ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇತ್ತೀಚಿಗೆ ಬಿದ್ದ ಮಳೆಯಿಂದಾಗಿ ಜಿಲ್ಲೆಯಲ್ಲಿ 39.55 ಹೆಕ್ಟೆರ್ ಪ್ರದೇಶದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಹಾನಿಯಾದ ಬೆಳೆಗಳ ರೈತರಿಗೆ ಪರಿಹಾರ ನೀಡಲು ಪರಿಹಾರ ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ಒದಗಿಸಲು ಕ್ರಮ ತೆಗೆದುಕೊಳ್ಳುವಂತೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್. ಮಂಜುಳ ಅಧಿಕಾರಿಗಳಿಗೆ ಸೂಚಿಸಿದರು.ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ತೋಟಗಾರಿಕೆ ಬೆಳೆಹಾನಿಇತ್ತೀಚಿಗೆ ಜಿಲ್ಲೆಯಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ ಬೆಳೆಗಳು ಹಾನಿಗೆ ಒಳಗಾಗಿರುವುದಿಲ್ಲ. ಆದರೆ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಟೋಮೊಟೋ, ಮಾವು ಬೆಳೆಗಳಿಗೆ ಹಾನಿಯಾಗಿದೆ. ಬೆಳೆ ಹಾನಿಗೆ ಒಳಗಾದ ರೈತರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮಗಳನ್ವಯ ಪರಿಹಾರ ಒದಗಿಸಬೇಕಾಗಿದೆ. ಆದ್ದರಿಂದ ಪರಿಹಾರ ಪೋರ್ಟಲ್ ನಲ್ಲಿ ಬೆಳೆ ಹಾನಿ ವಿವರವನ್ನು ನಮೂದಿಸಲು ಅವಕಾಶ ಕಲ್ಪಿಸುವಂತೆ ಹಾಗೂ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು. ಜೂನ್ 10ರ ಅಂತ್ಯಕ್ಕೆ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 26.6 ಮಿ.ಮೀ ರಷ್ಟಿದ್ದು, ಪ್ರಸ್ತುತ ವಾಡಿಕೆಗಿಂತ ಅಧಿಕ ಮಳೆಯಾಗಿರುತ್ತದೆ. ಪ್ರಸ್ತುತ ಈ ವರೆಗೆ 70.2 ಮಿ.ಮೀ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಅಧಿಕ ಮಳೆಯಾಗುವ ಸೂಚನೆಯಿದ್ದು, ಮಳೆಯಿಂದ ಬೆಳೆಗಳು ಹಾನಿಯಾದಲ್ಲಿ ಕೂಡಲೆ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಇತರೆ ಇಲಾಖೆಗಳ ಸಮನ್ವಯದೊಂದಿಗೆ ಜಂಟಿ ಸಮೀಕ್ಷೆ ನಡೆಸಿ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸುವ ಕೆಲಸ ನಿಯಮಿತವಾಗಿ ಹಾಗೂ ಕಾಲೋಚಿತ ರೀತಿಯಲ್ಲಿ ಆಗಬೇಕು ಎಂದು ತಿಳಿಸಿದರು. ಯುವ ನಿಧಿ ಎಲ್ಲರಿಗೂ ತಲುಪಿಲ್ಲ
ಯುವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 3,425 ಉದ್ಯೋಗಾಕಾಂಕ್ಷಿಗಳು ಅರ್ಹರಿದ್ದು, 2,723 ಯುವ ಜನರು ನೋಂದಾಯಿಸಿ ಕೊಂಡಿದ್ದಾರೆ ಈ ಪೈಕಿ ಕೇವಲ 400 ಜನರಿಗೆ ಯುವ ನಿಧಿ ಹಣ ಪಾವತಿಯಾಗಿದೆ. ಬಾಕಿ ಉಳಿದ ಇತರ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ ಪಾವತಿಯಾಗದಿರುವುದಕ್ಕೆ ಕಾರಣವೇನು ಎಂದು ಪರಿಶೀಲಿಸಿ ಕೂಡಲೆ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಉದ್ಯೋಗ ವಿನಿಯಮ ಅಧಿಕಾರಿಗೆ ತಿಳಿಸಿದರು.ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, 2023-24ನೇ ಸಾಲಿನಲ್ಲಿ ಜಿಲ್ಲೆಯು ಬರಸ್ಥಿತಿಯನ್ನು ಅನುಭವಿಸಿತ್ತು. ಬರಸ್ಥಿತಿಗೆ ಸಿಲುಕಿದ 97,278 ರೈತರಿಗೆ 10 ಹಂತಗಳಲ್ಲಿ ಒಟ್ಟು 55,03,95,577 ರೂಗಳನ್ನು ಅವರ ಖಾತೆಗಳಿಗೆ ನೇರವಾಗಿ ಡಿಬಿಟಿ ಮುಖಾಂತರ ಪರಿಹಾರ ಪಾವತಿಸಲಾಗಿದೆ. ಪ್ರಸ್ತುತ ಜಿಲ್ಲೆಯ 34 ಗ್ರಾಮ ಪಂಚಾಯಿತಿಗಳ 45 ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದ 29 ವಾರ್ಡ್ ಗಳಲ್ಲಿ ಕುಡಿಯುವ ನೀರನ್ನು ಖಾಸಗಿ ಕೊಳವೆ ಬಾವಿಗಳ ಮೂಲಕ ಪೂರೈಸಲಾಗುತ್ತಿದೆ. ಇದಕ್ಕಾಗಿ ಖಾಸಗಿ ಕೊಳವೆ ಬಾವಿಗಳ ಮಾಲಿಕರಿಗೆ 26,26,900 ರೂಗಳನ್ನು (2023 ರ ಡಿಸೆಂಬರ್ ನಿಂದ ಈವರೆಗೆ) ಪಾವತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ಇಲ್ಲಜಿಲ್ಲೆಯ ಜಾನುವಾರುಗಳಿಗೆ ಪ್ರಸ್ತುತ ಮೇವಿನ ಸಮಸ್ಯೆ ಇರುವುದಿಲ್ಲ. ಪ್ರಸ್ತುತ 2,39,571 ಮೆ.ಟನ್ ಮೇವು ಲಭ್ಯವಿದ್ದು, 19 ವಾರಗಳಿಗೆ ಆಗಲಿದೆ. ಜೊತೆಗೆ ಮೇವು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲು ಜಿಲ್ಲೆಯಲ್ಲಿ 30,617 ಮೇವಿನ ಮಿನಿ ಕಿಟ್ ಗಳನ್ನು ವಿತರಿಸಲಾಗಿದೆ. ಇದರಿಂದ 2,39,571 ಮೆ.ಟನ್ ಮೇವು ನಿರೀಕ್ಷೆ ಮಾಡಲಾಗಿದೆ ಎಂದು ಸಭೆಗೆ ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ .ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.