ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ಬಿತ್ತನೆ ಬೀಜ ಮಾರಾಟಗಾರರ ಬಳಿಯೇ ಗುಣಮಟ್ಟದ ಮತ್ತು ರೋಗ ನಿರೋಧಯುಕ್ತ ಬೀಜಗಳನ್ನು ಖರೀದಿಸಬೇಕು.
ಹೂವಿನಹಡಗಲಿ: ಮುಂಗಾರು ಮಳೆ ಉತ್ತಮವಾಗಿದ್ದು ರೈತರು ಸಂತಸಗೊಂಡಿದ್ದಾರೆ. ಮೆಕ್ಕೆಜೋಳ ಸೇರಿದಂತೆ ಇನ್ನಿತರ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ ಭೂಮಿ ಸಿದ್ಧತೆ ಮಾಡಿಕೊಂಡಿದ್ದಾರೆ.
ತಾಲೂಕಿನಲ್ಲಿ 94,853 ಹೆಕ್ಟೇರ್ ಭೂ ಪ್ರದೇಶದಲ್ಲಿ 68,688 ಹೆಕ್ಟೇರ್ ಭೂ ಪ್ರದೇಶ ಸಾಗುವಳಿಗೆ ಯೋಗ್ಯವಾಗಿದೆ. ಈ ವರ್ಷ 63,953 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆಗೆ ಗುರಿ ಹೊಂದಲಾಗಿದೆ. ಕಳೆದ ಬಾರಿ 59 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
ಕಳೆದ ಜನವರಿ 1ರಿಂದ ಮೇ 24ರವರೆಗೂ 85 ಮಿ.ಮೀ.ನಷ್ಟು ವಾಡಿಕೆ ಮಳೆ ಆಗಬೇಕಿತ್ತು. ಆದರೆ 99 ಮಿ.ಮೀ. ಮಳೆ ಸುರಿದಿದ್ದು ಶೇ.17ರಷ್ಟು ಹೆಚ್ಚು ಮಳೆಯಾಗಿದೆ.
ತಾಲೂಕಿನ ಹೂವಿನಹಡಗಲಿ, ಇಟ್ಟಿಗಿ ಮತ್ತು ಹಿರೇಹಡಗಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ಉಳಿದಂತೆ ಹೆಚ್ಚುವರಿಯಾಗಿ ಹಿರೇಮಲ್ಲನಕೆರೆ, ಹೊಳಗುಂದಿ ಮತ್ತು ಹೊಳಲು ಗ್ರಾಮಗಳಲ್ಲಿ ರೈತರಿಗೆ ಬಿತ್ತನೆ ಬೀಜ ಮಾರಾಟ ಮಾಡಲು ಕೃಷಿ ಇಲಾಖೆ ಕ್ರಮ ಕೈಗೊಂಡಿದೆ.
ಬಿತ್ತನೆ ಬೀಜ ದಾಸ್ತಾನು:
ಕಳೆದ ಬಾರಿಯಂತೆ ಈ ಬಾರಿಯೂ ಹೆಚ್ಚು ರೈತರು ಮೆಕ್ಕೆಜೋಳದತ್ತ ಮುಖ ಮಾಡಿದ್ದಾರೆ. ಅದರಂತೆ ಎಲ್ಲ ಕಡೆಗೂ ವಿವಿಧ ಕಂಪನಿಗಳ ಹೆಚ್ಚು ಇಳುವರಿ ಕೊಡುವ ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಹೆಚ್ಚು ಬೇಡಿಕೆ ಇದೆ.
ಮೆಕ್ಕೆಜೋಳ-282 ಕ್ವಿಂಟಲ್, ತೊಗರಿ-86.35 ಕ್ವಿಂಟಲ್, ಹೈಬ್ರೀಡ್ ಜೋಳ- 25.15 ಕ್ವಿಂಟಲ್, ಸೂರ್ಯಕಾಂತಿ-450 ಕ್ವಿಂಟಲ್, ಸೊಯಾಬೀನ್-30 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಈಗಾಗಲೇ ವಿತರಣೆಗೆ ಕ್ರಮ ವಹಿಸಲಾಗಿದೆ.
ಬಿತ್ತನೆ ಬೀಜಗಳು ರಿಯಾಯ್ತಿ ದರದಲ್ಲಿ ಮಾರಾಟವಾಗುತ್ತಿವೆ. ಮೆಕ್ಕೆಜೋಳ 1 ಕೆಜಿಗೆ ₹20 (ಸಾಮಾನ್ಯ), ₹30 (ಪಜಾ, ಪ.ಪಂ) ತೊಗರಿ 1 ಕೆಜಿಗೆ ₹25 (ಸಾಮಾನ್ಯ), ₹37.50 (ಪಜಾ, ಪ.ಪಂ), ಹೈಬ್ರೀಡ್ ಜೋಳ 1ಕೆಜಿಗೆ ₹25 (ಸಾಮಾನ್ಯ) ₹37.50 (ಪಜಾ, ಪಂ.ಪಂ), ಸೂರ್ಯಕಾಂತಿ 1 ಕೆಜಿಗೆ ₹80 (ಸಾಮಾನ್ಯ), ₹120 (ಪಜಾ, ಪ.ಪಂ) ರಿಯಾಯ್ತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಒಬ್ಬ ರೈತನಿಗೆ 5 ಎಕ್ರೆಗೆ ಮಾತ್ರ ವಿತರಣೆ ಮಾಡಲಾಗುತ್ತಿದೆ. ಹೆಚ್ಚುವರಿ ಅಗತ್ಯ ಇರುವವರು ಬೀಜ ಮಾರಾಟಗಾರರ ಬಳಿ ಖರೀದಿ ಮಾಡಬೇಕಿದೆ.
ರಸ ಗೊಬ್ಬರ ದಾಸ್ತಾನು:
ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಪರಿಣಾಮ ಎಲ್ಲ ರೀತಿಯ ರಸ ಗೊಬ್ಬರದ ಬೆಲೆಗಳು ಏರಿಕೆಯಾಗಿದೆ. ಅಗತ್ಯಕ್ಕೆ ತಕ್ಕಂತೆ ರಸ ಗೊಬ್ಬರ ಖರೀದಿ ಮಾಡುತ್ತಿದ್ದಾರೆ.
ತಾಲೂಕಿನ ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ಬಿತ್ತನೆ ಬೀಜ ಮಾರಾಟಗಾರರ ಬಳಿಯೇ ಗುಣಮಟ್ಟದ ಮತ್ತು ರೋಗ ನಿರೋಧಯುಕ್ತ ಬೀಜಗಳನ್ನು ಖರೀದಿಸಬೇಕು. ಇದನ್ನು ಹೊರತು ಪಡಿಸಿ ಅನಧಿಕೃತ ವ್ಯಕ್ತಿಗಳಿಂದ, ನಕಲಿ ಬೀಜಗಳನ್ನು ಖರೀದಿಸಬಾರದು. ನಕಲಿ ಬಿತ್ತನೆ ಬೀಜ ಮಾರಾಟಗಾರರು ಕಂಡು ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಅಧಿಕೃತ ಬಿತ್ತನೆ ಬೀಜ ಮಾರಾಟಗಾರರು ಮಾರಾಟ ಮಾಡಿದರೆ ಅವರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಕೆ.ಟಿ ಮಾಹಿತಿ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.