ಕೊಟ್ಟೂರು: ಈ ಭಾಗದ ರೈಲ್ವೆ ಪ್ರಯಾಣಿಕರಿಗೆ ಆಶಾದಾಯಕ ಸುದ್ದಿಯನ್ನು ನೈಋತ್ಯ ರೈಲ್ವೆ ವಲಯ ಪ್ರಕಟಿಸಿದ್ದು, ಹೊಸಪೇಟೆ ಜಂಕ್ಷನ್‌ನಿಂದ ಅರಸಿಕೆರೆ ಜಂಕ್ಷನ್ ನಡುವೆ ಅನಿಮಿಯತ (ಆನ್ ರಿಸರ್ವಡ್) ಡೆಮು ವಿಶೇಷ ರೈಲು ಸಂಚಾರವನ್ನು ಆರಂಭಿಸಲು ನಿರ್ದೇಶಿಸಿ ಆದೇಶ ಹೊರಡಿಸಿದೆ.
ವಿಸ್ತರಣೆ ಸಾಧ್ಯತೆ: ಕೊಟ್ಟೂರು ಮಾರ್ಗದ ಈ ನೂತನ ರೈಲು ವರ್ಷದಲ್ಲಿ ಪ್ರತಿ ಮೂರು ತಿಂಗಳ ಕಾಲ ಸಂಚರಿಸಲಿದ್ದು, ಈ ಸಂಚಾರ ಯಶಸ್ವಿಯಾಗಿ ಮೂರು ವರ್ಷಗಳ ಕಾಲ ನಂತರ ನಿರಂತರ ಸಂಚಾರ ಸೇವೆ ಒದಗಿಸಲಿದೆ. ಈ ಭಾಗದಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾರ್ಯ ಮುಗಿದ ಆನಂತರ ವ್ಯಾಸ ಕಾಲನಿ ಮತ್ತು ಅಮರಾವತಿಯ ಮಾರ್ಗ ಮೈಸೂರು ವರೆಗೆ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ರೈಲ್ವೆ ಹೋರಾಟ ಸಮಿತಿ ಸಂಚಾಲಕ ಶ್ರೀಧರ ಪತ್ತಿಕೊಂಡ ಹೇಳಿದರು.
ರೈಲು ಸಂಚಾರ: ಬಳಕೆದಾರರ ಸಂಘ ಹರ್ಷಆ. 28ರಂದು ಹೊಸಪೇಟೆ-ಅರಸೀಕೆರೆ ನೂತನ ಡೆಮೋ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ನಂದಿಪುರ ಮಠದ ಮಹೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ನಿರಂತರವಾಗಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ರೈಲ್ವೆ ಸಮಿತಿಗಳು ನಡೆಸಿದ ಹೋರಾಟಕ್ಕೆ ನೈಋತ್ಯ ರೈಲ್ವೆ ವಲಯ ಸ್ಪಂದಿಸಿದೆ. ಈ ರೈಲಿನಿಂದ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಿಂದ ದಾವಣಗೆರೆ ಕಡೆಗೆ ಸಂಚರಿಸುವ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ಆಸ್ಪತ್ರೆಗಳಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಭಾಗದ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಮತ್ತು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ ಕುಡುತಿನಿ ಅಭಿನಂದಿಸಿದ್ದಾರೆ.