ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು

KannadaprabhaNewsNetwork | Published : Oct 1, 2024 1:35 AM

ಸಾರಾಂಶ

ಸುರೇಶ್ ಆಚಾರ್ಯ ಹಾಗೂ ಪತ್ನಿ ಹಾಗೂ ತಮ್ಮ ಮೂವರು ಮಕ್ಕಳೊಂದಿಗೆ ಬೈಕ್‌ನಲ್ಲಿ ವೇಣೂರಿನಿಂದ ಕಾರ್ಕಳದತ್ತ ಸಾಗುತ್ತಿದ್ದರು. ಈ ವೇಳೆ ಕಾರೊಂದನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಈಚರ್ ಲಾರಿಯ ಹಿಂಭಾಗಕ್ಕೆ ಬೈಕ್‌ ಡಿಕ್ಕಿ ಹೊಡೆದಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ- ಧರ್ಮಸ್ಥಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಕೋಟಿಚೆನ್ನಯ್ಯರ ಬಾವಿ ಸಮೀಪ ಈಚರ್ ಲಾರಿ ಮತ್ತು ಬೈಕ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ಬೈಕಿನಲ್ಲಿದ್ದ ಸುರೇಶ್ ಆಚಾರ್ಯ (36) ಅವರ ಮಕ್ಕಳಾದ ಸಮೀಕ್ಷಾ (7), ಸುಶ್ಮಿತಾ (5), ಸುಶಾಂತ್ (2) ಮೃತಪಟ್ಟವರು. ಸುರೇಶ್ ಆಚಾರ್ಯ ಹಾಗೂ ಪತ್ನಿ ಹಾಗೂ ತಮ್ಮ ಮೂವರು ಮಕ್ಕಳೊಂದಿಗೆ ಬೈಕ್‌ನಲ್ಲಿ ವೇಣೂರಿನಿಂದ ಕಾರ್ಕಳದತ್ತ ಸಾಗುತ್ತಿದ್ದರು. ಈ ವೇಳೆ ಕಾರೊಂದನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಈಚರ್ ಲಾರಿಯ ಹಿಂಭಾಗಕ್ಕೆ ಬೈಕ್‌ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್‌ ರಸ್ತೆಗೆ ಮಗುಚಿದ್ದು, ಸ್ಥಳದಲ್ಲೇ ಸುರೇಶ್ ಆಚಾರ್ಯ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಒಂದು ಮಗು ಆಸ್ಪತ್ರೆ ಸಾಗಿಸುವ ವೇಳೆ ಅಸುನೀಗಿದೆ. ಪತ್ನಿ ಮೀನಾಕ್ಷಿ (32) ಗಂಭೀರ ಗಾಯಗೊಂಡಿದ್ದು, ಉಡುಪಿ ಆಸ್ಪತ್ರೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ್ ಆಚಾರ್ಯ ನಲ್ಲೂರಿನ ನಿವಾಸಿಯಾಗಿದ್ದು, ಕಮ್ಮಾರಿಕೆ ವೃತ್ತಿ ಮಾಡುತ್ತಿದ್ದರು. ವೇಣೂರಿನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ನಲ್ಲೂರಿನ ತನ್ನ ಮನೆಗೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.ಓವರ್ ಸ್ಪೀಡ್ ಅಪಘಾತಕ್ಕೆ ಕಾರಣವಾಯಿತೆ?ವೇಣೂರಿನಲ್ಲಿ ಮಹಾಲಯ ಕಾರ್ಯಕ್ರಮ ಮುಗಿಸಿಕೊಂಡು ಬೈಕ್‌ನಲ್ಲಿ ಐವರು ಮನೆಗೆ ಹೊರಟಿದ್ದರು. ಈ ವೇಳೆ ಓವರ್‌ ಸ್ಪೀಡ್‌ನಲ್ಲಿ ಬೈಕ್‌ ಓಡಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಕಾರೊಂದನ್ನು ಓವರ್ ಟೇಕ್ ಮಾಡುವ ಪ್ರಯತ್ನಿಸಿದ್ದು, ಎದುರಿನಲ್ಲಿ ಸಾಗುತ್ತಿದ್ದ ಲಾರಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. * ಅಪಾಯಕಾರಿ ತಿರುವು: ಪಾಜೆಗುಡ್ಡೆ ರಸ್ತೆ ಅಪಾಯಕಾರಿ ತಿರುವು ಹಾಗೂ ಇಳಿಜಾರು ಪ್ರದೇಶವಾಗಿದೆ. ಕಳೆದ ಐದು ವರ್ಷಗಳಲ್ಲಿ ಹದಿನೈದಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಹತ್ತು ಜನರು ಮೃತಪಟ್ಟಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕಾರ್ಕಳ- ಧರ್ಮಸ್ಥಳ ಸಾಗುವ ರಾಜ್ಯ ಹೆದ್ದಾರಿಯ ಪಾಜೆಗುಡ್ಡೆ ಅಪಾಯಕಾರಿ ತಿರುವನ್ನು 20 ಲಕ್ಷ ರುಪಾಯಿ ವೆಚ್ಚದಲ್ಲಿ ಅಗಲೀಕರಣಗೊಳಿಸಲಾಗಿತ್ತು.

Share this article