ಭೀಮಣ್ಣ ಗಜಾಪುರ ಕೂಡ್ಲಿಗಿ
ಈ ಬುಡಕಟ್ಟು ಆಚರಣೆ ಇಂದು ನಿನ್ನೆಯದಲ್ಲ, ತಲೆ ತಲಾಂತರದಿದ ನಡೆದುಕೊಂಡು ಬಂದಿರುವ ಈ ಭಾಗದ ಬುಡಕಟ್ಟು ಜನತೆಯ ಪಂರಪರೆಯಾಗಿದೆ. ತಾಲೂಕಿನ ಹುಡೇಂ ಗ್ರಾಮದ ಈಶ್ವರಗೌಡ ಸೇರಿ ಅವರ ಸಹೋದರರ ಮುಂದಾಳತ್ವದಲ್ಲಿ ಗ್ರಾಮಸ್ಥರು ಕುದುರೆಯನ್ನು ಭಕ್ತಿಯಿಂದ ಶೃಂಗರಿಸಿ, ಪೂಜಿಸಿ ವಾದ್ಯಮೇಳಗಳಿಂದ ಮೆರವಣಿಗೆ ಮಾಡಿದರು. ಹುಡೇಂ ಗ್ರಾಮದ ಗೌಡರ ಮನೆಯಿಂದ ಕುದುರೆಯನ್ನು ಶ್ರೀಕಂಪಳರಂಗಸ್ವಾಮಿ ದೇವಸ್ಥಾನದ ಬಳಿಗೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಆ ನಂತರ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮಕ್ಕೆ ಕುದುರೆಯನ್ನು ತಮಟೆ, ಉರುಮೆ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಕುದುರೆ ಸಾಗುವ ದಾರಿಯಲ್ಲಿ ಹುಡೇಂ, ತಾಯಕನಹಳ್ಳಿ, ಚಿಕ್ಕೋಬನಹಳ್ಳಿ ಸೇರಿ ಹತ್ತು ಹಲವು ಹಳ್ಳಿಗಳ ಭಕ್ತರು ಕುದುರೆಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು.ಈ ಸಂದರ್ಭದಲ್ಲಿ ಗೌಡರ ವಂಶದ ಈಶ್ವರಗೌಡ, ಮಂಜುನಾಥ ಗೌಡ, ಬಸವರಾಜ ಗೌಡ, ಗ್ರಾಪಂ ಅಧ್ಯಕ್ಷ ಬಿ. ರಾಮಚಂದ್ರಪ್ಪ, ಕೆ.ರಾಜಶೇಖರಪ್ಪ, ಜರುಗು ಬೋರಯ್ಯ, ಕೋಣನವರ ಮಲ್ಲಿಕಾರ್ಜುನ, ಪಾಲಯ್ಯನಕೋಟೆ ಮಂಜುನಾಥ, ಜೊಳ್ಳಜ್ಜರ ಕೆಂಗಣ್ಣ, ದಾಸರೋಬಯ್ಯ, ಪರ‍್ರಪ್ಪರ ಶರಣಪ್ಪ, ತುಡುಮ ಗುರುರಾಜ, ಗ್ರಾಪಂ ಸದಸ್ಯ ಅಜ್ಜಣ್ಣ, ಯಲ್ಲಪ್ಪ, ತಾಪಂ ಮಾಜಿ ಸದಸ್ಯ ಪಾಪನಾಯಕ, ಚಿನ್ನಯ್ಯ, ಎಚ್.ಬಿ.ರುದ್ರಪ್ಪ, ದೇವರಾಜ, ಕಳ್ಳಜ್ಜರ ಮಲ್ಲಿಕಾರ್ಜುನ ಸೇರಿ ಗ್ರಾಮಸ್ಥರು ಇಂತಹ ಅಪರೂಪದ ಆಚರಣೆಗೆ ಸಾಕ್ಷಿಯಾದರು.
ಪುರಾತನದಿಂದ ನಡೆದ ಸಂಪ್ರದಾಯ: ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದ ಗೌಡರ ಮನೆಯಿಂದ ಕುದುರೆಯು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ (ಕಂಪಳದೇವರಹಟ್ಟಿ) ಗ್ರಾಮಕ್ಕೆ ವರ್ಷಕ್ಕೊಮ್ಮೆ ಹೊರಡುವುದು ಪುರಾತನದಿಂದ ನಡೆದಿರುವ ಸಂಪ್ರದಾಯ. ತುಡುಮನವರ ಮನೆಯಿಂದ ಕೆಜಿಗಟ್ಟಲೇ ಬಂಗಾರದ ಆಭರಣಗಳಿಂದ ಸಿಂಗಾರಗೊಳಿಸಲಾಗುತ್ತಿತ್ತು. ಆ ವೈಭವ ನೋಡಲು ಸುತ್ತಮುತ್ತಲ ಹಳ್ಳಿಗಳಿಂದ ಸಾಕಷ್ಟು ಜನರು ಆಗಮಿಸುತ್ತಿದ್ದರು. ಆಗ ನಾವಿನ್ನೂ ಚಿಕ್ಕವರಿದ್ದೆವು ಎಂದು ಗ್ರಾಮದ ಅನೇಕ ಹಿರಿಯರು ನೆನಪಿನ ಮೆಲುಕು ಹಾಕಿದರು. ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದಿಂದ ಕುದುರೆ ತೆರಳಿದರೆ ಮಾತ್ರ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿ ಗ್ರಾಮದಲ್ಲಿ ಬುಡಕಟ್ಟು ಆಚರಣೆಯ ಶ್ರೀ ಕಂಪಳರಂಗಸ್ವಾಮಿ ದೇವರ ಜಾತ್ರೆಗೆ ಚಾಲನೆ ಸಿಗುತ್ತದೆ.