ಕನ್ನಡಪ್ರಭ ವಾರ್ತೆ ಮದ್ದೂರು
ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆ ಬಂದಿದ್ದ ದಂಪತಿ ಬಿಟ್ಟು ಹೋಗಿದ್ದ ಲಕ್ಷಾಂತರ ರು. ಹಣವಿದ್ದ ಬ್ಯಾಗನ್ನು ಆಸ್ಪತ್ರೆಯ ಸಿಬ್ಬಂದಿ ಗಾಯಾಳುಗಳಿಗೆ ವಾಪಸ್ ಮಾಡಿ ಮಾನವೀಯತೆ ಮೆರೆದ ಪ್ರಸಂಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದ್ದು, ಆಸ್ಪತ್ರೆ ಸಿಬ್ಬಂದಿಯ ದಕ್ಷತೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮದ್ದೂರು ಮತ್ತು ತುಮಕೂರು ರಾಜ್ಯ ಹೆದ್ದಾರಿಯ ಮಾಚಳ್ಳಿ ಮತ್ತು ತೊರೆಶೆಟ್ಟಿಹಳ್ಳಿ ಬಳಿ ಕಳೆದ ಸೆಪ್ಟೆಂಬರ್ 9ರಂದು ರಾತ್ರಿ ಡಣಾಯಕನಪುರದ ಕರುಣೇಶ್ ಮತ್ತು ಮಂಜುಳಾ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ರಸ್ತೆ ಬದಿ ನಡೆದು ಹೋಗುತ್ತಿದ್ದ ಪಶ್ಚಿಮ ಬಂಗಾಳದ ಜೇಬುನಾಥ್ ಒಬ್ಬ ಮಾನಸಿಕ ಅಸ್ವಸ್ಥನಿಗೆ ಡಿಕ್ಕಿ ಹೊಡೆದ ಪರಿಣಾಮ ಕರುಣೇಶ್, ಪತ್ನಿ ಮಂಜುಳಾ ಹಾಗೂ ಜೇಬುನಾಥ್ ಗಾಯಗೊಂಡಿದ್ದರು.
ಗಾಯಾಳುಗಳನ್ನು ಪೊಲೀಸರು ಮದ್ದೂರು ಆಸ್ಪತ್ರೆಗೆ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕರುಣೇಶ್ ಲಕ್ಷಾಂತರ ರುಪಾಯಿ ಹಣ ಹಾಗೂ ಚೆಕ್ಕನ್ನು ಮದ್ದೂರು ಆಸ್ಪತ್ರೆಯಲ್ಲಿ ಮರೆತು ಹೋಗಿದ್ದರು. ಮಾರನೇ ದಿನ ಬೆಳಗ್ಗೆ ಆಸ್ಪತ್ರೆ ಸಿಬ್ಬಂದಿ ಸ್ವಚ್ಛತೆ ಮಾಡುವಾಗ ಮಂಚದ ಕೆಳಗೆ ಗಾಯಾಳುಗಳ ಬ್ಯಾಗ್ ಪತ್ತೆಯಾಗಿದೆ.
ಆಸ್ಪತ್ರೆಯ ನೌಕರರಾದ ರವೀಶ್ ಮತ್ತು ತಿಮ್ಮೇಶ್ ಬ್ಯಾಗ್ ಪತ್ತೆಯಾದ ವಿಚಾರವನ್ನು ಆಡಳಿತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರ ಸೂಚನೆಯಂತೆ ಸಿಬ್ಬಂದಿ ರವೀಶ್ ಮತ್ತು ತಿಮ್ಮೇಶ್ ಪೊಲೀಸರ ಸಮ್ಮುಖದಲ್ಲಿ ಗಾಯಾಳು ಕರುಣೇಶ್ ಸಂಬಂಧಿಕರಿಗೆ ಬ್ಯಾಗನ್ನು ಒಪ್ಪಿಸಿ ಪರಿಶೀಲನೆ ನಡೆಸಿದಾಗ ಬ್ಯಾಗಿನಲ್ಲಿ ಒಂದು ಲಕ್ಷಕ್ಕೂ ಮೀರಿ ಹಣ ಮತ್ತು ಚೆಕ್ ಇರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಸಿಬ್ಬಂದಿಯ ದಕ್ಷತೆಯು ಆಸ್ಪತ್ರೆಯ ಅಧಿಕಾರಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪ್ರಾತ್ರವಾಗಿದೆ.