ಹೊಸಪೇಟೆ: ಹೊಸ ವರ್ಷದ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಸಿದ ಯುವ ಜನರು 2025ರ ಕೊನೆಯ ದಿನ ಬುಧವಾರ ತಡರಾತ್ರಿ ವಿವಿಧ ಕಡೆಗಳಲ್ಲಿ ಕೇಕ್ ಕತ್ತರಿಸಿ 2026ರ ಸಂಭ್ರಮಾಚರಣೆ ನಡೆಸಿದರು. ಹಂಪಿಯಲ್ಲಿ ದೇಶ, ವಿದೇಶಿ ಪ್ರವಾಸಿಗರು ಕೂಡ ಹೊಸ ವರ್ಷಾಚರಣೆ ನಡೆಸಿದರು.
ಮಧ್ಯರಾತ್ರಿ ಹೋಟೆಲ್‌ಗಳು, ಡಾಬಾಗಳು, ರೆಸಾರ್ಟ್‌ಗಳು, ತೋಟದ ಮನೆಗಳಲ್ಲಿ ಮಧ್ಯರಾತ್ರಿವರೆಗೆ ಪಾರ್ಟಿಗಳು ನಡೆದವು. ಮಧ್ಯರಾತ್ರಿ 12 ಗಂಟೆ ಆಗುತ್ತಿದ್ದಂತೆ ಕೇಕ್‌ಗಳನ್ನು ಕತ್ತರಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು. ಸ್ನೇಹಿತರಿಗೆ ಮೊಬೈಲ್ ಕರೆ, ಎಸ್‌ಎಂಎಸ್, ವಾಟ್ಸಾಪ್ ಸಂದೇಶಗಳ ಮೂಲಕ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು.
ಕೇಕ್ ಖರೀದಿ ಜೋರು:ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ಬೇಕರಿಗಳಲ್ಲಿ ಕೇಕ್ ಖರೀದಿ ಭರಾಟೆ ಜೋರಾಗಿತ್ತು. ವಿವಿಧ ರೀತಿಯ ಕೇಕ್‌ಗಳ ಖರೀದಿಗೆ ಜನರು ಬೇಕರಿಗಳ ಮುಂದೆ ಮುಗಿಬಿದ್ದಿದ್ದರು. ವಿಶೇಷ ಕೇಕ್‌ಗಳು, ಪೇಸ್ಟ್ರಿಗಳನ್ನು ತಯಾರಿಸಿ ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದ ಬೇಕರಿಗಳಲ್ಲಿ ಬೆಳಗ್ಗೆಯಿಂದಲೇ ಖರೀದಿ ನಡೆದಿತ್ತು. ಹೊಸ ವರ್ಷದ ಕ್ಷಣ ಹತ್ತಿರವಾಗುತ್ತಿದ್ದಂತೆ ಪಾರ್ಟಿಗಳ ಆಯೋಜನೆಯೂ ಭರದಿಂದ ಸಾಗಿತ್ತು. ಬೇಕರಿಗಳಲ್ಲಿ ಕಳೆದ ಒಂದು ವಾರದಿಂದ ಕೇಕ್ ತಯಾರಿ ಜೋರಾಗಿ ನಡೆದಿದ್ದು, ಗ್ರಾಹಕರಿಗೆ ಆಕರ್ಷಿಸುವಂತೆ ಬಗೆಬಗೆಯ ಕೇಕ್‌ಗಳನ್ನು ಸಿದ್ದಗೊಳಿಸಲಾಗಿತ್ತು. 1 ಕೆ.ಜಿ.ಯಿಂದ 13 ಕೆ.ಜಿ. ಗಾತ್ರದ ಕೇಕ್‌ಗಳು ಬಿಕರಿಯಾದವು.
ಖಾಕಿ ಕಣ್ಗಾವಲು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿತ್ತು. ವಿಶ್ವ ವಿಖ್ಯಾತ ಹಂಪಿ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ನಗರದಲ್ಲಿ ತಡರಾತ್ರಿ ಯುವಕರ ಪುಂಡಾಟ ಮತ್ತು ಹಂಪಿಯ ಸುತ್ತಮುತ್ತಲಿನಲ್ಲಿ ಎಸ್ಪಿ ಸೇರಿಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪೆಟ್ರೋಲಿಂಗ್ ನಡೆಸಿದರು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ವಿಶೇಷ ನಿಗಾ ವಹಿಸಲಾಗಿತ್ತು. ಭದ್ರತೆಗೆ ಹಂಪಿ-ಹೊಸಪೇಟೆ ಭಾಗದಲ್ಲಿ 95 ಸೇರಿದಂತೆ ಇಡೀ ಜಿಲ್ಲೆಯಲ್ಲಿ 180 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. 4 ಡಿವೈಎಸ್ಪಿ, 10 ಸಿಪಿಐ, 30 ಪಿಎಸ್‌ಐ, 65 ಎಎಸ್‌ಐ, 550 ಎಚ್‌ಸಿ/ಪಿಸಿ, 200 ಗೃಹರಕ್ಷಕರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. 2 ಕೆಎಸ್‌ಆರ್‌ಪಿ ತುಕಡಿ ಹಾಗೂ 55 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿತ್ತು.