ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಅವರ ತತ್ವಗಳು, ಮೌಲ್ಯಗಳು, ಸಿದ್ದಾಂತಗಳು ಜನಮನವನ್ನು ಪ್ರೇರೇಪಿಸುತ್ತವೆ ಮತ್ತು ಹೊಸ ತಲೆಮಾರಿಗೆ ತತ್ವಜ್ಞಾನದ ಸನ್ಮಾರ್ಗ ತೋರಿಸುತ್ತವೆ.
ತಾಲೂಕಾಡಳಿತದಿಂದ ನುಲಿಯ ಚಂದಯ್ಯ, ನಾರಾಯಣ ಗುರು ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ ಹಳಿಯಾಳನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಅವರ ತತ್ವಗಳು, ಮೌಲ್ಯಗಳು, ಸಿದ್ದಾಂತಗಳು ಜನಮನವನ್ನು ಪ್ರೇರೇಪಿಸುತ್ತವೆ ಮತ್ತು ಹೊಸ ತಲೆಮಾರಿಗೆ ತತ್ವಜ್ಞಾನದ ಸನ್ಮಾರ್ಗ ತೋರಿಸುತ್ತವೆ. ಈ ಮಹಾನ್ ಚಿಂತಕರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಪುರಸಭೆಯ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ ಹೇಳಿದರು.
ಶುಕ್ರವಾರ ತಾಲೂಕಾಡಳಿತ ಸೌಧದ ಸಭಾಂಗಣದಲ್ಲಿ ತಾಲೂಕಾಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ ನುಲಿಯ ಚಂದಯ್ಯ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿ ಆಚರಣೆ ಉದ್ದೇಶಿಸಿ ಉಪನ್ಯಾಸ ನೀಡಿದರು.ನುಲಿಯ ಚಂದಯ್ಯ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಇಬ್ಬರೂ ಸಮಾಜದ ಅಸಮಾನತೆ, ಜಾತಿಭೇದ ಮತ್ತು ಶೋಷಣೆಗೆ ವಿರುದ್ಧವಾಗಿ ನಿಂತವರು. ಚಂದಯ್ಯ ಕಾಯಕ ಮತ್ತು ದಾಸೋಹದ ಮೌಲ್ಯ ಎತ್ತಿಹಿಡಿದು, ಕಾಯಕವೇ ಕೈಲಾಸ ಎಂಬ ಬಸವ ತತ್ವದ ಬದುಕನ್ನು ಆಚರಣೆಯಲ್ಲಿ ತೋರಿಸಿದ ಶರಣಾಗಿದ್ದರೇ, ಶ್ರೀ ನಾರಾಯಣ ಗುರುಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶದ ಮೂಲಕ ಮಾನವ ಸಮಾನತೆ ಮತ್ತು ಆತ್ಮಗೌರವವನ್ನು ಸಮಾಜಕ್ಕೆ ನೀಡಿದರು. ಇಂದಿಗೂ ಸಮಾನತೆ, ನ್ಯಾಯ, ಶಿಕ್ಷಣ ಮತ್ತು ಮಾನವೀಯತೆಗಾಗಿ ಸಮಾಜದಲ್ಲಿ ಅವರ ಚಿಂತನೆ ಮತ್ತು ಸಮಾಜ ಸುಧಾರಣೆಯ ಕಾರ್ಯ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿರಸ್ತೇದಾರ ಹನುಮಂತ ಪರೋಡಕರ ಮಾತನಾಡಿದರು.ಭಜಂತ್ರಿ ಸಮಾಜದ ಹಿರಿಯರಾದ ಗೀತಪ್ಪ ಭಜಂತ್ರಿ, ರವಿ ನಾಗೇಶ್ರೀ, ನಿವೃತ್ತ ಪಿಎಸ್‌ಐ ಜಾಯಪ್ಪ ಭಜಂತ್ರಿ, ನಿವೃತ್ತ ಶಿಕ್ಷಕ ಪ್ರಕಾಶ ಕೆಂಗೇರಿ ಇದ್ದರು. ಕಾರ್ಯಕ್ರಮದಲ್ಲಿ ಭಜಂತ್ರಿ ಸಮಾಜದವರು ಉಪಸ್ಥಿತರಿದ್ದರು.
ಕಂದಾಯ ಇಲಾಖೆಯ ಪರಶುರಾಮ ಶಿಂಧೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ಜಕ್ಕಲಿ ಕಾರ್ಯಕ್ರಮ ನಿರ್ವಹಿಸಿದರು.