ಹೊಸಪೇಟೆ ನಗರಸಭೆ: ₹77.52 ಕೋಟಿ ಗಾತ್ರದ ಬಜೆಟ್‌ ಮಂಡನೆ

KannadaprabhaNewsNetwork | Published : Mar 28, 2025 12:33 AM

ಸಾರಾಂಶ

ಇಲ್ಲಿನ ನಗರಸಭೆಯಲ್ಲಿ ಒಟ್ಟು ₹77,52,76,013 ಭಾರಿ ಗಾತ್ರದ ಬಜೆಟ್‌ನ್ನು ಅಧ್ಯಕ್ಷ ರೂಪೇಶ್‌ಕುಮಾರ ಗುರುವಾರ ಮಂಡಿಸಿದರು. ಈ ಬಜೆಟ್‌ ₹10,81,496 ಉಳಿತಾಯ ಬಜೆಟ್‌ ಆಗಿದೆ ಎಂದು ಘೋಷಿಸಿದರು.

ನಗರಸಭೆಯಲ್ಲಿ ಅಭಿವೃದ್ಧಿ ಮಂತ್ರ, ಕಲ್ಯಾಣ ಯೋಜನೆಗಳಿಗೆ ಆದ್ಯತೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಇಲ್ಲಿನ ನಗರಸಭೆಯಲ್ಲಿ ಒಟ್ಟು ₹77,52,76,013 ಭಾರಿ ಗಾತ್ರದ ಬಜೆಟ್‌ನ್ನು ಅಧ್ಯಕ್ಷ ರೂಪೇಶ್‌ಕುಮಾರ ಗುರುವಾರ ಮಂಡಿಸಿದರು. ಈ ಬಜೆಟ್‌ ₹10,81,496 ಉಳಿತಾಯ ಬಜೆಟ್‌ ಆಗಿದೆ ಎಂದು ಘೋಷಿಸಿದರು.

ಶಾಸಕ ಎಚ್‌.ಆರ್‌. ಗವಿಯಪ್ಪ ಅವರ ಉಪಸ್ಥಿತಿಯಲ್ಲಿ 2025-26ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ ಅವರು, ನಗರಸಭೆ ನಿಧಿಯಿಂದ ₹28,45,25,013, ಅನುದಾನ ₹40,97,36,000, ₹8,10,15,000 ಅಸಾಮಾನ್ಯ ಆದಾಯವಿದ್ದು, ವೇತನ ಸೇರಿದಂತೆ ನಗರಸಭೆಯ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಕಾಮಗಾರಿಗಳ ಯೋಜನೆ ಕೂಡ ಹಾಕಿಕೊಳ್ಳಲಾಗಿದೆ ಎಂದು ಪ್ರಕಟಿಸಿದರು.

ಕೇಂದ್ರ ಸರ್ಕಾರದ 15ನೇ ಹಣಕಾಸಿನಲ್ಲಿ ₹12.36 ಕೋಟಿ ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆಯಾಗಿದ್ದು, ನೀರು ಸರಬರಾಜು ಸಂಬಂಧಿತ ಕಾಮಗಾರಿಗಳಿಗಾಗಿ ₹3.70 ಕೋಟಿ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ₹3.70 ಕೋಟಿ, ಕೊಳಗೇರಿ ಅಭಿವೃದ್ಧಿ ರಸ್ತೆಗಳು, ಮಳೆ ನೀರು ಚರಂಡಿ ಕಾಮಗಾರಿಗಳು, ಸ್ಮಶಾನಗಳ ಅಭಿವೃದ್ಧಿ ಹಾಗೂ ಬೀದಿದೀಪಗಳ ವ್ಯವಸ್ಥೆ ಸೇರಿದಂತೆ ₹4.96 ಕೋಟಿ, ಒಟ್ಟಾರೆ ₹12.36 ಕೋಟಿಯ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿ ಅನುಮೋದನೆ ಪಡೆದು ಕಾಮಗಾರಿ ಕೈಗೊಂಡು ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಸುಲಭ ಶೌಚಾಲಯ:

ನಗರದ ಪ್ರಮುಖ 10 ಸ್ಥಳಗಳಲ್ಲಿ ಮಾದರಿ ಸುಲಭ ಶೌಚಾಲಯ ನಿರ್ಮಾಣ, ಪೌರಕಾರ್ಮಿಕರ ಆರೋಗ್ಯ ವಿಶ್ರಾಂತಿಗಾಗಿ ನಗರಸಭೆ ಹತ್ತಿರ ವಿಶ್ರಾಂತಿ ಗೃಹ ನಿರ್ಮಾಣಕ್ಕಾಗಿ ಕ್ರಮ ವಹಿಸಲಾಗುವುದು. ಡಿಎಂಎಫ್ ಅನುದಾನದಲ್ಲಿ ₹10 ಕೋಟಿ ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕ ಕಾಮಗಾರಿ ಕೈಗೊಳ್ಳಲಾಗಿದೆ. 240 ನಿವೇಶನಗಳು ಪೌರಕಾರ್ಮಿಕ ಗೃಹಗಳ ನಿರ್ಮಾಣಕ್ಕಾಗಿ ಕ್ರಮ, ಜನರಿಗೆ ತ್ವರಿತ ಸೇವೆ ನೀಡಲು ನಗರಸಭೆ ಸೇವೆಗಳನ್ನು ಕರ್ನಾಟಕ ವನ್ ಸೆಂಟರ್‌ಗೆ ಜೋಡಿಸಲಾಗುವುದು. ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಛವಾಗಿಡಲು 80 ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದರು.

ವ್ಯಕ್ತಿ ಆಧಾರಿತ ನೀರಿಗೆ ಅವಕಾಶ ಇಲ್ಲ:

ಕುಡಿಯುವ ನೀರು ಪೂರೈಕೆಗೆ ಖಾಸಗಿಯವರಿಗೆ ಅವಕಾಶ ಕೊಡಬೇಕು. ಇದರಲ್ಲಿ ರಾಜಕೀಯ ಬೇಡ, ಜನರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ ಎಂದು ಸದಸ್ಯ ತಾರಿಹಳ್ಳಿ ಜಂಬುನಾಥ ಗಮನ ಸೆಳೆದರು. ಖಾಸಗಿಯವರು ನಗರಸಭೆಯಲ್ಲಿ ನೋಂದಣಿ ಮಾಡಿ ನೀರು ಕೊಡಬಹುದು ಎಂದು ಅಧ್ಯಕ್ಷ ರೂಪೇಶ್ ಕಮಾರ ಉತ್ತರಿಸಿದರು. ಈ ವೇಳೆ ಪೌರಾಯುಕ್ತ ಮನೋಹರ್, ಖಾಸಗಿಯವರು ತಮ್ಮ ಫೋಟೋ ಹಾಕಿಕೊಂಡು ಕೊಡಲು ಅವಕಾಶವಿಲ್ಲ. ವ್ಯಕ್ತಿ ಆಧಾರಿತ ನೀರು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ನಗರಸಭೆ ಸಶಕ್ತವಾಗಿದೆ. ಖಾಸಗಿಯವರು ಬೇಕಿದ್ದರೆ ಅದೇ ಹಣವನ್ನು ನಗರಸಭೆಗೆ ಕೊಡಬಹುದು. ಆರ್ಥಿಕವಾಗಿ ಗಟ್ಟಿಯಾಗಿದ್ದೀವಿ. ಅಗತ್ಯವಿರುವ ಕಡೆ ಟ್ಯಾಂಕರ್ ನೀರು ಪೂರೈಸಲಾಗುವುದು ಎಂದರು.

ಖಾಸಗಿ ಸೈಟ್‌ ಸ್ವಚ್ಛ ಮಾಡಲಿ:

ಖಾಸಗಿ ಸೈಟ್ ಮಾಲೀಕರು ನಿವೇಶನಗಳನ್ನು ಸ್ವಚ್ಛ ಮಾಡಿಕೊಂಡರೆ ಸರಿ, ಇಲ್ಲದಿದ್ದರೆ ನಾವೇ ಸ್ವಚ್ಛಗೊಳಿಸಿ ₹10 ಸಾವಿರ ಆಸ್ತಿ ತೆರಿಗೆಯಲ್ಲಿ ಸೇರಿಸಿ ಸಂಗ್ರಹಿಸಲು ಸದಸ್ಯರು ಸಮ್ಮತಿಸಿದರು. ರಂಜಾನ್ ಹಾಗೂ ಯುಗಾದಿ ಹಬ್ಬಕ್ಕೆ ಸಂಬಂಧಿಸಿದಂತೆ ಸ್ವಚ್ಛತೆ, ಕುಡಿಯುವ ನೀರು ಸಮಸ್ಯೆ ಆಗದಂತೆ ಕ್ರಮವಹಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಫಾಗಿಂಗ್ ಒಂದು ವಾರ್ಡ್ ಕೇವಲ ಒಂದೇ ಓಣಿಗೆ ಹೊಡೆದು ಹೋಗುತ್ತಾರೆ. ಕೇಳಿದರೆ, ಫಾಗಿಂಗ್ ಸಿಬ್ಬಂದಿ ಮಾಹಿತಿ ಇಲ್ಲ ಅಂತಾರೆ ಎಂದು ಸದಸ್ಯ ಕೆ. ರಘುಕುಮಾರ ಸಭೆ ಗಮನ ಸೆಳೆದರು. ಆಗ ಪೌರಾಯುಕ್ತರು, 35 ವಾರ್ಡ್‌ಗಳಿಗೆ ತೆರಳಿ ಫಾಗಿಂಗ್ ಮಾಡಿ. ಬೇಕಾಬಿಟ್ಟಿ ಆಗುತ್ತಿರುವುದು ಗಮನಕ್ಕೆ ಬಂದಿದೆ. ವಾರ್ಡ್ ಸದಸ್ಯರು, ಸಾರ್ವಜನಿಕರ ಸಹಿ ಪಡೆದು ಹದಿನೈದು ದಿನದಲ್ಲಿ ವರದಿ ಕೊಡಬೇಕು ಎಂದು ಸೂಚಿಸಿದರು.

ಅರವಟ್ಟಿಗೆ:

ಹೊಸಪೇಟೆಯಲ್ಲಿ ಮುಂದಿನ ದಿನಗಳಲ್ಲಿ ಬೇಸಿಗೆ ಅತಿಯಾಗುವ ಸಾಧ್ಯತೆ ಇದ್ದು, ವಿವಿಧ ಪ್ರದೇಶಗಳಲ್ಲಿ ನಗರಸಭೆಯಿಂದ ಅರವಟ್ಟಿಗೆ ತೆರೆಯಲು ಕ್ರಮವಹಿಸುವಂತೆ ಸದಸ್ಯ ಜೀವರತ್ನಂ ಒತ್ತಾಯಿಸಿದರು. ಅದಕ್ಕೆ ಪೌರಾಯುಕ್ತರು ತಕ್ಷಣವೇ ಕ್ರಮ ಜರುಗಿಸುವುದಾಗಿ ಹೇಳಿದರು.

ಉಪಾಧ್ಯಕ್ಷ ರಮೇಶ್ ಗುಪ್ತ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ, ಪೌರಾಯುಕ್ತ ಮನೋಹರ್ ಇದ್ದರು.ಅಭಿವೃದ್ಧಿಗೆ ಕ್ರಮ: ಶಾಸಕ ಗವಿಯಪ್ಪ

ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ನಗರಸಭೆ ಬಜೆಟ್ ಮಂಡನಾ ಸಭೆಯಲ್ಲಿ ಉಪಸ್ಥಿತರಿದ್ದ ಅವರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾರ್ಡ್ ವಾರು ಓಡಾಡಿ ಕೆಲಸ ಮಾಡುವೆ. ಒಳ್ಳೆಯ ಬಜೆಟ್ ಮಂಡನೆಯಾಗಿದೆ. ಇಡೀ ರಾಜ್ಯದಲ್ಲಿ ಟ್ರೀಟ್‌ಮೆಂಟ್‌ ಪ್ಲಾಂಟ್ ಬಗ್ಗೆ ಯಾರೂ ಗಮನ ಕೊಡುತ್ತಿಲ್ಲ. ನಮ್ಮಲ್ಲಿ ಉತ್ತಮ ವ್ಯವಸ್ಥೆಯಾಗಿದೆ. ಇದು ದೊಡ್ಡ ಕೊಡುಗೆ. ತೆರಿಗೆ ಸಂಗ್ರಹ ಹೆಚ್ಚಾದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ₹25 ಕೋಟಿ ತೆರಿಗೆ ಸಂಗ್ರಹಿಸಬೇಕು ಎಂದರು.

ಅಭಿವೃದ್ಧಿಗಾಗಿ ರಾಜಕೀಯ ಮರೆತ ಶಾಸಕ ಗವಿಯಪ್ಪ

ಇಲ್ಲಿನ ನಗರಸಭೆಯಲ್ಲಿ ಆಡಳಿತದಲ್ಲಿರುವ ಪಕ್ಷ ಬಿಜೆಪಿ. ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಜಿದ್ದಾಜಿದ್ದಿ ನಡೆದಿತ್ತು. ಸಂಸದ ತುಕಾರಾಂ, ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಮತದಾನ ಮಾಡಿದರೂ ಕಾಂಗ್ರೆಸ್‌ ಇಲ್ಲಿ ಅಧಿಕಾರದ ಗದ್ದುಗೆ ಪಡೆಯಲಿಲ್ಲ. ಈಗ ಅದನ್ನೆಲ್ಲ ಮರೆತು ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಬಜೆಟ್‌ ಮಂಡನಾ ಸಭೆಯಲ್ಲಿ ಪಾಲ್ಗೊಂಡರು.

ಬಿಜೆಪಿಯವರೇ ಆದ ಅಧ್ಯಕ್ಷ ರೂಪೇಶ್‌ಕುಮಾರ, ಉಪಾಧ್ಯಕ್ಷ ರಮೇಶ್ ಗುಪ್ತ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್‌ ಶಂಕ್ರಿ ಅವರು ಶಾಸಕರನ್ನು ಬರಮಾಡಿಕೊಂಡು, ಬಜೆಟ್‌ ಪ್ರತಿ ಹೊಂದಿದ್ದ ಬ್ರಿಫ್‌ಕೇಸ್‌ಅನ್ನು ಅವರ ಕೈಗೆ ನೀಡಿದರು. ನಗುಮೊಗದಿಂದಲೇ ಶಾಸಕರು ನಾವೆಲ್ಲರೂ ಜತೆಗೂಡಿ ಹೊಸಪೇಟೆ ನಗರ ಅಭಿವೃದ್ಧಿಪಡಿಸೋಣ ಎಂದರು.

Share this article