ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಅಸೂಚನೆ ಹೊರಡಿಸಿದ್ದು, ಡಿ.22 ರಿಂದ ನೋಂದಣಿಯೂ ಆರಂಭವಾಗಿದೆ. ಇದೇ ಮೊದಲ ಸಲ ಈ ರೀತಿ ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಬಿಡ್ದಾರರಿಗೆ ಜನವರಿ 2 ರಂದು ಬಾಗಲಕೋಟೆ ಜಿಲ್ಲಾಡಳಿತ ಭವನದ ಸಭಾಭವನದಲ್ಲಿ ಒಂದು ದಿನದ ತರಬೇತಿ ನಡೆಯಲಿದೆ. ಹಾಗೆಯೇ ಜಿಲ್ಲೆಯ 8 ಬಾರ್ ಲೈಸನ್ಸ್‌ಗಳಿಗೆ ಜನವರಿ 16 ರಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೂ ಆನ್‌ಲೈನ್‌ನಲ್ಲಿ ಬಿಡ್ಡಿಂಗ್ ನಡೆಯಲಿದೆ ಎಂದರು.ಬಾರ್‌ಲೈಸೆನ್ಸ್‌ಗಳಿಗೆ ಈಗಾಗಲೇ ಸರ್ಕಾರ ನಿಗದಿತ ಮೊತ್ತವನ್ನು ನಿಗದಿ ಪಡಿಸಿದ್ದು, ಬೀಳಗಿ ತಾಲೂಕಿನ ಒಂದು ಲೈಸೆನ್ಸ್ ₹70 ಲಕ್ಷ ನಿಗದಿ ಪಡಿಸಿದ್ದು, ಬಾದಾಮಿಯ ಎರಡು ಬಾರ್‌ಗಳಿಗೆ ₹80 ಲಕ್ಷ ಹಾಗೂ ಬಾಗಲಕೋಟೆ 1, ಹುನಗುಂದ 2, ಜಮಖಂಡಿ ಮತ್ತು ಮುಧೋಳ ತಲಾ ಒಂದು ಬಾರ್‌ಗಳಿಗೆ ₹90 ಲಕ್ಷ ಮೊತ್ತವನ್ನು ನಿಗದಿ ಪಡಿಸಲಾಗಿದೆ. ಹರಾಜು ಕೂಗುವವರು ಇದಕ್ಕಿಂತ ಹೆಚ್ಚು ಮೊತ್ತವನ್ನು ಬಿಡ್ ಮಾಡಬೇಕು. ಕನಿಷ್ಠ ₹2 ಲಕ್ಷ ಹೆಚ್ಚಿಗೆ ನಮೂದು ಮಾಡುತ್ತ ಹೋಗಬೇಕು ಎಂದು ತಿಳಿಸಿದರು.5 ವರ್ಷದ ಅವಧಿಗೆ ಈ ಪರವಾನಿಗೆ ಇದ್ದು, ಈಗಾಗಲೇ 6 ತಿಂಗಳು ಅವಧಿ ಮುಗಿದಿದ್ದು, ಬಾಕಿ ನಾಲ್ಕುವರೆ ವರ್ಷ ಅವಧಿ ಇರುತ್ತದೆ. ಮೊದಲು ವರ್ಷ ಬಿಟ್ಟು ಉಳಿದ ನಾಲ್ಕು ವರ್ಷ ಪ್ರತಿ ವರ್ಷ ಲೈಸನ್ಸ್ ನವೀಕರಣದ ನಿಗದಿತ ಮೊತ್ತವನ್ನು ಸಹ ಪಾವತಿಸಬೇಕು. ಬಾರ್ ಲೈಸನ್ಸ್ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದರಂತೆ ಜಿಲ್ಲೆಯ 8 ಲೈಸೆನ್ಸ್‌ಗಳಲ್ಲಿ ಬಾದಾಮಿಯ ಒಂದು ಕಡೆ ಎಸ್ಟಿಗೆ ಮೀಸಲಿದ್ದು, ಉಳಿದ 7 ಬಾರ್‌ಗಳು ಸಾಮಾನ್ಯ ವರ್ಗಕ್ಕೆ ಇವೆ. ಈ ಹರಾಜು ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರದ ಏಜನ್ಸಿ ಎಂಎಸ್ಡಿಸಿ ಮಾಡುತ್ತಿದ್ದು, ಅತ್ಯಂತ ಪಾರದರ್ಶಕತೆ ಇರುತ್ತದೆ. ಒಬ್ಬರು ಒಂದಕ್ಕಿಂತ ಹೆಚ್ಚು ಲೈಸನ್ಸ್ ಪಡೆಯಲು ಅವಕಾಶ ಇದೆ. ನಿಗದಿತ ಮೊತ್ತಕ್ಕೆ ಶೇ.2 ರಷ್ಟು ಹಣವನ್ನು ಜಿಎಸ್ಟಿ ಜೊತೆಗೆ ಇಎಂಡಿ ಕಟ್ಟಬೇಕು. ಹಾಗೆಯೇ ನೋಂದಣಿ ಶುಲ್ಕವೆಂದು ₹50 ಸಾವಿರ ತುಂಬಬೇಕು ಎಂದರು.ಜಿಲ್ಲಾ ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳಾದ ತಿಪ್ಪೇಸ್ವಾಮಿ, ಹನಮಂತಪ್ಪ ಭಜಂತ್ರಿ ಇದ್ದರು.ಬಾರ್ ಓಪನ್, ಕ್ಲೋಸ್‌ಗೆ ಸಮಯ ನಿಗದಿ
ಇನ್ನು ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಬಾರ್‌ಗಳಿಗೆ ಸಮಯ ನಿಗದಿಯೇ ಇಲ್ಲವಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಫಕೀರಪ್ಪ ಚಲವಾದಿ ಅವರು, ಸಿಎಲ್-7 ಇದ್ದರೇ ಬೆಳಗ್ಗೆ 9 ರಿಂದ ರಾತ್ರಿ 12, ಸಿಎಲ್-9 ಗೆ ಬೆಳಗ್ಗೆ 10 ರಿಂದ ರಾತ್ರಿ 11.30, ಸಿಎಲ್-2 ಇದ್ದರೇ ಬೆಳಗ್ಗೆ 10 ರಿಂದ ರಾತ್ರಿ 10.30 ಹಾಗೂ ಎಂಎಸ್ಐಎಲ್‌ಗಳಿಗೆ ಬೆಳಗ್ಗೆ 11 ರಿಂದ ರಾತ್ರಿ 10 ಗಂಟೆವರೆಗೆ ಸಮಯ ನಿಗದಿ ಪಡಿಸಲಾಗಿದೆ. ಈ ಸಮಯ ಉಲ್ಲಂಘನೆ ಮಾಡುವ ಬಾರ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ ಸಿಎಲ್-2 ಗಳಲ್ಲಿ ಎಂಆರ್‌ಪಿಗಿಂತ ಹೆಚ್ಚು ಹಣ ಪಡೆಯಬಾರದು. ಈ ಬಗ್ಗೆ ದೂರುಗಳು ಬಂದರೇ ಕ್ರಮ ತೆಗೆದುಕೊಳ್ಳಲಾಗುವುದು. ದರ ಉಲ್ಲಂಘನೆ ಮಾಡಿರುವ ಬಗ್ಗೆ ಜಿಲ್ಲೆಯಲ್ಲಿ ಜುಲೈ ತಿಂಗಳಿಂದ ಸೆಪ್ಟಂಬರ್‌ವರೆಗೆ 138 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ, ಕಳ್ಳಭಟ್ಟಿ ಸೇರಿ ಈ ವರ್ಷ 377 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.