ಮಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಕರಾಯ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಿತು.
ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಕೆ. ಚಂದ್ರಶೇಖರ ಭಟ್ ಅವರು ಕರು ಸಾಕಣೆಯ ಕುರಿತು ಮಾಹಿತಿ ನೀಡಿದರು. ಕ.ಹಾ.ಮ.ದ ನಿರ್ದೇಶಕ ಡಾ. ಬಸವರಾಜ್ ಮಾತನಾಡಿ, ದ.ಕ. ಹಾಲು ಒಕ್ಕೂಟವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಲಾಭದಾಯಕವಾಗಿ ವ್ಯವಹರಿಸುತ್ತಿದೆ ಎಂದು ಶ್ಲಾಘಿಸಿದರು. ರಾಜ್ಯದ ಎಲ್ಲ ಹಾಲು ಒಕ್ಕೂಟಗಳ ಪೈಕಿ ರೈತರಿಗೆ ಅತಿ ಹೆಚ್ಚಿನ ದರವನ್ನು ದ.ಕ. ಹಾಲು ಒಕ್ಕೂಟ ನೀಡುತ್ತಿದೆ ಎಂದರು.
ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ಒಕ್ಕೂಟದ ವ್ಯವಸ್ಥಾಪಕ ನೀರ್ದೇಶಕ ವಿವೇಕ್ ಡಿ, ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರತಿನಿಧಿ ಮನೋಜ್ ಮಿನೆಜಸ್ ಸಾಂದರ್ಭಿಕವಾಗಿ ಮಾತನಾಡಿದರು.ಒಕ್ಕೂಟದ ನಿರ್ದೇಶಕರಾದ ಜಯರಾಮ ರೈ ಬಳಜ್ಜ, ಸವಿತಾ ಶೆಟ್ಟಿ, ಪ್ರಭಾಕರ ಆರಂಬೋಡಿ, ನಂದರಾಮ ರೈ, ಭರತ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ, ತಣ್ಣೀರುಪಂತ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹೇಮಾವತಿ ಚಂದ್ರಶೇಖರ್, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತಕೃಷ್ಣ ಕೆ., ತಣ್ಣೀರುಪಂತ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಜ್ ಹೆಗ್ಡೆ ಇದ್ದರು.
ಒಕ್ಕೂಟದ ವ್ಯವಸ್ಥಾಪಕ ಡಾ. ರವಿರಾಜ ಉಡುಪ ಸ್ವಾಗತಿಸಿದರು. ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ವಂದಿಸಿದರು. ವಿಸ್ತರಣಾಧಿಕಾರಿ ಮಾಲತಿ ಕಾರ್ಯಕ್ರಮ ನಿರ್ವಹಿಸಿದರು. ಹೆಣ್ಣು ಕರುಗಳ ಪ್ರದರ್ಶನದಲ್ಲಿ ದ.ಕ. ಜಿಲ್ಲೆಯ ವಿವಿಧ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯ ರೈತರು ಒಟ್ಟು 150ಕ್ಕೂ ಮಿಕ್ಕಿ ಕರುಗಳನ್ನು ತಂದ್ದರು. ಜರ್ಸಿ, ಎಚ್.ಎಫ್, ದೇಸೀ ತಳಿ ಮತ್ತು ಎಮ್ಮೆ ಕರುಗಳ ವಿಭಾಗದಲ್ಲಿ ವಿವಿಧ ವಯೋ ಗುಂಪುಗಳಲ್ಲಿ ಸ್ಪರ್ಧೆ ನಡೆದು ವಿಜೇತರಿಗೆ ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲ ಕರುಗಳಿಗೆ ಬಕೆಟ್ ಮತ್ತು ನಂದಿನಿ ಪಶು ಆಹಾರಗಳನ್ನು ಪ್ರೋತ್ಸಾಹಕ ಬಹುಮಾನವಾಗಿ ಕೊಡಲಾಯಿತು.ಗೋವು ಮೇವು ಮೊಬೈಲ್ ಆಪ್ವೈಜ್ಞಾನಿಕವಾಗಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ರಾಸುಗಳಿಗೆ ಪೋಷಕಾಂಶಗಳು ದೊರಕುವಂತಾಗಲು ಯಾವ ಆಹಾರ ವಸ್ತುಗಳನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎನ್ನುವುದನ್ನು ತಿಳಿಯಲು ಅನುಕೂಲವಾಗುವಂತೆ ಬಳಕೆ ಸ್ನೇಹಿಯಾಗಿರುವ ಸರಳ ಮೊಬೈಲ್ ಆಪ್‌ನ್ನು ಅಭಿವೃದ್ಧಿಪಡಿಸಲಾಗಿದೆ.
ರೈತರು ಪ್ರಸ್ತುತ ನೀಡುತ್ತಿರುವ ಆಹಾರ ವಸ್ತುಗಳು ಮತ್ತು ಅವುಗಳ ಪ್ರಮಾಣಗಳನ್ನು ಆಪ್‌ನಲ್ಲಿ ನಮೂದಿಸಿದಾಗ ಅವುಗಳಿಂದ ರಾಸುಗಳಿಗೆ ಯಾವ ಪೋಷಕಾಂಶಗಳು ಎಷ್ಟು ಪ್ರಮಾಣದಲ್ಲಿ ಲಭಿಸುತ್ತವೆ ಎಂಬುದನ್ನು ಆಪ್ ತಿಳಿಸುತ್ತದೆ. ಕೊರತೆ ಇದ್ದಲ್ಲಿ ಯಾವ ಆಹಾರ ವಸ್ತುಗಳನ್ನು ಎಷ್ಟು ಪ್ರಮಾಣದಲ್ಲಿ ಪೂರೈಸಿದರೆ ಸರಿದೂಗಿಸಬಹುದು ಇತ್ಯಾದಿ ಮಾಹಿತಿಗಳನ್ನು ಆಪ್ ನೀಡುತ್ತದೆ. ಇದನ್ನು ರೈತರು ಅನುಸರಿಸಿದರೆ ರಾಸುಗಳ ಆರೋಗ್ಯ ವೃದ್ಧಿ, ಹಾಲಿನ ಇಳುವರಿ ಮತ್ತು ಗುಣಮಟ್ಟ ಹೆಚ್ಚಳ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳ ನಿವಾರಣೆಯಾಗಲಿದೆ.