ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುಸಾರ್ವಭೌಮರ 355ನೇ ಆರಾಧಾನಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಸಪ್ತರಾತ್ರೊತ್ಸವದ ನಾಲ್ಕನೇ ದಿನವಾದ ಭಾನುವಾರ ರಾಯರ ಮಧ್ಯಾರಾಧನೆಯನ್ನು ಅತ್ಯಂತ ಸಂಭ್ರಮ, ಸಡಗರದಿಂದ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುಸಾರ್ವಭೌಮರ 355ನೇ ಆರಾಧಾನಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಸಪ್ತರಾತ್ರೊತ್ಸವದ ನಾಲ್ಕನೇ ದಿನವಾದ ಭಾನುವಾರ ರಾಯರ ಮಧ್ಯಾರಾಧನೆಯನ್ನು ಅತ್ಯಂತ ಸಂಭ್ರಮ, ಸಡಗರದಿಂದ ನೆರವೇರಿಸಲಾಯಿತು.ಮಧ್ಯಾರಾಧನೆ ಪ್ರಯುಕ್ತ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಗುರುಸಾರ್ವಭೌಮರ ಮೂಲಬೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ, ಅಲಂಕಾರ, ಪ್ರಹ್ಲಾದ ರಾಜರ ಉತ್ಸವ ಮೂರ್ತಿಯ ಚಿನ್ನದ ರಥೋತ್ಸವ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವೋಪೇತವಾಗಿ ಶ್ರದ್ಧಾ ಭಕ್ತಿ, ಸಂಭ್ರಮ ಸಡಗರದಿಂದ ಜರುಗಿದವು.
ಬೆಳಗ್ಗೆ ನೈರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ, ಪಂಡಿತರಿಂದ ಪ್ರವಚನ, ಗ್ರಂಥಗಳ ಪಾರಾಯಣ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.ಮಧ್ಯಾರಾಧನೆ ಹಿನ್ನೆಲೆಯಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕವನ್ನು ನೆರವೇರಿಸಿದರು. ಹಾಲು, ಮೊಸರು, ತುಪ್ಪ, ಜೇನು, ವಿವಿಧ ಹಣ್ಣುಗಳು, ಗೋಡಂಬಿ, ಒಣದ್ರಾಕ್ಷಿ ಸೇರಿದಂತೆ ಹಲವು ದ್ರವ್ಯಗಳಿಂದ ಮೂಲ ಬೃಂದಾವನಕ್ಕೆ ಶ್ರೀಗಳು ಅಭಿಷೇಕಗೈದು ಮಂಗಳಾರತಿಯನ್ನು ಮಾಡಿದರು. ನಂತರ ಶ್ರೀಮೂಲ ರಘುಪತಿ ವೇದವ್ಯಾಸ ದೇವರಿಗೆ ವಿಶೇಷ ಅಲಂಕಾರ ಪೂಜೆ, ಹಸ್ತೋದಕ ಸಂತರ್ಪಣೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದವನ್ನು ನೆರವೇರಿಸಿದರು.
ಈ ವೇಳೆ, ಮಠದ ಒಳಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಸುವರ್ಣ ರಥದಲ್ಲಿ ರಾಯರ ಚಿನ್ನದ ಪ್ರಭಾವಳಿ, ಪಾದುಕೆ ಹಾಗೂ ಪರಿಮಳ ಗ್ರಂಥವನ್ನಿರಿಸಿ ಮಹಾಮಂಗಳಾರತಿ ಸೇವೆ ಗೈಯ್ಯುವುದರ ಮುಖಾಂತರ ಶ್ರೀಪಾದಂಗಳವರು ರಥೋತ್ಸವಕ್ಕೆ ಚಾಲನೆ ನೀಡಿದರು. ಅಸಂಖ್ಯಾತ ಭಕ್ತರು ಇದರಲ್ಲಿ ಭಾಗವಹಿಸಿದ್ದರು.