ಭೀಕರ ಅಪಘಾತ: ಮಂತ್ರಾಲಯಕ್ಕೆ ತೆರಳುತ್ತಿದ್ದ ಐವರ ಸಾವು

KannadaprabhaNewsNetwork |  
Published : Jun 28, 2026, 03:15 AM IST
ಹಾವೇರಿಯಿಂದ ಮಂತ್ರಾಲಯಲಕ್ಕೆ ತೆರಳುವ ಮುನ್ನ ಪೋಟೋ ತೆಗೆದು ಸ್ಟೇಟಸ್‌ಗೆ ಹಾಕಿದ್ದ ಪ್ರವೀಣ ಬಾಳಿಕಾಯಿ. | Kannada Prabha

ಸಾರಾಂಶ

ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಕಾರಿಗೆ ಸರಕು ಸಾಗಣೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಾವೇರಿ ನಗರದ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 5 ಜನ ಮೃತಪಟ್ಟ ದಾರುಣ ಘಟನೆ ಶನಿವಾರ ಬೆಳಗಿನ ಜಾವ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಸಮೀಪ ನಡೆದಿದೆ.

ಹಾವೇರಿ/ಕುಕನೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಕಾರಿಗೆ ಸರಕು ಸಾಗಣೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಾವೇರಿ ನಗರದ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 5 ಜನ ಮೃತಪಟ್ಟ ದಾರುಣ ಘಟನೆ ಶನಿವಾರ ಬೆಳಗಿನ ಜಾವ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಸಮೀಪ ನಡೆದಿದೆ.

ಭಾನಾಪುರ ಬಳಿ ಎದುರುಗಡೆಯಿಂದ ಬರುತ್ತಿದ್ದ ಸರಕು ಸಾಗಣೆ ಲಾರಿಯೊಂದು ರಸ್ತೆ ವಿಭಜಕ ದಾಟಿ ಬಂದು ಇವರು ಹೋಗುತ್ತಿದ್ದ ಮಾರುತಿ ಓಮಿನಿಗೆ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ವಾಹನ ನಜ್ಜುಗುಜ್ಜಾಗಿ ಸ್ಥಳದಲೇ ಮೂವರು ಸಾವನಪ್ಪಿದರೆ, ಇನ್ನಿಬ್ಬರು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆ್ಯಂಬುಲೆನ್ಸ್‌ ಸಿಬ್ಬಂದಿಯ ನೆರವಿನಿಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಹಾವೇರಿ ಉಪವಿಭಾಗದ ಸಿಬ್ಬಂದಿ ಪ್ರವೀಣ ಬಾಳಿಕಾಯಿ (40), ಅವರ ಪತ್ನಿ ಹೇಮಾ (ಕೆಂಚಮ್ಮ) ಬಾಳಿಕಾಯಿ (36), ಪುತ್ರ ಚಿನ್ಮಯ (16), ಸಂಬಂಧಿಯಾದ ರಟ್ಟಿಹಳ್ಳಿ ತಾಲೂಕಿನ ಹಿರೇಕಬ್ಬಾರದ ಅಮೃತಾ ಕೋಟಿಹಾಳ (25) ಹಾಗೂ ಕಾರು ಚಾಲಕ ಹಾವೇರಿ ಶಿವಾಜಿನಗರದ ರಮೇಶ ಬಳ್ಳಾರಿ (45) ಮೃತಪಟ್ಟ ದುರ್ದೈವಿಗಳು.

ಅಪಘಾತದಲ್ಲಿ ಪ್ರವೀಣ-ಹೇಮಾ ದಂಪತಿಯ 12 ವರ್ಷದ ಪುತ್ರಿ ಸೋನಾಲಿಕಾ, ಅಮೃತಾ ಅವರ ಪತಿ ಪ್ರವೀಣ ಕೋಟಿಹಾಳ ಹಾಗೂ ಹುಬ್ಬಳ್ಳಿ ಮೂಲದ ಬಾಲಕ ಸಮರ್ಥ, ಮತ್ತೊಬ್ಬ ವ್ಯಕ್ತಿ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾವೇರಿಯಿಂದ ರಾತ್ರಿ ಹೊರಟಿದ್ದವರು ಬೆಳಗ್ಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರ ಮನೆಗಳಲ್ಲಿ ಮೌನ ಆವರಿಸಿತ್ತು.

ಈ ಕುರಿತು ಪಿಎಸ್‌ಐ ಎಸ್.ಪಿ. ನಾಯಕ, ಚಾಲಕ ರಮೇಶ ಶರಣಪ್ಪ ಕುರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಪಿಐ ಮೌನೇಶ್ವರ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕುಟುಂಬಸ್ಥರ ಆಕ್ರಂದನ..

ಹಾವೇರಿ ನಗರದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿದ್ದ ಪ್ರವೀಣ ಬಾಳೇಕಾಯಿ ಕುಟುಂಬಸ್ಥರು ಸೇರಿ ಒಟ್ಟು 9 ಜನ ಶುಕ್ರವಾರ ರಾತ್ರಿ ಹಾವೇರಿಯಿಂದ ಕಾರಿನಲ್ಲಿ ಮಂತ್ರಾಲಯ ದರ್ಶನಕ್ಕೆ ತೆರಳಿದ್ದರು. ಬಾನಾಪುರದ ಬಳಿ ಟ್ಯಾಂಕರ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.

ಪ್ರವೀಣ ಬಾಳಿಕಾಯಿ ಕುಟುಂಬ ವಾಸವಿದ್ದ ಲೋಕೋಪಯೋಗಿ ಇಲಾಖೆಯ ಮನೆಯಲ್ಲಿ ಶನಿವಾರ ಬೆಳಗ್ಗೆ ತೀವ್ರ ಶೋಕದ ವಾತಾವರಣ ಆವರಿಸಿತ್ತು. ಒಂದೇ ಕುಟುಂಬದ 4 ಜನ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಧು-ಬಳಗ ಹಾಗೂ ನೆರೆಹೊರೆಯವರು ಮನೆಗೆ ಧಾವಿಸಿದರು. ಮಗಳು, ಅಳಿಯ ಮತ್ತು ಮೊಮ್ಮಗನನ್ನು ಕಳೆದುಕೊಂಡ ಹೇಮಾ ಅವರ ತಾಯಿ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಎಲ್ಲರ ಕಣ್ಣು ತೇವವಾಗಿಸಿತ್ತು. ನನ್ನ ಮಗಳ ಕುಟುಂಬವೇ ಸರ್ವನಾಶವಾಯಿತು ಎಂದು ಗೋಳಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ದುಃಖದಲ್ಲಿ ಮುಳುಗಿದ್ದ ಕುಟುಂಬಸ್ಥರನ್ನು ಸಮಾಧಾನಪಡಿಸುವುದೇ ಅಕ್ಕಪಕ್ಕದ ನಿವಾಸಿಗಳಿಗೆ ಕಷ್ಟಕರವಾಗಿತ್ತು.

ಹಿರೇಕಬ್ಬಾರದಲ್ಲಿ ಮಡುಗಟ್ಟಿದ ದುಃಖ: ಅಪಘಾತದಲ್ಲಿ ರಟ್ಟೀಹಳ್ಳಿ ತಾಲೂಕಿನ ಹಿರೇಕಬ್ಬಾರ ಗ್ರಾಮದ ಮಹಿಳೆಯೊಬ್ಬರು ಸೇರಿದ್ದು, ಶನಿವಾರ ಗ್ರಾಮದಲ್ಲಿ ಮಡುಗಟ್ಟಿದ ದುಃಖದ ವಾತಾವರಣ ಕಂಡು ಬಂದಿತು.

ಹಿರೇಕಬ್ಬಾರ ಗ್ರಾಮದ ಪ್ರವೀಣ ಕೋಟಿಹಾಳ, ಪತ್ನಿ ಅಮೃತಾ ಕೋಟಿಹಾಳ ಮತ್ತು 8 ವರ್ಷದ ಮಗು ಪ್ರಣವ್ ಕೂಡಾ ಗಾಯಗೊಂಡಿದ್ದರೆಂದು ತಿಳಿದು ಬಂದಿದೆ. ಅಪಘಾತದಲ್ಲಿ ಅಮೃತಾ (25) ಸಾವನ್ನಪ್ಪಿದ್ದು ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ. ಪ್ರವೀಣ ಮತ್ತು ಪ್ರಣವ್ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಾವೇರಿಯ ಅಮೃತಾಳ ಸಂಬಂಧಿಕರ ಜೊತೆಗೆ ಪ್ರವೀಣ ಕುಟುಂಬ ಮಂತ್ರಾಲಯಕ್ಕೆ ಪ್ರಯಾಣಕ್ಕೆ ತೆರಳಿದ್ದರು. ಶುಕ್ರವಾರ ಸಂಜೆ ಗ್ರಾಮದಿಂದ ಬಸ್ಸಿನಲ್ಲಿ ಹಾವೇರಿಗೆ ತೆರಳಿದ್ದರು. ಅಲ್ಲಿಂದ ಒಮ್ನಿಯಲ್ಲಿ ಹೋಗಿದ್ದರು ಎಂದು ಸಂಬಂಧಿಕರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚರಂಡಿ ಸಮಸ್ಯೆಗೆ ರಸ್ತೆ ತಡೆ ಪ್ರತಿಭಟನೆ
ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಕಲಾಪ ಸ್ಥಗಿತ, ತಪಾಸಣೆ ನಡೆಸಿದ ಪೊಲೀಸರು