ಹಂದ್ರಾಳದಲ್ಲಿ ಮರ್ಯಾದೆ ಹತ್ಯೆ ಯತ್ನ, ಸಹೋದರನಿಂದಲೇ ತಂಗಿ ಮೇಲೆ ಹಲ್ಲೆ

KannadaprabhaNewsNetwork |  
Published : Feb 19, 2026, 02:30 AM IST
18ಕೆಪಿಎಲ್27 ಹಲ್ಲೆಗೊಳಗಾದ ಗರ್ಭಿಣಿ ಮೀನಾಕ್ಷಿ | Kannada Prabha

ಸಾರಾಂಶ

ಎಸ್ಟಿ ಸಮುದಾಯಕ್ಕೆ ಸೇರಿದ ಹಂದ್ರಾಳ ಗ್ರಾಮದ ಯುವಕ ಉದಯ ಮತ್ತು ಕುರುಬ ಸಮುದಾಯಕ್ಕೆ ಸೇರಿದ ಕುಕನೂರು ತಾಲೂಕಿನ ಚಿತ್ತಾಪುರ ಗ್ರಾಮದ ಮೀನಾಕ್ಷಿ ಪರಸ್ಪರ ಪ್ರೀತಿಸುತ್ತಿದ್ದರು

ಕೊಪ್ಪಳ: ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಮರ್ಯಾದೆ ಹತ್ಯೆ ಯತ್ನ ನಡೆದಿದ್ದು, ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದ ತನ್ನ ಗರ್ಭಿಣಿ ಸಹೋದರಿಯನ್ನೇ ಸಾಮೂಹಿಕ ವಿವಾಹದ ಮಂಟಪದಲ್ಲೇ ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಅಮಾನವೀಯ, ಭೀಭತ್ಸ ಘಟನೆ ಬುಧವಾರ ನಡೆದಿದೆ.

ಕೊಡಲಿಯಿಂದ ಕೊಚ್ಚಿದ್ದರಿಂದ ಗಾಯಗೊಂಡಿರುವ ಕುಕನೂರು ತಾಲೂಕಿನ ಚಿತ್ತಾಪುರ ಗ್ರಾಮದ ಮೀನಾಕ್ಷಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಕೊಲ್ಲಲು ಯತ್ನಿಸಿದ ಅವಳ ಸಹೋದರ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಎಸ್ಟಿ ಸಮುದಾಯಕ್ಕೆ ಸೇರಿದ ಹಂದ್ರಾಳ ಗ್ರಾಮದ ಯುವಕ ಉದಯ ಮತ್ತು ಕುರುಬ ಸಮುದಾಯಕ್ಕೆ ಸೇರಿದ ಕುಕನೂರು ತಾಲೂಕಿನ ಚಿತ್ತಾಪುರ ಗ್ರಾಮದ ಮೀನಾಕ್ಷಿ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಮನೆಯಲ್ಲಿ ವಿರೋಧವಿದ್ದ ಕಾರಣ 2024 ಆಗಸ್ಟ್ 28 ರಂದು ವಿವಾಹವಾಗಿ ಯಲಬುರ್ಗಾ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು. ಮನೆಯಲ್ಲಿ ವಿರೋಧ ಇದ್ದಿದ್ದರಿಂದ ಊರು ತೊರೆದು ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದರು.

ಹಂದ್ರಾಳ ಗ್ರಾಮದ ಫಕೀರೇಶ್ವರ ಜಾತ್ರೆಯ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ಮದುವೆಯಲ್ಲಿ ಉದಯ ಸಹೋದರನ ಮದುವೆ ನಿಗದಿಯಾಗಿತ್ತು. ಹೀಗಾಗಿ, ಉದಯ ಮತ್ತು ಮೀನಾಕ್ಷಿ ಕಳೆದೆರಡು ದಿನಗಳ ಹಿಂದೆ ಹಂದ್ರಾಳ ಗ್ರಾಮಕ್ಕೆ ಮದುವೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.

ಈ ವಿಷಯ ತಿಳಿದು ಮೀನಾಕ್ಷಿ ಸಹೋದರ ಮಂಜುನಾಥ ಚಿತ್ತಾಪುರ ಗ್ರಾಮದಿಂದ ಹಂದ್ರಾಳ ಗ್ರಾಮಕ್ಕೆ ಆಗಮಿಸಿ, ಸಾಮೂಹಿಕ ವಿವಾಹ ಮಂಟಪದಲ್ಲೇ ಇದ್ದ ತನ್ನ ಸಹೋದರಿ ಮೀನಾಕ್ಷಿಯ ಮೇಲೆ ಏಕಾಏಕಿ ಕೊಡಲಿಯಿಂದ ದಾಳಿ ಮಾಡಿದ್ದಾನೆ. ಅವಳ ಕೈ ಮತ್ತು ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ. ಸಹೋದರನ ಅನರಿಕ್ಷಿತ, ಆಕಸ್ಮಿಕ ದಾಳಿಯಿಂದ ಕಂಗಾಲಾದ ಮೀನಾಕ್ಷಿ ಮದುವೆ ಮಂಟಪದಲ್ಲಿ ಓಡಿ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ತಕ್ಷಣ ಅಲ್ಲಿದ್ದವರು ಅವಳಿಗೆ ಸ್ಥಳೀಯವಾಗಿ ತುರ್ತು ಚಿಕಿತ್ಸೆ ನೀಡಿ ಬಳಿಕ ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದು, ಮೀನಾಕ್ಷಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ಸ್ಥಳಕ್ಕೆ ಎಸ್ಪಿ ಭೇಟಿ:ಘಟನೆಯ ಮಾಹಿತಿ ತಿಳಿದ ತಕ್ಷಣ ಎಸ್ಪಿ ಡಾ.ರಾಮ ಎಲ್ ಅರಸಿದ್ದಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ವರ್ಷದ ಹಿಂದೆ ಮದುವೆಯಾಗಿದ್ದ ಉದಯ ಮತ್ತು ಮೀನಾಕ್ಷಿ ಪೈಕಿ ಮೀನಾಕ್ಷಿಯ ಮೇಲೆ ಅವರ ಸ್ವಂತ ಸಹೋದರನೇ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡಿರುವ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಯೇ ಜಾತ್ರೆಯ ಬಂದೋಬಸ್ತ್ ನಲ್ಲಿದ್ದರಿಂದ ರಕ್ಷಣೆ ಮಾಡಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಹಲ್ಲೆ ಮಾಡಿದ ಮಂಜುನಾಥನನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಹಲ್ಲೆಗೊಳಗಾದವರು ಈಗಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೂರನ್ನಾಧರಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಳವಂಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಗಿರಿ ಕ್ಷೇತ್ರದಲ್ಲಿ ಸಚಿವರಿಂದ ಅಟ್ರಾಸಿಟಿ ಕೇಸ್ ಭಾಗ್ಯ
ಸರ್ವರಲ್ಲೂ ಸಮಾನ ಮನೋಭಾವ ಹೊಂದಿದ್ದ ಶಾಂತವೀರ ಪಟ್ಟಾಧ್ಯಕ್ಷರು: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ