ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಜಿಲ್ಲೆಯ ಮೊದಲಿಗರಾಗಿ ಆಯ್ಕೆಯಾಗಿರುವ ಟಿ.ಎನ್.ಮಧುಕರ್ ಅವರನ್ನು ಹಿಂದುಳಿದ ವರ್ಗಗಳ ಒಕ್ಕೂಟ ಅಭಿನಂದಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತುಮಕೂರಿನಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ ತುಮಕೂರುಸೇವಾ ಸಾಧಕರು, ಉನ್ನತ ಸ್ಥಾನಮಾನ ಪಡೆದವರನ್ನು ಗೌರವಿಸುವುದು ಸಮಾಜದ ಸತ್ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಜಿಲ್ಲೆಯ ಮೊದಲಿಗರಾಗಿ ಆಯ್ಕೆಯಾಗಿರುವ ಟಿ.ಎನ್.ಮಧುಕರ್ ಅವರನ್ನು ಹಿಂದುಳಿದ ವರ್ಗಗಳ ಒಕ್ಕೂಟ ಅಭಿನಂದಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ಕನ್ನಡ ಭವನದಲ್ಲಿ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್. ಮಧುಕರ್ ಅವರಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ಮಧುಕರ್ ಅವರು ತಮ್ಮ ಶ್ರಮ, ಇಚ್ಛಾಶಕ್ತಿಯಿಂದ ಈ ಸ್ಥಾನಕ್ಕೆ ಏರಿದ್ದಾರೆ. ಇವರ ಮೂಲಕ ಚೆಸ್ ಮತ್ತಷ್ಟು ಬೆಳೆಯಲಿ, ಹೆಚ್ಚು ಜನ ಚೆಸ್ ಆಟದಲ್ಲಿ ತೊಡಗಿಕೊಳ್ಳಲಿ, ಮಧುಕರ್ ಆವರ ಎಲ್ಲಾ ಆಶಯಗಳು ಈಡೇರಲಿ ಎಂದು ಹಾರೈಸಿದರು.ಮಧುಕರ್ ಅವರು ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವುದು ತುಮಕೂರಿಗೆ ಹೆಮ್ಮೆ, ತುಮಕೂರು ಜನ ಹೆಮ್ಮೆ ಪಡುವ ವಿಚಾರ. ಇಂತಹವರನ್ನು ಸಮಾಜದ ಎಲ್ಲ ವರ್ಗದವರೂ ಅಭಿನಂದಿಸಬೇಕು. ಇವರಿಂದ ಸಮಾಜಕ್ಕೆ ಮತ್ತಷ್ಟು ಕೊಡುಗೆ ದೊರೆಯಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಮನಸ್ಸಿನ ಏಕಾಗ್ರತೆ ಸಾಧಿಸಲು ಚೆಸ್ ಸಹಕಾರಿ, ಬುದ್ಧಿವಂತರ ಆಟ ಎಂದು ಹೆಸರಾದ ಚೆಸ್ ಬಗ್ಗೆ ಆಸಕ್ತರಿಗೆ ಅವಕಾಶ ಸಿಕ್ಕರೆ ಅವರೂ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗುತ್ತದೆ. ಹಿಂದುಳಿದವರು ಮೇಲೆ ಬಂದರೆ ಸಮಾಜದ ಸುಧಾರಣೆ ಸಾಧ್ಯ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಕ್ರಾಂತಿಕಾರಿಕ ಕಾರ್ಯಕ್ರಮಗಳು ಎಲ್ಲಾ ವರ್ಗಗಳ ಹಿಂದುಳಿದವರಿಗೆ ಹೆಚ್ಚು ಪ್ರಯೋಜನವಾಯಿತು ಎಂದರು.ಜಾತ್ಯಾತೀತ ಮಾನವ ವೇದಿಕೆ ಅಧ್ಯಕ್ಷ ಟಿ.ಆರ್.ಆಂಜನಪ್ಪ ಮಾತನಾಡಿ, ರಾಜಮಹಾರಾಜರ ಕಾಲದ ಚದುರಂಗ ಆಟವು ಹೆಸರು, ನಿಯಮ ಬದಲಾವಣೆಗಳೊಂದಿಗೆ ಇಂದು ಚೆಸ್ ಆಗಿ ಹೆಸರಾಗಿದೆ ಎಂದರು.ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಕೆಲ ವರ್ಷಗಳ ಹಿಂದೆ ತುಮಕೂರಿನಲ್ಲಿ ಆಯೋಜಿಸಿದ್ದ 7 ವರ್ಷದೊಳಗಿನ ಮಕ್ಕಳ ರಾಷ್ಟ್ರೀಯ ಚೆಸ್ ಟೂರ್ನಿ ಯಶಸ್ವಿಯಾಯಿತು. ಇದು ಮುಂದಿನ ಪಂದ್ಯಾವಳಿಗಳ ಆಯೋಜನೆಗೆ ಪ್ರೇರಣೆಯಾಯಿತು. ಚೆಸ್ ಬುದ್ಧಿ ಸಾಮರ್ಥ್ಯ ಹಚ್ಚಿಸುವ ಚೆಸ್ ಆಟ. ಏಕಾಗ್ರತೆ ಜೊತೆಗೆ ಶಿಸ್ತು, ಶ್ರದ್ಧೆ ಕಲಿಸಿ ಜೀವನದಲ್ಲಿ ಸ್ಪಷ್ಟ ಹೆಜ್ಜೆ ಇಟ್ಟು ಉತ್ತಮ ಬದುಕು ರೂಪಿಸಿಕೊಳ್ಳಲೂ ಸಹಕಾರಿಯಾಗುತ್ತದೆ ಎಂದು ಹೇಳಿದರು. ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್ ಮಾತನಾಡಿ, ಚೆಸ್ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು. ತುಮಕೂರಿನಲ್ಲಿ ಚೆಸ್ ಅಸೋಸಿಯೇಷನ್ ಸ್ಥಾಪನೆ ಕುರಿತು ಹೇಳಿದರು. ತುಮಕೂರಿನಲ್ಲಿ ರಾಷ್ಟ್ರಮಟ್ಟದ ವಿಕಲಚೇತನರ, ಅಂಧರ, ಮಕ್ಕಳ ಚೆಸ್ ಟೂರ್ನಿಮೆಂಟ್ ಆಯೋಜನೆ ಮಾಡಿದ್ದು ಅದರ ಯಶಸ್ವು ದೇಶಾದ್ಯಂತ ದೊರೆತ ಮೆಚ್ಚುಗೆ ಕುರಿತು ಹೇಳಿದರು. ಇದರೊಂದಿಗೆ ತುಮಕೂರಿನಲ್ಲೂ ಚೆಸ್ ಬಗ್ಗೆ ಜನರಲ್ಲಿ ಹೆಚ್ಚು ಆಸಕ್ತಿ ಬೆಳೆಯತೊಡಗಿತು ಎಂದರು.ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಹಿರಿಯ ಕಲಾವಿದ , ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರದೀಪ್‌ಕುಮಾರ್, ಮುಂಡರಾದ ಮಂಜುನಾಥ್‌ಜೈನ್, ಮಾಧುರಿ ಮಂಜುನಾಥ್ ಜೈನ್, ವಿನಯ್‌ಕುಮಾರ್, ಮೈಲಪ್ಪ, ಡಾ.ಕೆ.ವಿ.ಕೃಷ್ಣಮೂರ್ತಿ, ಮಲ್ಲಸಂದ್ರ ಶಿವಣ್ಣ, ಒಕ್ಕೂಟದ ಉಪಾಧ್ಯಕ್ಷರಾದ ಪಿ.ಮೂರ್ತಿ, ಡಿ.ಎಂ.ಸತೀಶ್, ಪ್ರಧಾನ ಕಾರ್ಯದರ್ಶಿ ಹೆಬ್ಬೂರು ಶ್ರೀನಿವಾಸಮೂರ್ತಿ, ಖಜಾಂಚಿ ಎಂ.ಕೆ.ವೆಂಕಟಸ್ವಾಮಿ, ನಿದೇಶಕರಾದ ಶಾಂತಕುಮಾರ್, ಎಸ್.ಹರೀಶ್ ಆಚಾರ್ಯ, ಮಂಜೇಶ್ ಒಲಂಪಿಕ್, ಲಕ್ಷ್ಮೀಕಾಂತರಾಜೇ ಅರಸು, ಗುರುರಾಘವೇಂದ್ರ, ತೇಜಸ್, ರಾಜೇಶ್ ದೊಡ್ಡಮನೆ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.