ಮರ್ಯಾದೆಗೇಡು ಹತ್ಯೆ: ಸಮಾಜ ಕಲ್ಯಾಣ ಸಚಿವರೆಲ್ಲಿ?

KannadaprabhaNewsNetwork |  
Published : Dec 26, 2025, 02:15 AM IST
 | Kannada Prabha

ಸಾರಾಂಶ

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲೇ ಈ ದಲಿತ ದೌರ್ಜನ್ಯ ಪ್ರಕರಣಗಳು ಬರುತ್ತಿದ್ದು, ಇಲಾಖೆಯ ಸಚಿವರು ಘಟನೆ ನಡೆದ ಅಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ದಾವಿಸಿ ಸಂತ್ರಸ್ತರಿಗೆ ಧೈರ್ಯ ತುಂಬಬೇಕಿತ್ತು. ಕನಿಷ್ಟ ಪಕ್ಷ ಮಾಧ್ಯಗಳಿಗಾದರೂ ಹೇಳಿಕೆ ನೀಡಬೆಕಿತ್ತು. ಯಾವುದನ್ನೂ ಮಾಡದೇ ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಮರ್ಯಾದಾಗೇಡು ಹತ್ಯೆಯಾಗಿ ನಾಲ್ಕು ದಿನಗಳಾದರೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ. ಮಹಾದೇವಪ್ಪ ಅವರ ಹೇಳಿಕೆ, ಸಂತ್ರಸ್ತರ ಭೇಟಿಯ ಪ್ರಸ್ತಾಪವೇ ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಡೀ ನಾಗರಿಕ ಸಮಾಜ ಮಮ್ಮಲ ಮರಗುತ್ತಿದೆ. ಪಕ್ಷಾತೀತವಾಗಿ ಜನಪ್ರತಿನಿಧಿಗಳೆಲ್ಲ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ಪ್ರದೀಪ ಶೆಟ್ಟರ್‌, ಎಫ್‌.ಎಚ್‌. ಜಕ್ಕಪ್ಪನವರ ಸೇರಿದಂತೆ ಹಲವರು ಭೇಟಿ ನೀಡಿ ದೌರ್ಜನ್ಯ ಪೀಡಿತ ಕುಟುಂಬಕ್ಕೆ ಧೈರ್ಯ ಹೇಳಿರುವುದುಂಟು. ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಎಲ್‌. ಮೂರ್ತಿ ಕೂಡ ಭೇಟಿ ನೀಡಿ ಕಂಬನಿ ಒರೆಸುವ ಕೆಲಸ ಮಾಡಿದ್ದಾರೆ.

ಆದರೆ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲೇ ಈ ದಲಿತ ದೌರ್ಜನ್ಯ ಪ್ರಕರಣಗಳು ಬರುತ್ತಿದ್ದು, ಇಲಾಖೆಯ ಸಚಿವರು ಘಟನೆ ನಡೆದ ಅಲ್ಪ ಹೊತ್ತಿನಲ್ಲೇ ಸ್ಥಳಕ್ಕೆ ದಾವಿಸಿ ಸಂತ್ರಸ್ತರಿಗೆ ಧೈರ್ಯ ತುಂಬಬೇಕಿತ್ತು. ಕನಿಷ್ಟ ಪಕ್ಷ ಮಾಧ್ಯಗಳಿಗಾದರೂ ಹೇಳಿಕೆ ನೀಡಬೆಕಿತ್ತು. ಯಾವುದನ್ನೂ ಮಾಡದೇ ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಸುಳಿದಿರುವುದು ದಲಿತ ಹೋರಾಟಗಾರರ ಚಿಂತೆಗೀಡು ಮಾಡಿದೆ.

ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ಘಟನೆ ನಡೆದ ಮರುದಿನ ಘಟನೆ ಖಂಡಿಸಿ ಹೇಳಿಕೆ ನೀಡಿರುವುದನ್ನು ಬಿಟ್ಟರೆ, ಸ್ಥಳಕ್ಕೆ ಇನ್ನೂ ಬಂದಿಲ್ಲ. ಘಟನೆಯಿಂದ ದಲಿತ ಕುಟುಂಬ ಭಯದಲ್ಲಿದೆ. ಗ್ರಾಮಕ್ಕೆ ಕಾಲಿಟ್ಟರೆ ಏನಾಗುತ್ತದೆ ಎಂಬ ಆತಂಕ ಕುಟುಂಬದ ಸದಸ್ಯರಲ್ಲಿ ಅಡಗಿದೆ.

ಇಲಾಖೆಗ ಗೊತ್ತಿರಲಿಲ್ಲ:

ಮಾನ್ಯ-ವಿವೇಕಾನಂದ ಅಂತರ್ಜಾತಿ ವಿವಾಹವಾಗಿದ್ದು, ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದು ಸಮಾಜ ಕಲ್ಯಾಣ ಇಲಾಖೆಗೆ ಗೊತ್ತೇ ಇರಲಿಲ್ಲ. ಈ ವಿಷಯವನ್ನು ಇಲಾಖೆಯ ಜಂಟಿ ನಿರ್ದೇಶಕಿ ಶುಭಾ ಸ್ಪಷ್ಟಪಡಿಸಿದ್ದಾರೆ.

ಮೇ ತಿಂಗಳಿನಲ್ಲಿ ಯುವತಿ ಮಾನ್ಯಾ ಪಾಟೀಲ ನಾಪತ್ತೆಯಾಗಿದ್ದಳು. ಆ ಸಂಬಂಧ ಯುವತಿಯ ತಂದೆ ಪ್ರಕಾಶಗೌಡ ಪಾಟೀಲ, ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಕಾಣೆಯಾದ ದೂರು ಕೊಟ್ಟಿದ್ದರು. ಅಷ್ಟರಲ್ಲಾಗಲಿ ಯುವಕ ವಿವೇಕಾನಂದ ಹಾಗೂ ಮಾನ್ಯಾ ಮದುವೆಯಾಗಿದ್ದರು. ಅವರನ್ನು ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಬಂದಿದ್ದ ಪೊಲೀಸರು, ಯುವತಿ ಹಾಗೂ ಯುವಕನ ಕಡೆಯವರಿಗೆ ಗಲಾಟೆ ಮಾಡದಂತೆ ತಾಕೀತು ಮಾಡಿ ಕಳುಹಿಸಿದ್ದರು. ಆದರೂ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ, ಜಗಳ ನಡೆದಿತ್ತು ಎಂದು ಹೇಳಲಾಗಿದೆ. ಆಗ ಸಿಆರ್‌ಪಿಸಿ 107ನಡಿ ಪೊಲೀಸರು ದೂರು ದಾಖಲಿಸಿಕೊಂಡು ತಹಸೀಲ್ದಾರರಿಗೆ ರವಾನಿಸಿದ್ದರು. ಶಾಂತಿ ಅಥವಾ ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಕೆಲಸ ಮಾಡುವ ಸಾಧ್ಯತೆ ಇರುತ್ತದೆ ಎಂಬುದನ್ನು ಈ ಕಲಂ ಸೂಚಿಸುತ್ತದೆ. ಅದಕ್ಕೆ ತಹಸೀಲ್ದಾರರು ಶಾಂತಿ ಕಾಪಾಡುವಂತೆ ಸೂಚಿಸಿ ಒಂದು ವರ್ಷದ ವರೆಗೆ ಭದ್ರತಾ ಬಾಂಡ್‌ ಬರೆಯಿಸಿಕೊಂಡು ಕಳುಹಿಸಿದ್ದರಂತೆ.

ಈ ನಡುವೆ ಮದುವೆಯಾದ ಬಳಿಕ ಧಾರವಾಡ ತಾಲೂಕಿನ ಶಿವಳ್ಳಿಯಲ್ಲೂ ಈ ದಂಪತಿ ಕೆಲ ದಿನ ಉಳಿದಿತ್ತು. ಹೀಗಾಗಿ ಧಾರವಾಡ ಗ್ರಾಮೀಣ ಠಾಣೆಯಲ್ಲೂ ಯುವತಿಯ ತಂದೆ ಕಡೆಯಿಂದ ಮತ್ತೊಂದು ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಕಳುಹಿಸಿದ್ದರು.

ಗೊತ್ತೆ ಇಲ್ಲ:

ಆಗ ಜಾತಿ ನಿಂದನೆ ಪ್ರಕರಣ ದಾಖಲಾಗಿಲ್ಲ. ಅಂತರ್ಜಾತಿ ವಿವಾಹವಾದ ಜೋಡಿ ಕೂಡ ಪ್ರೋತ್ಸಾಹ ಧನಕ್ಕೆಂದು ಇಲಾಖೆಗೆ ಅರ್ಜಿ ಕೂಡ ಹಾಕಿರಲಿಲ್ಲ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಇವರಿಬ್ಬರ ಅಂತರ್ಜಾತಿ ವಿವಾಹ, ಮುಚ್ಚಳಿಕೆ ಪತ್ರ ಬರೆಸಿಕೊಂಡಿರುವುದು ಗೊತ್ತಾಗಿಲ್ಲವಂತೆ. ಈ ಕಾರಣದಿಂದ ಇಲಾಖೆ ಅಧಿಕಾರಿಗಳ್ಯಾರೂ ಘಟನೆಗೂ ಮುನ್ನ ಗ್ರಾಮಕ್ಕೆ ತೆರಳಿಲ್ಲ. ಪರಿಸ್ಥಿತಿ ಅವಲೋಕಿಸಿಲ್ಲ. ಘಟನೆ ನಡೆದ ಬಳಿಕ ಕಕ್ಕಾಬಿಕ್ಕಿಯಾಗಿದ್ದಾರೆ.

ಮರ್ಯಾದೆ ಹತ್ಯೆ ಪ್ರಕರಣ ನಡೆದ ಬಳಿಕವೇ ಇಲಾಖೆಗೆ ಗೊತ್ತಾಯಿತು. ಅದಾದ ನಂತರ ಏನು ಕ್ರಮಕೈಗೊಳ್ಳಬೇಕೋ ತೆಗೆದುಕೊಳ್ಳಲಾಗುತ್ತಿದೆ.

ಶುಭಾ, ಜಂಟಿ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಲಾಸ್ ಒಡೆದು ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡ ವಿಜಯ ಭಂಡಾರಿ
ಗದಗ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್‌ಮಸ್, ಸಹಬಾಳ್ವೆ ಮೆರಗು!