್ ಲೈನ್ ಹಾಕಿದಾಗ ಅರಣ್ಯ ನಾಶವಾಗುವುದಿಲ್ಲ. ಈಗಾಗಲೇ ಸರ್ಕಾರಕ್ಕೆ ಕೋಟಿಗಟ್ಟಳೆ ಹಣ ಖರ್ಚಾ ಗಿದೆ. ಯಾವುದೇ ಕಾನೂನು ಜನರಿಗೆ ಉಪಯೋಗವಾಗಬೇಕೇ ಹೊರತು ಮಾರಕವಾಗಬಾರದು.ರಸ್ತೆ ಪಕ್ಕದಲ್ಲಿ ಪೈಪ್ ಲೈನ್ ಹಾಕಿಕೊಂಡು ಹೋಗಿ ಯೋಜನೆ ಮುಂದುವರಿಸಬಹುದಿತ್ತು.

- ಮೀನಾಕ್ಷಿ ಕಾಂತರಾಜ್, ತಾಪಂ ಮಾಜಿ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಹವಾಲು ಆಲಿಸಿ ಪರಿಹಾರ ಸೂಚಿಸಿದ ಸಚಿವ ಬಸವಂತಪ್ಪ
ಸುಸ್ಥಿತಿಯ ಕಾಂಪೌಂಡ್ ಕೆಡವಿ, ಮರುನಿರ್ಮಾಣಕ್ಕೆ ತಡೆ