ಹೊಸಪೇಟೆ: ಹೊಸಪೇಟೆ-ಅರಸಿಕೆರೆ ನಡುವೆ ಸಂಚರಿಸಲಿರುವ ನೂತನ ಡೆಮೋ ರೈಲಿಗೆ ಶುಕ್ರವಾರ ಬೆಳಗ್ಗೆ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ವಿಜಯನಗರ ಜಿಲ್ಲೆ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ರೈಲಿನ ಎಂಜಿನ್‌ಗೆ ಪೂಜೆ ಸಲ್ಲಿಸಿ, ಸಿಹಿ ವಿನಿಯಮ ಮಾಡಿಕೊಂಡು ಸಂಭ್ರಮಿಸಿದರು. ಈ ರೈಲು ಮಧ್ಯ ಕರ್ನಾಟಕದ ಐದು ಜಿಲ್ಲೆಗಳಾದ ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸಲಿದ್ದು, ಒಟ್ಟು 29 ಸ್ಥಳಗಳಲ್ಲಿ ನಿಲುಗಡೆ ಸೌಲಭ್ಯವಿದೆ.
ಅರಸಿಕೆರೆ ರಾಜ್ಯದ ಪ್ರಮುಖ ಜಂಕ್ಷನ್ ಆಗಿದ್ದು, ಅಲ್ಲಿಂದ ಬೆಂಗಳೂರು-ಮೈಸೂರು-ಹಾಸನ-ಬಂದರು ನಗರ ಮಂಗಳೂರಿಗೆ ನೇರ ಸಂಪರ್ಕ ದೊರೆಯಲಿದೆ. ವಿಶೇಷವಾಗಿ ಮಲೆನಾಡು ಮತ್ತು ಕರ್ನಾಟಕದ ವಿಜಯನಗರ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವುದರಿಂದ ರೈಲು ಆರಂಭದಿಂದ ಈ ಭಾಗದಲ್ಲಿ ಪ್ರವಾಸೋಧ್ಯಮ, ವಾಣಿಜ್ಯ ಹಾಗೂ ಆರ್ಥಿಕ ಚಟುವಟಿಕೆಗೆ ಉತ್ತೇಜನ ದೊರೆಯುವುದೆಂದು ನಿರೀಕ್ಷಿಸಲಾಗಿದೆ.
ಆರಂಭ ದಿನದಂದೆ ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಕೊಟ್ಟೂರಿನಲ್ಲಿ ನೂರಾರು ಜನರು ರೈಲನ್ನು ಸಂಭ್ರಮದಿಂದ ಸ್ವಾಗತಿಸಿ ಪೂಜೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು. ವಿಶೇಷ ರೈಲಾಗಿ ವಾರದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ (5 ದಿನ) ಸಂಚರಿಸುವ ರೈಲನ್ನು ಖಾಯಂಗೊಳಿಸಿ, ಮೈಸೂರು ಇಲ್ಲವೇ ಮಂಗಳೂರಿಗೆ ವಿಸ್ತರಿಸುವಂತೆ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಅಧ್ಯಕ್ಷ ವೈ. ಯಮುನೇಶ್ ಹಾಗೂ ಕಾರ್ಯದರ್ಶಿ ಮಹೇಶ್ ಕುಡುತಿನಿ ಒತ್ತಾಯಿಸಿದ್ದಾರೆ.ಸ್ಥಳೀಯ ಮುಖಂಡರಾದ ಯು. ಆಂಜನೇಯಲು, ದೀಪಕ್ ಹುಳ್ಳಿ, ಕಲ್ಲೇಶ್, ನಜೀರ್ ಸಾಹೇಬ್, ತಿಪ್ಪೇಸ್ವಾಮಿ, ದೇವರೆಡ್ಡಿ, ವರುಣ್, ರಾಮಾಲಿ, ಅರವಿಂದ ಜಾಲಿ, ಟೈಲರ್ ಬಸವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಹೊಸಪೇಟೆ-ಅರಸಿಕೇರೆ ಡೆಮೊ ರೈಲಿಗೆ ಅದ್ಧೂರಿ ಸ್ವಾಗತ