ಹೊಸಪೇಟೆ: ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಐತಿಹಾಸಿಕ ಹೊಸಪೇಟೆ ನಗರದ ಸೌಂದರ್ಯ ವೃದ್ಧಿಗೆ ಒತ್ತು ನೀಡಲಾಗುವುದು. ಜತೆಗೆ ಅಭಿವೃದ್ಧಿಗಾಗಿ ತೆರಿಗೆ ಸಂಗ್ರಹಕ್ಕೂ ಆದ್ಯತೆ ನೀಡಲಾಗುವುದು ಎಂದು ನಗರಸಭೆ ನೂತನ ಅಧ್ಯಕ್ಷ ಎನ್. ರೂಪೇಶ್ ಕುಮಾರ್ ಹೇಳಿದರು.
ನಗರದಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗುವುದು. ಮುಖ್ಯರಸ್ತೆಗಳಲ್ಲಿ ಬಿದ್ದಿದ್ದ ಗುಂಡಿ ಮುಚ್ಚುವುದು, ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ನಗರದ ಎಲ್ಲ ೩೫ ವಾರ್ಡ್‌ಗಳಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಶೀಘ್ರ ಕ್ರಮ ವಹಿಸಲಾಗುವುದು ಎಂದರು.
ಸರ್ಕಾರದ ಯಾವುದಾದರೊಂದು ಯೋಜನೆಯಡಿ ಅನುದಾನ ಲಭ್ಯವಾದರೆ, ನಗರದ ಹೃದಯ ಭಾಗದಲ್ಲಿ ನಗರಸಭೆ ಮಾಲೀಕತ್ವದ ಜಾಗದಲ್ಲಿ ಶಾಪಿಂಗ್ ಮಾಲ್, ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಿ, ನಗರಸಭೆಗೆ ಆದಾಯ ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದೆ ಎಂದರು.ನಗರದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ೧೧೨ ಪೌರಕಾರ್ಮಿಕರ ನೇಮಕಾತಿಗಾಗಿ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ, ತಂತಿ ಬೇಲಿ ಹಾಕಲಾಗುವುದು. ನಗರಸಭೆಯಲ್ಲಿ ನಡೆಯುವ ಅನಧಿಕೃತ ವ್ಯವಹಾರಗಳಿಗೆ ಕಡಿವಾಣ ಹಾಕಲಾಗುವುದು. ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ಸಮನ್ವಯತೆ ಕೊರತೆ ಉಂಟಾಗದಂತೆ ಕ್ರಮ ವಹಿಸುವೆ ಎಂದರು.
ನಗರಸಭೆ ಉಪಾಧ್ಯಕ್ಷ ಜೆ.ಎಸ್. ರಮೇಶ ಗುಪ್ತಾ, ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಜೀವರತ್ನಂ, ಎಲ್.ಎಸ್. ಆನಂದ, ಹನುಮಂತಪ್ಪ (ಬುಜ್ಜಿ) ಇತರರಿದ್ದರು.