ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳ ಹಿನ್ನಲೆಯಲ್ಲಿ ಈ ವರ್ಷ ಒಟ್ಟು 895 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ 521 ಮಂದಿ ಹಿಂದೂಗಳಾಗಿದ್ದರೆ, 351 ಮಂದಿ ಮುಸ್ಲಿಮರು, 23 ಮಂದಿ ಇತರರು ಸೇರಿದ್ದಾರೆ.
ಈ ವರ್ಷ ಬಂಧಿತರಲ್ಲಿ ಹಿಂದೂ ರೌಡಿ ಶೀಟರ್‌ಗಳು 474 ಮಂದಿ ಇದ್ದರೆ, ಮುಸ್ಲಿಂ ಸಮುದಾಯದ ರೌಡಿಶೀಟರ್‌ಗಳು 321. ಇತರರು 12 ರೌಡಿ ಶೀಟರ್‌ಗಳನ್ನು ಬಂಧಿಸಲಾಗಿದೆ.
ಬಾಂಡ್ ಉಲ್ಲಂಘನೆ ಪ್ರಕರಣಗಳಲ್ಲಿ 39 ಮಂದಿ ಹಿಂದೂಗಳು ಜಾಮೀನು ಇರಿಸಿದ್ದ 7,40,000 ರು., 13 ಮಂದಿ ಮುಸ್ಲಿಮರು ಇರಿಸಿದ್ದ 2,40,000 ರು. ಮತ್ತು ಇತರ ಇಬ್ಬರ 35,000 ರು. ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಶಾಂತಿ ಉಲ್ಲಂಘನೆ ಅಥವಾ ದ್ವೇಷ ಭಾಷಣಗಳ ನಿರೀಕ್ಷೆಯ ಹಿನ್ನೆಲೆಯಲ್ಲಿ ಬಜರಂಗದಳ, ವಿಎಚ್‌ಪಿ ಸಂಘಟನೆಯ ಬಜಪೆ ಶಾರದೋತ್ಸವ ಮೆರವಣಿಗೆಗೆ ಇಬ್ಬರು ವ್ಯಕ್ತಿಗಳನ್ನು ಜಾಮೀನು ಮಾಡಿ 2 ಲಕ್ಷ ರು. ಬಾಂಡ್ ಪಡೆದುಕೊಳ್ಳಲಾಗಿದೆ. ಎಸ್‌ಡಿಪಿಐ ಪ್ರತಿಭಟನೆ ಸಂದರ್ಭವೂ ಇಬ್ಬರು ವ್ಯಕ್ತಿಗಳ ಜಾಮೀನು ಮಾಡಿ 2 ಲಕ್ಷ ರು. ಬಾಂಡ್ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಬಾಂಡ್‌ಗಳಲ್ಲಿ ಹೆಚ್ಚಿನವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಮತ್ತು ಇನ್ನೂ ಕೆಲವು ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ. ಅಪರಾಧದಲ್ಲಿ ಕ್ರಮವನ್ನು ಸಮತೋಲನಗೊಳಿಸುವುದು ಪೊಲೀಸರ ಕೈಯಲ್ಲಿಲ್ಲ. ಅದು ಆ ಸಮುದಾಯದ ಜನರ ಕೈಯಲ್ಲಿದೆ. ಅವರು ಯಾವುದೇ ಅಪರಾಧಗಳನ್ನು ಮಾಡದಿದ್ದರೆ, ಅವರ ಅಂಕಿ ಅಂಶಗಳು ಕಡಿಮೆ ಇರುತ್ತವೆ. ಅದೇ ರೀತಿ ಪೊಲೀಸ್ ಕ್ರಮವೂ ಇರುತ್ತದೆ ಎಂದು ಕಮಿಷನರ್ ಹೇಳಿದ್ದಾರೆ.