ಬೆಂಗಳೂರು : ಕೊಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ, ವೈದ್ಯರ ಸುರಕ್ಷತೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಉದ್ಯಾನ ಸೇರಿ ಬಹುತೇಕ ಆಸ್ಪತ್ರೆಗಳ ಎದುರು ಸಾವಿರಾರು ವೈದ್ಯರು ಪ್ರತಿಭಟನೆ ನಡೆಸಿ ಕಠಿಣ ಕಾನೂನು ಜಾರಿಗೆ ಆಗ್ರಹಿಸಿದರು.
ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ, ಜಯದೇವ, ಮಿಂಟೋ ಕಣ್ಣಿನ ಆಸ್ಪತ್ರೆ, ಬೌರಿಂಗ್ ಸೇರಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದಾಗಿತ್ತು. ಇಲ್ಲಿನ ವೈದ್ಯರು, ನರ್ಸ್‌ಗಳು ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಭಾರತೀಯ ವೈದ್ಯಕೀಯ ಸಂಘ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಸ್ಥೆ, ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ, ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಸೇರಿ ಹಲವು ಸಂಘಟನೆಗಳು ಪ್ರತಿಭಟನೆಗೆ ಸಾಥ್ ಕೊಟ್ಟಿದ್ದವು.
ವಿವಿಧ ಆಸ್ಪತ್ರೆಗಳ ವೈದ್ಯರು, ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಕೊಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಮೆರವಣಿಗೆ ಮೂಲಕ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಯಾಗಿ ಪ್ರತಿಭಟನೆ ನಡೆಸಿದರು. ನ್ಯಾಯಕ್ಕಾಗಿ ಆಗ್ರಹಿಸಿ ಫಲಕ ಪ್ರದರ್ಶಿಸಿ ವೈದ್ಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಐಎಂಎ ಪ್ರತಿಭಟನೆ:
ಕೊಲ್ಕತ್ತಾದ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ನೇತೃತ್ವದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರು. ಐಎಂಎ ರಾಜ್ಯಾಧ್ಯಕ್ಷ ಡಾ। ಶ್ರೀನಿವಾಸ, ‘ವೈದ್ಯರನ್ನು ರಕ್ಷಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗುತ್ತಿದೆ. ಈಗಿನ ಕಾನೂನುಗಳು ನಮ್ಮನ್ನು ರಕ್ಷಿಸುತ್ತಿಲ್ಲ. ಹೀಗಾಗಿ ಅಗತ್ಯ ಸುಧಾರಣೆ ತಂದು ವೈದ್ಯರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು’ ಎಂದು ಹೇಳಿದರು.
ಐಎಂಎ ವೈದ್ಯರ ಮೇಲಿನ ಹಿಂಸಾಚಾರ ತಡೆಗಟ್ಟುವ ಸಮಿತಿಯ ಅಧ್ಯಕ್ಷ ಡಾ। ವಿ.ಸೂರಿ ರಾಜು, ‘ವೈದ್ಯರ ಮೇಲಿನ ಹಿಂಸಾಚಾರ ಮತ್ತು ನಿರ್ಲಕ್ಷ್ಯವನ್ನು ಮುಂದುವರಿದರೆ ದೇಶದ ತಜ್ಞ ವೈದ್ಯರು ಬೇರೆ ದೇಶಗಳಿಗೆ ಹೋಗುವುದು ಹೆಚ್ಚುವ ಅಪಾಯವಿದೆ’ ಎಂದರು.
ಇಎಸ್‌ಐ ವೈದ್ಯರ ಪ್ರತಿಭಟನೆ:
ಇಎಸ್‌ಐ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ರಾಜಾಜಿನಗರದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು. ವೈದ್ಯರಿಗೆ ಅವರದೇ ಆಸ್ಪತ್ರೆಗಳಲ್ಲಿ ಸುರಕ್ಷತೆ ಇಲ್ಲದಿದ್ದರೆ, ಈ ಸುರಕ್ಷತೆ ಖಾತ್ರಿ ಯಾರಿಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಕ್ಕೆ ಎಐಡಿಎಸ್‌ಒ ಬೆಂಬಲ ಸೂಚಿಸಿತು.
ಎಐಎಂಎಸ್ ಹೋರಾಟ
ಕೆ.ಸಿ.ಜನರಲ್ ಆಸ್ಪತ್ರೆ ಎದುರು ಪ್ರತಿಭಟಿಸಿದ ಎಐಎಂಎಸ್‌ಎಸ್ ಸಂಘಟನೆ, ಆರ್.ಜಿ.ಕರ್ ಆಸ್ಪತ್ರೆಯಲ್ಲಿನ ಡ್ರಗ್ ಅವ್ಯವಹಾರದ ಬಗ್ಗೆ ಯುವತಿಗೆ ಮಾಹಿತಿಯಿತ್ತು ಎಂಬ ಕಾರಣಕ್ಕಾಗಿ ಕೊಲೆ ನಡೆದಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಬಗ್ಗೆಯೂ ತನಿಖೆಯಾಗಬೇಕು ಎಂದರು. ಆಸ್ಪತ್ರೆಯ ಡಾ। ರೇಖಾ, ಡಾ। ಕಾವ್ಯಾ ಹಾಗೂ ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಎ.ಶಾಂತಾ ಇದ್ದರು.
ಚಿಕಿತ್ಸೆ ಸಿಗದೆ ಪರದಾಟ
ಶನಿವಾರ ಬೆಳಗ್ಗೆ 6ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಮುಷ್ಕರದಿಂದಾಗಿ ನಗರದ ಕೆ.ಸಿ. ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ರೋಗಿಗಳು ಆಸ್ಪತ್ರೆಯ ಆವರಣದಲ್ಲೇ ಕುಳಿತಿದ್ದರು. ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲೂ ಇದೇ ದೃಶ್ಯವಿತ್ತು.
ತಂದೆಯನ್ನು ನರ ಹಾಗೂ ಮರೆವು ರೋಗಕ್ಕೆ ಚಿಕಿತ್ಸೆಗೆ ಕರೆತಂದ ಪಶ್ಚಿಮ ಬಂಗಾಳಗದ ಕುಟುಂಬ ಒಪಿಡಿ ಬಂದಾಗಿದ್ದರಿಂದ ತೊಂದರೆಗೀಡಾದರು. ಮುಷ್ಕರದಿಂದ ಸರಿಯಾದ ಸಮಯಕ್ಕೆ ಒಪಿಡಿ ಸೇವೆ ಸಿಗದೇ ತಂದೆ ಮಗ ಆಸ್ಪತ್ರೆ ಆವರಣದಲ್ಲಿ ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.