ಶಿವಮೊಗ್ಗ: ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಸಾಧಕ ಶಿಕ್ಷಕರನ್ನು ನನ್ನ ತವರು ಜಿಲ್ಲೆಯಲ್ಲಿ ಗುರುತಿಸಿ, ಗೌರವಿಸುವುದು ಶಿಕ್ಷಣ ಸಚಿವನಾಗಿ ನನಗೆ ಹೆಮ್ಮೆಯೆನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ನಗರದ ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರು ಸಹಯೋಗ 2022-23 ಮತ್ತು 2023-24ನೇ ಸಾಲಿನ 10ನೇ ತರಗತಿಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಗುವೂ ಕಲಿಕೆಯಿಂದ ಹಿಂದುಳಿಯದಂತೆ ಹಾಗೂ ಭಯ ಮತ್ತು ಒತ್ತಡಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಮಗು ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಕಾಲಕಾಲಕ್ಕೆ ಪೋಷಕರ ಸಭೆ ನಡೆಸಿ, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪೂರಕ ವಾತಾವರಣ ಕಲ್ಪಿಸುವಂತೆ ಪ್ರೇರೇಪಿಸಬೇಕು. ಕಲಿಕೆಯಿಂದ ಹಿಂದುಳಿದ ಮಕ್ಕಳ ಮನೆಗೆ ಶಿಕ್ಷಕರು ತೆರಳಿ ಅಗತ್ಯ ಮಾರ್ಗದರ್ಶನ ನೀಡುವಂತೆ ಅವರು ಸಲಹೆ ನೀಡಿದ ಅವರು ಶಿಕ್ಷಕರ ಪ್ರಾಮಾಣಿಕ ಸೇವೆ ಫಲಪ್ರದವಾಗಲಿದೆ ಎಂದರು. ಇದೇ ವೇಳೆ ಸಾಧಕ ಶಿಕ್ಷಕರನ್ನು ಗುರುತಿಸಿ, 25,000 ರು.ಗಳ ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಆರ್.ಪ್ರಸನ್ನಕುಮಾರ್, ರವಿಕುಮಾರ್, ಮಧು, ದೇವಿಪ್ರಸಾದ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ, ಡಯಟ್ ಪ್ರಾಂಶುಪಾಲ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.12000 ಶಿಕ್ಷಕರ ನೇಮಕಾತಿಗೆ ಕ್ರಮ
ಮುಂದಿನ ಶೈಕ್ಷಣಿಕ ಸಾಲಿನ ಆರಂಭದೊಳಗಾಗಿ ಕೊರತೆ ಇರುವ 12000 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಜ್ಯದಲ್ಲಿ 2026ರ ಜನವರಿ ಮಾಸಾಂತ್ಯದೊಳಗಾಗಿ 900 ಕೆಪಿಎಸ್ ಶಾಲೆಗಳ ಆರಂಭಕ್ಕೆ ಮುನ್ನುಡಿ ಬರೆಯಲಾಗುವುದು. ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿ ಸರ್ಕಾರಿ ಮತ್ತು ಅನುದಾನಿತ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ನೋಟ್‌ಪುಸ್ತಕ, ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಶೂ, ಸಾಕ್ಸ್, ಹಾಲು, ಮೊಟ್ಟೆ ಸೇರಿದಂತೆ ನೀಡಲಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪದವಿಪೂರ್ವ ಶಿಕ್ಷಣದವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.ಗುಣಾತ್ಮಕ ಶಿಕ್ಷಣ, ರಚನಾತ್ಮಕ ಕಲಿಕಾ ತರಗತಿಗಳನ್ನು ನಡೆಸಲು ಸಹಕಾರಿಯಾಗುವಂತೆ ಪ್ರತಿ ಶಾಲೆಗಳಲ್ಲಿ ಆಡಳಿತ ಮಂಡಳಿ ರಚನೆಯಂತಹ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಶಾಲೆಗಳ ನೋಂದಣಿ, ನವೀಕರಣ ಪ್ರಕ್ರಿಯೆಯನ್ನು ಇನ್ನಷ್ಟು ಸರಳೀಕರಣಗೊಳಿಸಲು ಸದನ ಸಮಿತಿ ರಚಿಸಲು ಸೂಚಿಸಲಾಗಿದೆ ಎಂದರು.