ಮಂಗಳೂರು: ಚೀನಾದ ಶಾಂಗ್ಲೋದಲ್ಲಿ ಡಿ.3ರಿಂದ 13ರವರೆಗೆ ನಡೆದ ವಿಶ್ವ ಶಾಲಾ ಮಕ್ಕಳ 15 ವರ್ಷದೊಳಗಿನ ವಯೋಮಿತಿಯ ವಾಲಿಬಾಲ್ ಪಂದ್ಯಾಟದಲ್ಲಿ ಭಾರತದ ಬಾಲಕಿಯರ ತಂಡ ಭಾಗವಹಿಸಿದ್ದು, ಈ ತಂಡಕ್ಕೆ ಕಾರ್ಕಳ ಕ್ರೈಸ್ತ ಕಿಂಗ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ನಾಯಕಿಯಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ಅವರ ಈ ಕ್ರೀಡಾ ಸಾಧನೆಯನ್ನು ಗುರುತಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಸೋಮವಾರ ಬ್ಯಾಂಕಿನಲ್ಲಿ ಸನ್ಮಾನಿಸಿದರು.
ಡಾ.ಎಂ.ಎನ್. ರಾಜೇಂದ್ರ ಕುಮಾರ್ ಈ ಸಂದರ್ಭ ಮಾತನಾಡಿ, ಶಗುನ್ ಎಸ್. ವರ್ಮ ಹೆಗ್ಡೆ ಅವರು ಕಾರ್ಕಳದ ನಿವಾಸಿಗಳಾದ ಶೃತಿರಾಜ್ ಮತ್ತು ಸಂದೇಶ್ ವರ್ಮ ದಂಪತಿ ಪುತ್ರಿಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೇರಿದ ಮಹಾನ್ ಸಾಧಕಿ. ಪ್ರತಿಭಾನ್ವಿತ ಆಟಗಾರ್ತಿ ಆಗಿರುವ ಶಗುನ್ ಇವರು ವಿಶ್ವ ಶಾಲಾ ಮಕ್ಕಳ ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ 12 ಆಟಗಾರ್ತಿಯರಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ. ಮಾತ್ರವಲ್ಲ ತಂಡದ ನಾಯಕಿ ಅಗಿಯೂ ಉತ್ತಮ ಪ್ರದರ್ಶನವನ್ನು ನೀಡಿರುವುದು ನಮ್ಮ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಚಾರ. ಅವರ ಕ್ರೀಡಾ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟೂ ಪ್ರಜ್ವಲಮಾನವಾಗಿ ಬೆಳಗಿ, ಹಲವಾರು ಪ್ರಶಸ್ತಿಗಳು ಅವರ ಕ್ರೀಡಾ ಸಾಧನೆಗೆ ಲಭಿಸಲಿ ಎಂದು ಶುಭ ಹಾರೈಸಿದರು.
ಶಗುನ್‌ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ 1 ಲಕ್ಷ :ಶಗುನ್ ಎಸ್. ವರ್ಮ ಹೆಗ್ಡೆ ಅವರನ್ನು ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಶಾಲು, ಫಲಪುಷ್ಪ, ಹಾರ, ಬೆಳ್ಳಿಯ ಸ್ಮರಣಿಕೆಯೊಂದಿಗೆ 1 ಲಕ್ಷ ರು. ಚೆಕ್ ನೀಡಿ ಗೌರವಿಸಿದರು.