ವಿಜಯನಗರ ಜಿಲ್ಲಾದ್ಯಂತ ಬುಧವಾರ ಈದ್‌ ಮಿಲಾದ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತು ಜಿಲ್ಲೆಯಲ್ಲಿ ಮುಸ್ಲಿಮರು ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿದರು.

ಹೊಸಪೇಟೆ: ವಿಜಯನಗರ ಜಿಲ್ಲಾದ್ಯಂತ ಬುಧವಾರ ಈದ್‌ ಮಿಲಾದ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತು ಜಿಲ್ಲೆಯಲ್ಲಿ ಮುಸ್ಲಿಮರು ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿದರು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿರುವ ಈದ್ಗಾ ಮೈದಾನದಿಂದ ಆರಂಭವಾದ ಮೆರವಣಿಗೆ ಮದಕರಿ ನಾಯಕ ವೃತ್ತ, ನಗರಸಭೆ ಕಚೇರಿ, ಬಿಡಿಸಿಸಿ ಬ್ಯಾಂಕ್‌, ಬಸ್‌ ನಿಲ್ದಾಣ, ಪುನೀತ್‌ ರಾಜಕುಮಾರ್‌ ವೃತ್ತ, ಪುಣ್ಯಮೂರ್ತಿ ವೃತ್ತ, ಮೂರಂಗಡಿ ವೃತ್ತ ಮಾರ್ಗವಾಗಿ ತೆರಳಿ, ಟೌನ್‌ ರೀಡಿಂಗ್ ರೂಮ್‌ ಆವರಣದಲ್ಲಿ ಬಹಿರಂಗ ಸಭೆಯಾಗಿ ಮಾರ್ಪಾಡಾಯಿತು.

ಹೊಸಪೇಟೆ ನಗರದ ಮೆರವಣಿಗೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎನ್‌.ಎಫ್‌. ಮಹಮ್ಮದ್‌ ಇಮಾಮ್‌ ನಿಯಾಜಿ, ಮುಖಂಡರಾದ ಕೆ. ಬಡಾವಲಿ, ಖಾಜಾ ಹುಸೇನ್‌ ನಿಯಾಜಿ, ಈದ್‌ ಮಿಲಾದ್‌ ಕಮಿಟಿ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌. ಜಾಹ್ನವಿ ಮಾರ್ಗದರ್ಶನದಲ್ಲಿ ಹೊಸಪೇಟೆ ಡಿವೈಎಸ್‌ಪಿ ಪಿ. ಮುರಳೀಧರ್‌ ನೇತೃತ್ವದಲ್ಲಿ ಪಿಐಗಳಾದ ಡಿ. ಹುಲುಗಪ್ಪ, ಗುರುರಾಜ ಕಟ್ಟಿಮನಿ, ಸೋಮ್ಲಾನಾಯ್ಕ್ ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದರು.

ಇದೇ ರೀತಿಯಲ್ಲಿ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಮತ್ತು ಕಮಲಾಪುರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈದ್‌ ಮಿಲಾದ್‌ ಹಬ್ಬ ಆಚರಿಸಿದರು.

ಹರಪನಹಳ್ಳಿಯಲ್ಲಿ ಈದ್ ಮಿಲಾದ್ ಮೆರವಣಿಗೆ:

ಹರಪನಹಳ್ಳಿ ತಾಲೂಕಿನಾದ್ಯಂತಹ ಮುಸ್ಲಿಮರು ಬುಧವಾರ ಪ್ರವಾದಿ ಮಹಮ್ಮದ್ ಜನ್ಮದಿನವೆಂದು ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.ಹರಪನಹಳ್ಳಿ ಪಟ್ಟಣದಲ್ಲಿ ಬಾಣಗೆರೆ ಜಾಮೀಯಾ ಮಸೀದಿಯಿಂದ ಹೊರಟ ಈದ್ ಮಿಲಾದ್ ಮೆರವಣಿಗೆ ಹೊಸಪೇಟೆ ರಸ್ತೆ, ಚಿತ್ತಾರಗೇರಿ, ತಾಯಮ್ಮನ ಹುಣಸೇಮರ, ಪುರಸಭೆ, ತೆಗ್ಗಿನಮಠ, ಗುಂಡಿನಕೇರಿ, ಬಂಗಾರಗೇರಿ, ಕೊಟ್ಟೂರು ರಸ್ತೆ, ತೆಲುಗರ ಓಣಿ, ಪಠಾಣಗೇರಿ, ಅಗಸನಕಟ್ಟೆ, ಶಿಲಾರಗೇರಿ ಮಾರ್ಗವಾಗಿ ಹಡಗಲಿ ರಸ್ತೆಯಲ್ಲಿರುವ ಜಮಾಲ್ ಶಾವಲಿ ದರ್ಗಾಕ್ಕೆ ತಲುಪಿ ಅಲ್ಲಿ ಮುಕ್ತಾಯಗೊಂಡಿತು.ಮೆರವಣಿಗೆಯಲ್ಲಿ ಮುಜಾಮಿಲ್ ಮೌಲಾನ, ಮುತುವಲ್ಲಿ ಇಸ್ಮಾಯಿಲ್ ಸಾಹೇಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ವಕೀಲ ಬಿ. ಮೆಹಬೂಬ್ ಸಾಹೇಬ್, ಪುರಸಭಾ ಸದಸ್ಯ ಲಾಟಿದಾದಾಪೀರ, ಎಂಜಿನಿಯರ್ ನದೀಮ ಅಕ್ರಮ್‌ , ಡಂಕಿ ವಾಶೀಮ್, ಷರೀಪ ಸಾಹೇಬ್, ವಕೀಲ ಶಿರಾಜ್, ಡಂಕಿ ಇಸ್ಮಾಯಿಲ್, ಸಾಹೇಬ್, ಮುಜು ವಕೀಲ, ನಾಲ್ ಬಂದ್ ಬಾಷಾ, ಕೋಳಿ ಮಕ್ಬುಲ್ ಪಾಲ್ಗೊಂಡಿದ್ದರು. ಡಿವೈಎಸ್ಪಿ ಸಂತೋಷ ಚವ್ಹಾಣ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ಸಜ್ಜನ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್‌ ಏರ್ಪಡಿಸಲಾಗಿತ್ತು.