ದಾವಣಗೆರೆ ಎಂಸಿ ಕಾಲನಿ ಬಿ ಬ್ಲಾಕ್‌ನಲ್ಲಿ ಸುಸ್ಥಿಯ ಕಾಂಪೌಂಡ್ ಕೆಡವಿ ಮರು ಕಾಂಪೌಂಡ್ ನಿರ್ಮಾಣದ ನೆಪದಲ್ಲಿ ತೋಟಗಾರಿಕೆ ಇಲಾಖೆಯು ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಯುವ ಮುಖಂಡ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಎಂಸಿ ಕಾಲನಿ ಬಿ ಬ್ಲಾಕ್‌ನಲ್ಲಿ ಸುಸ್ಥಿಯ ಕಾಂಪೌಂಡ್ ಕೆಡವಿ ಮರು ಕಾಂಪೌಂಡ್ ನಿರ್ಮಾಣದ ನೆಪದಲ್ಲಿ ತೋಟಗಾರಿಕೆ ಇಲಾಖೆಯು ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಯುವ ಮುಖಂಡ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಆರೋಪಿಸಿದ್ದಾರೆ.

ನಗರದ ಎಂ.ಸಿ. ಕಾಲನಿ ಬಿ ಬ್ಲಾಕ್‌ನಲ್ಲಿ ಸುಸ್ಥಿತಿಯಲ್ಲಿರುವ ಕಾಂಪೌಂಡ್‌ ಕೆಡವಿ ತೋಟಗಾರಿಕೆ ಇಲಾಖೆ ಹೊಸದಾಗಿ ಕಾಂಪೌಂಡ್ ಮರುನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿಯ ಮುಖಂಡರಾದ ಕೆ.ಪ್ರಸನ್ನಕುಮಾರ, ಸುರೇಶ ಗಂಡುಗಾಳೆ ಇತರರು ಕಾಮಗಾರಿಯನ್ನು ತಡೆದು, ಸುಸ್ಥಿತಿಯಲ್ಲಿದ್ದ ಕಾಂಪೌಂಡ್ ತೆರವು ಕಾಮಗಾರಿ ತಡೆದು ಪ್ರತಿಭಟಿಸಿದರು.

ಇದೇ ವೇಳೆ ಮಾತನಾಡಿದ ಕೆ.ಪ್ರಸನ್ನಕುಮಾರ, ಸುಸ್ಥಿತಿಯ ಕಾಂಪೌಂಡ್ ಕೆಡವಿದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ತೋಟಗಾರಿಕೆ ಸಚಿವರ ನಿವಾಸದ ಕೂಗಳತೆ ದೂರದಲ್ಲಿರುವ ಸುಸ್ಥಿತಿಯ ಕಾಂಪೌಂಡ್‌ನ ಪರಿಸ್ಥಿತಿ ಹೀಗಾದರೆ ಹೇಗೆ? ಗಟ್ಟಿಯಾಗಿದ್ದ ಕಾಂಪೌಂಡನ್ನೇ ಹಾಡಹಗಲೇ ಕೆಡವಿ, ಮರುನಿರ್ಮಾಣ ಮಾಡುವ ನೆಪದಲ್ಲಿ ತೋಟಗಾರಿಕೆ ಅಧಿಕಾರಿಗಳೇನು ಲೂಟಿಗೆ ಇಳಿದಿದ್ದಾರಾ ಎಂದು ಅವರು ಕಿಡಿಕಾರಿದರು.

ಜಿಲ್ಲಾ ಸಚಿವರು ತಮ್ಮದೇ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಸುಸಜ್ಜಿತ ಸೈಜಗಲ್ಲಿನ ಗಟ್ಟಿಮುಟ್ಟಾದ ಕಾಂಪೌಂಡ್ ತೆರವು ಮಾಡುತ್ತಿರುವುದು, ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಇಂತಹ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು. ತೋಟಗಾರಿಕೆ ಅಧಿಕಾರಿಗಳಿಗೆ ಕಾಂಪೌಂಡ್ ಇಲ್ಲದ, ಒತ್ತುವರಿ ಆಗಿರುವ ಪಾರ್ಕ್‌ಗಳು ಕಾಣಲಿಲ್ಲವೇ? ನಿರ್ವಹಣೆ ಇಲ್ಲದ, ಗಿಡಗಳೇ ಇಲ್ಲದ ಪಾಳು ಬಿದ್ದ ಪಾರ್ಕ್‌ಗಳು ಕಾಣಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ತೋಟಗಾರಿಕೆ ಅಧಿಕಾರಿಗಳು ಹಸಿರು ಹೆಚ್ಚಾಗುವ ಕಾಮಗಾರಿ ಕೈಗೊಳ್ಳಬೇಕಿತ್ತು. ಬದಲಾಗಿ ಸಾರ್ವಜನಿಕರ ಹಣವನ್ನು ಹೀಗೆ ಪೋಲು ಮಾಡುತ್ತಿರುವುದು ಖಂಡನೀಯ. ಜಿಲ್ಲಾಸ್ಪತ್ರೆಯ ಕಟ್ಟಡ ದುರಸ್ತಿ, ಒಳಚರಂಡಿ ಸಮಸ್ಯೆ ಕಾಮಗಾರಿ, ರಸ್ತೆ ಗುಂಡಿಗಳನ್ನು ಸರಿಪಡಿಸಲು, ಚರಂಡಿಗಳನ್ನು ನಿರ್ಮಿಸಲು ಅನುದಾನವಿಲ್ಲವೆಂದು ಕೈಚೆಲ್ಲುವ ಅಧಿಕಾರಿಗಳಿಗೆ ಸುಸ್ಥಿತಿಯಲ್ಲಿರುವ, ಗಟ್ಟಿ ಕಾಂಪೌಂಡ್ ಕೆಡವಿ, ಹೊಸ ಕಾಂಪೌಂಡ್ ನಿರ್ಮಿಸಲು ಹಣ ಇರುತ್ತದೆಯಾ? ಹೀಗೆ ಕಾಂಪೌಂಡ್ ಕೆಡವಿದ ಅಧಿಕಾರಿಗಳಿಂದಲೇ ಅಷ್ಟೂ ಹಣ ವಸೂಲು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸುಸ್ಥಿತಿಯ ಕಾಂಪೌಂಡ್ ಕೆಡವುತ್ತಿರುವ ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ಕೋಟ್ಯಂತರ ರು.ಗಳ ಅನುದಾನವನ್ನು ಲೂಟಿ ಹೊಡೆಯುವ ಕಾಮಗಾರಿಗಳಿಗೆ ಬಳಸುವ ಮೂಲಕ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ತಕ್ಷಣವೇ ಕಾಮಗಾರಿಯನ್ನು ತಡೆಹಿಡಿದು, ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು, ಶಿಕ್ಷೆ ವಿಧಿಸಬೇಕು. ಅಗತ್ಯ ಇರುವಲ್ಲಿ ತೋಟಗಾರಿಕೆ ಇಲಾಖೆ ಕಾಮಗಾರಿ ಕೈಗೊಳ್ಳಲಿ ಎಂದು ಕೆ.ಪ್ರಸನ್ನಕುಮಾರ ಒತ್ತಾಯಿಸಿದರು.

ಬಿಜೆಪಿ ಮುಖಂಡ ಸುರೇಶ ಗಂಡುಗಾಳೆ ಮಾತನಾಡಿ, ಸಾರ್ವಜನಿಕರ ದೂರಿಗೆ ಸ್ಪಂದಿಸದ ಜಿಲ್ಲಾಡಳಿತ ಹಾಡಹಗಲೇ ಇಬ್ಬರು ಸಚಿವರು, ಓರ್ವ ಸಂಸದರು, ಓರ್ವ ಶಾಸಕರು ಸಂಚರಿಸುವ ಮುಖ್ಯರಸ್ತೆಯಲ್ಲಿಯೇ ಹೀಗೆ ಅನವಶ್ಯಕವಾಗಿ ಅನುದಾನ ಪೋಲು ಮಾಡುತ್ತಿರುವುದು ಖಂಡನೀಯ. ಸುಸ್ಥಿತಿಯ ಕಾಂಪೌಂಡ್ ತೆರವು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಅಂತಹ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕು. ಇಲ್ಲವಾದರೆ ಇದರ ವಿರುದ್ದ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ಮುಖಂಡರಾದ ಗಣೇಶ ರಾವ್, ಮಂಜುನಾಥ ಸಂಗೀತ, ಕಿರಣ್, ಪದ್ಮನಾಭ ಶೆಟ್ಟಿ, ಲಿಂಗರಾಜ, ಸೋಹನ್, ರಾಘವೇಂದ್ರ ಇತರರು ಇದ್ದರು.