ಬೆಳ್ತಂಗಡಿ: ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಪಠ್ಯ ಪುಸ್ತಕಗಳ ಜತೆ, ಸರಕಾರಿ ಶಾಲೆಗಳಿಗೆ ಬರೆಯುವ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಜ್ಯದಲ್ಲಿಸುಮಾರು 51 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಮುಂದಿನ ಶೈಕ್ಷಣಿಕ ವರ್ಷ ಆರಂಭದೊಳಗೆ 12,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ರಾಜ್ಯದಲ್ಲಿ 900 ಕೆಪಿಎಸ್ ಶಾಲೆಗಳು ನಿರ್ಮಾಣವಾಗಲಿದ್ದು, ಜನವರಿ ತಿಂಗಳಲ್ಲಿ ಇವುಗಳ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಹಿಂದೆ ಶಾಲೆಗಳು ಇಲ್ಲದ ಸಂದರ್ಭ ಶಿಕ್ಷಣಕ್ಕೆ ಮಹತ್ವ ನೀಡಿ ದಾನಿಗಳು ನಿರ್ಮಿಸಿದ ಅನುದಾನಿತ ಶಾಲೆಗಳು ಶಿಕ್ಷಣದ ಅಭಿವೃದ್ಧಿಯ ಪ್ರಮುಖ ಅಂಗವಾಗಿವೆ. ಇಲ್ಲಿನ ಶಿಕ್ಷಕರ ಕೊರತೆ ಸವಾಲಿನ ಬಗ್ಗೆಯೂ ಯೋಜನೆ ರೂಪಿಸಲಾಗುವುದು ಎಂದರು. ಧರ್ಮಸ್ಥಳದ ಧರ್ಮಾಧಿಕಾರಿ, ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದ ನೀಡಿ, ಅನೇಕ ಪ್ರಗತಿಪರ ಕಾರ್‍ಯಗಳಿಗೆ ಶಿಕ್ಷಣವೇ ಅಡಿಪಾಯ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಬಾರದು ಎಂಬ ಉದ್ದೇಶದಿಂದ ಕ್ಷೇತ್ರದಿಂದ ಅನೇಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಆಂಗ್ಲ ಮಾಧ್ಯಮದ ಮುಂದೆ ಕನ್ನಡ ಮಾಧ್ಯಮಗಳು ಸೊರಗಬಾರದು. ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಸಾಧನೆಯಲ್ಲಿ ಹಿಂದಿಲ್ಲ. ಅವರಿಂದಲೂ ಸಾಕಷ್ಟು ಕೊಡುಗೆಗಳು ಸಿಗುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ತಾಲೂಕಿಗೆ ಈಗಾಗಲೇ 2 ಕೆಪಿಎಸ್ ಶಾಲೆಗಳು ಮಂಜೂರಾಗಿವೆ. ಇನ್ನೂ ಐದು ಕೆಪಿಎಸ್ ಶಾಲೆಗಳ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ಹಂಚಿ ಹೋಗಿರುವ ಶಾಲೆಗಳನ್ನು ವಾಹನ ವ್ಯವಸ್ಥೆ ಮೂಲಭೂತ ಸೌಕರ್ಯಗಳನ್ನು ನೀಡಿ ಒಗ್ಗೂಡಿಸಿದರೆ ಕೊರತೆ ನಿವಾರಣೆಯ ಜತೆ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯ ಎಂದರು. ಎಂಎಲ್ ಸಿ ಎಸ್.ಎಲ್. ಭೋಜೇ ಗೌಡ ಮಾತನಾಡಿ, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣದ ನಿಯಮಗಳು ಸಡಿಲಗೊಳಿಸಲು ಸದನ ಸಮಿತಿ ರಚಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಅವಿಭಜಿತ ದಕ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿಯನ್ನು ನಡೆಸುತ್ತಿವೆ ಎಂದರು.ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್‍ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಹೇಮಾವತಿ ವೀ. ಹೆಗ್ಗಡೆ, ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್‍ಯದರ್ಶಿ ಡಾ. ಸತೀಶ್ಚಂದ್ರ ಎಸ್., ಶ್ರೀ ನಾರಾಯಣ ಗುರು ನಿಗಮ ರಾಜ್ಯಾದ್ಯಕ್ಷ ಮಂಜುನಾಥ ಪೂಜಾರಿ, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಸಮಿತಿ ಪ್ರಧಾನ ಸಂಚಾಲಕ ಮೋಹನ್ ಕುಮಾರ್ ಉಜಿರೆ, ಕಾರ್‍ಯದರ್ಶಿ ಅಬೂಬಕ್ಕರ್, ಕೋಶಾಧಿಕಾರಿ ಮೋಹನ್ ಶೆಟ್ಟಿಗಾರ್, ಕಾರ್‍ಯಕ್ರಮ ಸಂಯೋಜಕ ಬಿ. ಸೋಮಶೇಖರ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ನಾಯ್ಕ ಪಿ., ಶಾಲಾ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್, ವಿದ್ಯಾರ್ಥಿ ನಾಯಕಿ ಶೆಝ ಫಾತಿಮಾ ಉಪಸ್ಥಿತರಿದ್ದರು.ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಕಾರ್ಯದರ್ಶಿ ಅಬೂಬಕ್ಕರ್ ವಂದಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಿ. ಸೋಮಶೇಖರ ಶೆಟ್ಟಿ ಹಾಗೂ ಡಾ. ಅನನ್ಯಾ ಕಾರ್‍ಯಕ್ರಮ ನಿರೂಪಿಸಿದರು.