ಬಳ್ಳಾರಿ: ಲೋಹಿಯಾ ಪ್ರಕಾಶನದ ಮುಖ್ಯಸ್ಥ ಹಾಗೂ ಸಮಾಜಮುಖಿ ಚಿಂತಕ ಸಿ. ಚನ್ನಬಸವಣ್ಣ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ. ಹೆನ್ರಿ ಡಿಸೋಜಾ ಹಾಗೂ ಕಲೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಗೀತಾ ನಾಗಪಾಲ್ ಅವರಿಗೆ ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೆಟ್ ಪದವಿ ಘೋಷಿಸಿದೆ.
ಲೋಹಿಯಾ ಚನ್ನಬಸವಣ್ಣ: ಕನ್ನಡ ಸಾಹಿತ್ಯ, ಪ್ರಕಾಶನ ಮತ್ತು ಹೋರಾಟದ ಕೊಂಡಿಯಂತಿರುವ ಸಿ. ಚನ್ನಬಸವಣ್ಣನವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ 1949ರಲ್ಲಿ ಜನಿಸಿದ್ದು ಇವರು ಲೋಹಿಯಾ ಚನ್ನಬಸವಣ್ಣ ಎಂದೇ ಜನಪ್ರಿಯರು. ಸಾಹಿತ್ಯ, ಪ್ರಕಾಶನ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಅವರು, ಬಳ್ಳಾರಿಯಲ್ಲಿ ಲೋಹಿಯಾ ಪ್ರಕಾಶನ ಸ್ಥಾಪಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಪ್ರಕಾಶನದ ಮೂಲಕ ಸುಮಾರು 200 ಕನ್ನಡ ಪುಸ್ತಕ ಪ್ರಕಟಿಸಿದ್ದು, ಹಲವು ಕೃತಿಗಳು ಕೇಂದ್ರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿವೆ.
1980ರ ಗೋಕಾಕ ಚಳವಳಿ, ಜಾತಿ ವಿನಾಶ ಹೋರಾಟ, ಬಂಡಾಯ ಸಾಹಿತ್ಯ ಚಳವಳಿ ಸೇರಿದಂತೆ ಕನ್ನಡಪರ ಹಾಗೂ ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಕೇವಲ ಅಭಿವ್ಯಕ್ತಿಯ ಮಾಧ್ಯಮವಾಗಿ ನೋಡದೆ, ಸಾಮಾಜಿಕ ಪರಿವರ್ತನೆಯ ಸಾಧನವನ್ನಾಗಿ ಬಳಸಿಕೊಂಡಿರುವುದು ಇವರ ವಿಶೇಷತೆ. ಪರಿಸರ ಸಂರಕ್ಷಣೆ ಮತ್ತು ಸಮಾಜಮುಖಿ ಚಟುವಟಿಕೆಯಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. 2026ರ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ಸಾಹಿತ್ಯ, ಪ್ರಕಾಶನ ಮತ್ತು ಸಾಮಾಜಿಕ ಹೋರಾಟದ ಕ್ಷೇತ್ರಗಳಲ್ಲಿನ ಸುದೀರ್ಘ ಸೇವೆಗಾಗಿ ಬಳ್ಳಾರಿ ವಿವಿ ಗೌರವ ಡಾಕ್ಟರೆಟ್ ನೀಡಿದೆ.ಡಾ. ಹೆನ್ರಿ ಡಿಸೋಜಾ: ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ 1949ರಲ್ಲಿ ಜನಿಸಿದ ಡಾ. ಹೆನ್ರಿ ಡಿಸೋಜಾ ಕ್ರೈಸ್ತ ಧರ್ಮಗುರುವಾಗಿ ತಮ್ಮ ಸೇವಾ ಪಯಣ ಆರಂಭಿಸಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಸೇವೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ಗೀತಾ ನಾಗಪಾಲ್: 1959ರ ಆಗಸ್ಟ್ 27ರಂದು ಬೆಂಗಳೂರಿನಲ್ಲಿ ಜನಿಸಿದ ಗೀತಾ ನಾಗಪಾಲ್ ಶಿಕ್ಷಣ, ಕಲೆ, ಪರಿಸರ ಸಂರಕ್ಷಣೆ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 1985ರಲ್ಲಿ ಸ್ಥಾಪನೆಯಾದ ಕೃಪಾನಿಧಿ ಶಿಕ್ಷಣ ಸಂಸ್ಥೆಗಳ ಸಮೂಹದ ಸಹಸಂಸ್ಥಾಪಕರು ಹಾಗೂ ಉಪಾಧ್ಯಕ್ಷರಾಗಿರುವ ಅವರು, ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.