ದಾವಣಗೆರೆ: ಬಜೆಟ್‌ ಬಗ್ಗೆ ವಿವಿಧ ಗಣ್ಯರ ಪ್ರತಿಕ್ರಿಯೆಗಳು...

KannadaprabhaNewsNetwork |  
Published : Feb 02, 2025, 01:02 AM IST
1ಕೆಡಿವಿಜಿ11ರಿಂದ 1ಕೆಡಿವಿಜಿ22 | Kannada Prabha

ಸಾರಾಂಶ

ಕೇಂದ್ರ ಬಜೆಟ್‌ ಶ್ರೀಸಾಮಾನ್ಯನಿಗೆ ಆಶಾದಾಯಕವಾಗಿದೆ. ಮಧ್ಯಮ ವರ್ಗದ ಯುವಕ-ಯುವತಿಯರು, ಸಂಬಳದಾರರು ಹಣವನ್ನು ಉಳಿತಾಯ ಮಾಡಲು ಅನುಕೂಲವಾಗಿದೆ.

(1) ಶ್ರೀಸಾಮಾನ್ಯರಿಗೆ ಆಶಾದಾಯ ಕೇಂದ್ರ ಬಜೆಟ್‌ ಶ್ರೀಸಾಮಾನ್ಯನಿಗೆ ಆಶಾದಾಯಕವಾಗಿದೆ. ಮಧ್ಯಮ ವರ್ಗದ ಯುವಕ-ಯುವತಿಯರು, ಸಂಬಳದಾರರು ಹಣವನ್ನು ಉಳಿತಾಯ ಮಾಡಲು ಅನುಕೂಲವಾಗಿದೆ. ಎಂಎಸ್‌ಡಿಯಲ್ಲಿ ಮೇಲ್ಮನವಿ ನಂತರ ನ್ಯಾಯ ಮಂಡಳಿಗೆ ಮನವಿ ಸಲ್ಲಿಸಲು ಯಾವುದೇ ರೀತಿಯ ಮಾನದಂಡ ಕೊಡದಿರುವುದು ವ್ಯಾಪಾರಸ್ಥರಿಗೆ ಮತ್ತು ದೊಡ್ಡ ಕೈಗಾರಿಕೋದ್ಯಮಿಗಳಿಗೆ ನ್ಯಾಯ ಸಿಗದಂತಾಗಿದೆ.

- ಜಂಬಗಿ ರಾಧೇಶ, ಉಪಾಧ್ಯಕ್ಷ, ರಾಜ್ಯ ತೆರಿಗೆ ಸಲಹೆಗಾರರ ಸಂಘ.

(ಫೋಟೋ ಫೈಲ್-1ಕೆಡಿವಿಜಿ11)

- - - (2) ಯುವಜನರಿಗೂ ಅನುಕೂಲ ₹12 ಲಕ್ಷವರೆಗೆ ತೆರಿಗೆ ವಿನಾಯಿತಿ, ಧನ ಧಾನ್ಯ ಯೋಜನೆ ವಿಸ್ತರಣೆ ಹಾಗೂ ಕಿಸಾನ್ ಕಾರ್ಡ್ ಮೂಲಕ ₹3ರಿಂದ ₹5 ಲಕ್ಷವರೆಗೆ ಸಹಾಯ ಹೆಚ್ಚಿಸಿ, ರೈತರಿಗೆ ನೆರವಾಗುವ ಮೂಲಕ ರೈತರಿಗೆ ಸ್ಪಂದಿಸಿರುವುದು, ಐಐಟಿಗಳಲ್ಲಿ 6500 ಸೀಟುಗಳನ್ನು ಹೆಚ್ಚಿಸುವ ಮೂಲಕ ಹಾಗೂ ಸ್ಟಾರ್ಟಪ್‌ಗಳಿಗೆ ₹10 ಕೋಟಿ ಅನುದಾನ ನೀಡುವ ಮೂಲಕ ಯುವಜನರಿಗೆ ಹೀಗೆ ಎಲ್ಲ ವರ್ಗಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಜೆಟ್ ಮಂಡಿಸಿದ ಕೇಂದ್ರ ಸರ್ಕಾರಕ್ಕೆ ಬಿಜೆಪಿ ಅಭಿನಂದಿಸುತ್ತದೆ.

- ಎನ್.ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ, ಬಿಜೆಪಿ

(ಫೋಟೋ ಫೈಲ್-1ಕೆಡಿವಿಜಿ12)

- - - (3) ನೀರಾವರಿಗೆ ಸ್ಪಂದಿಸಿಲ್ಲ ರಾಜ್ಯದ ಪಾಲಿಗೆ ಇದು ನೀರಸ ಬಜೆಟ್‌. ನೀರಾವರಿ ಯೋಜನೆಗಳಿಗೆ ಯಾವುದೇ ಹಣ ಮೀಸಲಿಟ್ಟಿಲ್ಲ. ರೈತರಿಗೆ ಕಿಸಾನ್‌ ಕಾರ್ಡ್ ಸಾಲವನ್ನು ₹5 ಲಕ್ಷಕ್ಕೆ ಹೆಚ್ಚಿಸುವ ಬದಲು ಎತ್ತಿನಹೊಳೆಗೆ ಹೆಚ್ಚು ಹಣ ಮೀಸಲಿಡಬೇಕಿತ್ತು. ಮಹದಾಯಿ ಯೋಜನೆಗೆ ಒಪ್ಪಿಗೆ ಕೊಡಬೇಕಿತ್ತು. ಮಧ್ಯ ಕರ್ನಾಟಕದ ಭದ್ರಾ ಮೇಲ್ದಂಡೆಗೆ 2 ವರ್ಷದ ಹಿಂದೆಯೇ ₹5300 ಕೋಟಿ ಘೋಷಿಸಿದ್ದರೂ ಹಣವವನ್ನು ಇಂದಿಗೂ ನೀಡಿಲ್ಲ. ಹೊಸ ಐಐಟಿ ಕಾಲೇಜು ಮಂಜೂರು ಮಾಡಿಲ್ಲ. ರಾಜ್ಯದ ನಿರೀಕ್ಷೆಗೆ ಸ್ಪಂದಿಸದ ಕರಾಳ ಬಜೆಟ್ ಇದು.

- ಕೆ.ಜಿ.ಯಲ್ಲಪ್ಪ, ರಾಜ್ಯಾಧ್ಯಕ್ಷ, ವಿಶ್ವ ಕರವೇ.

(ಫೋಟೋ ಫೈಲ್-1ಕೆಡಿವಿಜಿ13)

- - - (4) ಮಧ್ಯಮ ವರ್ಗದ ಆರ್ಥಿಕ ಹೊರೆ ಇಳಿಕೆ ಕ್ರಮ ಈ ಬಾರಿಯ ರೈಲ್ವೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಪರಿಶಿಷ್ಟ ಜಾತಿ-ಪಂಗಡದ ಮಹಿಳಾ ಉದ್ಯಮಿಗಳಿಗೆ ₹2 ಕೋಟಿವರೆಗೆ ಸಾಲ ನೀಡುವ ಧನ ಧಾನ್ಯ ಯೋಜನೆ ವಿಸ್ತರಣೆ, ಕಿಸಾನ್ ಕಾರ್ಡ್‌ನಿಂದ ₹3 ಲಕ್ಷದಿಂದ ₹5 ಲಕ್ಷವರೆಗೆ ಆರ್ಥಿಕ ನೆರವು ಹೆಚ್ಚಿಸುವ ಮೂಲಕ ರೈತರ ಬದುಕಿಗೂ ಸ್ಪಂದಿಸುವ ಕೆಲಸ ಮಾಡಲಾಗಿದೆ.

- ಡಿ.ಎಸ್.ಉಮಾ ಪ್ರಕಾಶ, ಮಹಿಳಾ ಉದ್ಯಮಿ, ಮಾಜಿ ಮೇಯರ್.

(ಫೋಟೋ ಫೈಲ್-1ಕೆಡಿವಿಜಿ14)

- - - (5) ರೈತಪರ ಬಜೆಟ್‌ ದೇಶದ 100 ಜಿಲ್ಲೆಗಳಿಗೆ ಧಾನ್ಯ ಕೃಷಿ ಯೋಜನೆಯಡಿ 1.7 ಕೋಟಿ ರೈತರಿಗೆ ನೆರವು, ಕೃಷಿ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿರುವುದು ರೈತರ ಬದುಕನ್ನು ಹಸನಾಗಿಸುವ ಕ್ರಮಗಳಾಗಿವೆ. ಕೃಷಿ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನ, ಸಂಶೋಧನೆಗೆ ಹೆಚ್ಚು ಅನುದಾನ, ಭವಿಷ್ಯದ ಕೃಷಿ ತಜ್ಞರನ್ನು ಸಿದ್ಧಗೊಳಿಸಲು ಬಜೆಟ್ ಸಹಕಾರಿಯಾಗಿದೆ. ಬೆಂಗಳೂರಿನ ಮೆಟ್ರೋ ವಿಸ್ತರಣೆ, ಸ್ಮಾರ್ಟ್‌ ಸಿಟಿ ಯೋಜನೆಗಳ ಬಲವರ್ಧನೆ, ಹೈಟೆಕ್ ಉದ್ಯೋಗ ಕ್ಷೇತ್ರಕ್ಕೆ ಹೆಚ್ಚು ಬಂಡವಾಳ ಹೂಡಿಕೆ ಒಳ್ಳೆಯ ಕ್ರಮ.

- ಜಯಲಕ್ಷ್ಮೀ ಮಹೇಶ ಪಲ್ಲಾಗಟ್ಟೆ, ಮಾಜಿ ಅಧ್ಯಕ್ಷೆ, ಜಿಪಂ.

(ಫೋಟೋ ಫೈಲ್-1ಕೆಡಿವಿಜಿ15)

- - - (6) ಪರಿಪೂರ್ಣ ಬಜೆಟ್ ಕೇಂದ್ರ ಸರ್ಕಾರವು ಅಭಿವೃದ್ಧಿ ಬಜೆಟ್ ಮಂಡಿಸಿದೆ. ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿಯಡಿ ₹30 ಸಾವಿರ ಮೌಲ್ಯದ ಕ್ರೆಡಿಟ್ ಕಾರ್ಡ್, ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದರಿಗೆ ವಿಶೇಷ ಯೋಜಿಸಲಾಗಿದೆ. ಚನ್ನಪಟ್ಟಣ ಗೊಂಬೆ ಉತ್ಪಾದನೆಗೆ ಪ್ರೋತ್ಸಾಹಿಸಿದ್ದು ಖುಷಿ ಸಂಗತಿ. ಕ್ಯಾನ್ಸರ್ ಸಂಬಂಧಿ ಔಷಧಿಗಳ ಮೇಲೆ ತೆರಿಗೆ ವಿನಾಯಿತಿ ನೀಡಿದೆ. ಮಧ್ಯಮ ವರ್ಗದ ಜನಗಳಿಗೆ ಶಕ್ತಿ ತುಂಬಿದ ಪರಿಫೂರ್ಣ ಬಜೆಟ್ ಇದು.

- ಪುಷ್ಪಾ ವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಹಿಳಾ ಮೋರ್ಚಾ

(ಫೋಟೋ ಫೈಲ್-1ಕೆಡಿವಿಜಿ16)

- - - (7) ಕೊಳ್ಳುಬಾಕ ಸಂಸ್ಕೃತಿಗೆ ಬಜೆಟ್‌ ಉತ್ತೇಜನ ಕೇಂದ್ರ ಬಜೆಟ್‌ನಲ್ಲಿ ಉದ್ಯೋಗವಕಾಶ ಸೃಷ್ಟಿಗೆ ಪ್ರಸ್ತಾಪವೇ ಇಲ್ಲ. ₹12 ಲಕ್ಷವರೆಗೆ ಆದಾಯ ತೆರಿಗೆ ಇಲ್ಲವೆಂಬ ಸಂದೇಶ ರವಾನಿಸಿ ಮಧ್ಯಮ ವರ್ಗದವರಿಗೆ ಖುಷಿಪಡಿಸುವ ಪ್ರಯತ್ನ ಮಾಡಲಾಗಿದೆ. ಮೊಬೈಲ್, ಎಲ್‌ಇಡಿ ಟಿವಿ, ಎಲೆಕ್ಟ್ರಿಕ್ ಸ್ಕೂಟರ್ ತುಸು ಅಗ್ಗವಾಗುವ ಸುಳಿವುಗಳನ್ನು ನೀಡುವ ಮೂಲಕ ಕೊಳ್ಳು ಬಾಕ ಸಂಸ್ಕೃತಿಗೆ ವಿಸ್ತೃತ ಸ್ವರೂಪವನ್ನು ನೀಡಲಾಗಿದೆ. ನಬಾರ್ಡ್ ಸಾಲದ ಮೊತ್ತದಲ್ಲಿ ಕಡಿತಗೊಳಿಸಿ ಕಿಸಾನ್ ಕ್ರೆಡಿಟ್ ಸಾಲದ ಮಿತಿಯ 3ರಿಂದ 5 ಲಕ್ಷಕ್ಕೆ ಏರಿಸಿರುವುದು ನಗೆ ತರಿಸುವಂತಿದೆ.

- ಎಲ್.ಎಚ್‌. ಅರುಣಕುಮಾರ, ಅಧ್ಯಕ್ಷ, ಜಿಲ್ಲಾ ವಕೀಲರ ಸಂಘ

(ಫೋಟೋ ಫೈಲ್-1ಕೆಡಿವಿಜಿ17)

- - -

(8) ವಿಕಸಿತ ಭಾರತಕ್ಕೆ ಮುನ್ನುಡಿಕೇಂದ್ರ ವಿತ್ತೀಯ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಆಯವ್ಯಯ ಮಧ್ಯಮ ವರ್ಗದವರಿಗೆ ಒಳ್ಳೆಯದಾಗಿದೆ. ರೈತರಿಗೆ ₹5 ಲಕ್ಷಗಳ ಸಾಲ ಘೋಷಣೆ ಮಾಡಿರುವುದು, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ, ದೇಶದಲ್ಲಿ ಐದು ಹೊಸ ಕೈಗಾರಿಕೆಗಳ ಸ್ಥಾಪನೆ ಘೋಷಣೆ ವಿಕಸಿತ ಭಾರತಕ್ಕೆ ಮುನ್ನುಡಿ ಬರೆಯುವಂತಿದೆ. 100 ಜಿಲ್ಲೆಗಳಲ್ಲಿ ಧಾನ್ಯ ಕೃಷಿ ಯೋಜನೆ ಜಾರಿಗೊಂಡಿದ್ದು, 1.7 ಕೋಟಿ ರೈತರಿಗೆ ನೆರವಾಗಲಿದೆ. ಇದು ರೈತರ ಆದಾಯ ಹೆಚ್ಚಿಸಲು ಸಹಕಾರಿ.

- ರವಿಕುಮಾರ ನುಗ್ಗಿಹಳ್ಳಿ, ಔಷಧಿ ವ್ಯಾಪಾರಿಗಳ ಸಂಘ.

(ಫೋಟೋ ಫೈಲ್-1ಕೆಡಿವಿಜಿ18)

- - - (9) ಮೂಗಿಗೆ ತುಪ್ಪ ಸವರಿದ್ದಾರೆ ಮೋದಿ ಸರ್ಕಾರ 2025ನೇ ಸಾಲಿನ ಬಜೆಟ್ ಮೂಲಕ ದೇಶದ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ರಾಜ್ಯಕ್ಕೆ ಒಂದೇ ಒಂದು ಯೋಜನೆ ಘೋಷಿಸಿದ್ದು ಬಿಟ್ಟರೆ ಯಾವ ಸೌಲಭ್ಯವಿಲ್ಲ. ದೆಹಲಿ ಚುನಾವಣೆ ಗಮನದಲ್ಲಿಟ್ಟುಕೊಂಡು ಟ್ಯಾಕ್ಸ್ ವಿನಾಯಿತಿ ನೀಡಲಾಗಿದೆ. ಭದ್ರಾ ಮೇಲ್ದಂಡೆಗೆ ಘೋಷಿಸಿದ್ದ ಹಣವನ್ನೇ ಕೇಂದ್ರ ನೀಡಿಲ್ಲ.

- ಸೈಯದ್ ಖಾಲಿದ್ ಅಹಮ್ಮದ್, ಕಾರ್ಯದರ್ಶಿ, ರಾಷ್ಟ್ರೀಯ ಯುವ ಕಾಂಗ್ರೆಸ್‌

(ಫೋಟೋ ಫೈಲ್-1ಕೆಡಿವಿಜಿ19)

- - - (10) ಯುವಜನರ ಮನಗೆದ್ದಿದೆ ರೈತರು, ಉದ್ದಿಮೆದಾರರು, ಮಧ್ಯಮ ವರ್ಗದ ಮಹಿಳೆಯರು, ಜನಸಾಮಾನ್ಯರ ಅಭಿವೃದ್ಧಿ, ಹಿತಾಸಕ್ತಿ ಆಲೋಚಿಸಿ, ಬಜೆಟ್‌ನ್ನು ವಿತ್ತ ಸಚಿವೆ ಮಂಡಿಸಿದ್ದಾರೆ. ಸಂಪೂರ್ಣವಾಗಿ ಕೇಂದ್ರ ಬಜೆಟ್ ಒಂದು ಅಭಿವೃದ್ಧಿ ಪರ ಮತ್ತು ಎಲ್ಲಾ ವರ್ಗದ ಜೀವನಮಟ್ಟ ಸುಧಾರಣೆ ಗಮನದಲ್ಲಿಟ್ಟುಕೊಂಡು ಮಂಡಿರುವ ದೂರದೃಷ್ಟಿಯ ಬಜೆಟ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಜೆಟ್ ದೇಶವಾಸಿಗಳು, ರೈತರು, ಮಹಿಳೆಯರು, ಯುವಜನರ ಮನಗೆದ್ದಿದೆ.

- ಶಿವನಗೌಡ ಟಿ. ಪಾಟೀಲ, ಬಿಜೆಪಿ ಯುವ ಮುಖಂಡ, ಪಾಲಿಕೆ ಮಾಜಿ ಸದಸ್ಯ.

(ಫೋಟೋ ಫೈಲ್: -1ಕೆಡಿವಿಜಿ20)

- - - (11) ನಿರೀಕ್ಷೆ ಮೀರಿದ ಬಜೆಟ್‌ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ತಮ್ಮ 8ನೇ ಬಜೆಟ್‌ನಲ್ಲಿ ಮಧ್ಯಮ ವರ್ಗ, ಸಣ್ಣ ಉದ್ಯಮ, ಮೆಡಿಕಲ್ ಹೀಗೆ ಪ್ರತಿ ಕ್ಷೇತ್ರಕ್ಕೂ ಅನನ್ಯ ಕೊಡುಗೆ ನೀಡಿದ್ದಾರೆ. ರೈಲ್ವೆ ಕಾರಿಡಾರ್‌, ಗೂಡ್ಸ್ ರೈಲುಗಲಿಗೆ ಪ್ರತ್ಯೇಕ ಕಾರಿಡಾರ್, ರೈಲ್ವೆ ಬೋಗಿಗಳ ಉನ್ನತೀಕರಣ, ಹೊಸ ಮಾರ್ಗಕ್ಕೆ ಅನುದಾನ, ಹಳೆ ಘೋಷಿಸಿದ ಮಾರ್ಗಕ್ಕೆ ಹೆಚ್ಚು ಅನುದಾನ, ಎಲ್ಲ ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಒತ್ತು ಒಳ್ಳೆಯ ಕೆಲಸವಾಗಿದೆ.

- ರೋಹಿತ್ ಎಸ್. ಜೈನ್‌, ಕಾರ್ಯದರ್ಶಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ.

(ಫೋಟೋ ಫೈಲ್: -1ಕೆಡಿವಿಜಿ21)

- - - (12) ತೆರಿಗೆ ಹೊರೆ ಇಳಿದಿದೆ ದೇಶದ ಮಧ್ಯಮ ವರ್ಗದ ಜನರಿಗೆ ತೆರಿಗೆ ಹೊರೆ ಇಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಬಜೆಟ್‌ನಲ್ಲಿ ಕೃಷಿ, ಮಳೆ ನೀರು ಕೊಯ್ಲು, ಉಚಿತ ಶಿಕ್ಷಣ, ಉಚಿತ ವೈದ್ಯಕೀಯ ಸೇವೆ, ಸ್ವಚ್ಛತೆ, ಪರಿಸರ ಸಂರಕ್ಷಣೆ, ಶುಭ್ರತೆ, ಸುರಕ್ಷತೆ, ಭದ್ರತೆ, ಸ್ಥಳೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬಗ್ಗೆ ಬಜೆಟ್‌ನಲ್ಲಿ ಎಲ್ಲಿಯೂ ಚರ್ಚಿಸಿಲ್ಲ.

- ಡಾ. ಜೆ.ಎಂ.ಮಂಜುನಾಥ, ಸಹ ಪ್ರಾಧ್ಯಾಪಕ, ಸಪ್ರದ ಕಾಲೇಜು, ದಾವಣಗೆರೆ

(ಫೋಟೋ ಫೈಲ್: 1ಕೆಡಿವಿಜಿ22)

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌