ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಜಿಲ್ಲೆಯಲ್ಲಿ ಕಳೆದ ವಾರ ನಿರಂತರವಾಗಿ ಸುರಿದ ಮಳೆ ಹಾಗೂ ಬೀಸಿದ ಶೀತಗಾಳಿಯಿಂದಾಗಿ ಮಕ್ಕಳು, ವೃದ್ಧರಿಗೆ ಇನ್ನಿಲ್ಲದ ಅನಾರೋಗ್ಯ ಸಮಸ್ಯೆಗಳು ಕಾಡಲಾರಂಭಿಸಿವೆ. ಮಳೆ ನಿಂತು ಮೂರ್ನಾಲ್ಕು ದಿನಗಳಾದರೂ ಆಸ್ಪತ್ರೆಗೆ ಬರುವವರ ಸಂಖ್ಯೆ ಕಡಿಮೆಯೇ ಆಗುತ್ತಿಲ್ಲ. ಅದರಲ್ಲೂ ಕೆಮ್ಮು, ನೆಗಡಿ, ಜ್ವರ ಎಂದು ಜಿಲ್ಲಾಸ್ಪತ್ರೆ ರೋಗಿಗಳಿಂದ ತುಂಬಿ ತುಳುಕುತ್ತಿದ್ದು, ಕಳೆದೊಂದು ವಾರದಲ್ಲಿ ಶೇ.20ರಷ್ಟು ಹೊರ ಹಾಗೂ ಒಳ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಪ್ರತಿಕೂಲ ಹವಾಮಾನ ಹಾಗೂ ಜಿಟಿಜಿಟಿ ಮಳೆಯಿಂದಾಗಿ ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಚಿಕ್ಕ ಮಕ್ಕಳು ಮತ್ತು ವೃದ್ದರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆಗಮಿಸುವಂತಾಗಿದೆ. ನೆಗಡಿ, ಕೆಮ್ಮು, ಕಫದ ಸಮಸ್ಯೆ, ಜ್ವರ ಸೇರಿದಂತೆ ಇತರೆ ಸಮಸ್ಯೆಗಳಿಗೆ ಈಡಾಗುತ್ತಿದ್ದಾರೆ. ಈಗಾಗಲೇ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ಆರೋಗ್ಯದ ಮೇಲೆ ಈ ವಾತಾವರಣ ತೀವ್ರ ಪರಿಣಾಮ ಭೀರುತ್ತಿದೆ.ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ
ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಶತ 20 ರಿಂದ 25 ರಷ್ಟು ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸರಾಸರಿ ನಿತ್ಯ ಒಂದು ಸಾವಿರ ಹೊರ ರೋಗಿಗಳಿದ್ದರೆ, ಈ ವಾರದಲ್ಲಿ ನಿತ್ಯ 1200 ಮೀರಿದೆ. ಇನ್ನು ನಿತ್ಯ 300 ಒಳ ರೋಗಿಗಳು ದಾಖಲಾಗುತ್ತಿದ್ದರೆ ಅದು 400ಕ್ಕೆ ಏರಿದೆ. ಇದರ ಜೊತೆಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಂತೂ ಶೇ.30ಕ್ಕೂ ಅಧಿಕ ಮಕ್ಕಳು ಹಾಗೂ ಶೇ.25 ರಷ್ಟು ವೃದ್ಧರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳುತ್ತಿದ್ದಾರೆ.ಮುಂಜಾಗೃತಾ ಕ್ರಮಗಳು ಏನು
ಜನರು ಮಳೆಯಲ್ಲಿ ನೆನೆಯಬಾರದು. ಸಂಗ್ರಹಿಸಿದ ಆಹಾರದ ಬದಲಾಗಿ ಬಿಸಿ ಅಹಾರ ಸೇವಿಸಬೇಕು. ಕಾದು ಆರಿಸಿದ ನೀರನ್ನೇ ಕುಡಿಯಬೇಕು. ಮಕ್ಕಳ, ಹಾಗೂ ವಯೋವೃದ್ಧರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ವಾಂತಿ ಭೇದಿ, ನೆಗಡಿ-ಕೆಮ್ಮು, ಜ್ವರ ಸೇರಿದಂತೆ ಯಾವುದೇ ಕಾಯಿಲೆಗಳು ಕಂಡುಬಂದಲ್ಲಿ ಹಾಗೂ ಮಕ್ಕಳು, ವೃದ್ಧರು ಅನಾರೋಗ್ಯಕ್ಕೆ ಈಡಾದರೆ ತಕ್ಷಣ ಆಸ್ಪತ್ರೆಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಬೇಕು.------------ಕೋಟ್:
ನಮ್ಮ ಮಕ್ಕಳ ಹಾಗೂ ಮನೆಯಲ್ಲಿನ ವೃದ್ಧರ ಆರೋಗ್ಯದಲ್ಲಿ ಸಮಸ್ಯೆಗಳಾಗಿವೆ. ಸಾಕಷ್ಟು ಕಾಳಜಿ ವಹಿಸುತ್ತಿದ್ದರೂ ಮನೆಯಲ್ಲಿ ಒಬ್ಬರಾದಮೇಲೊಬ್ಬರಿಗೆ ಜ್ವರ, ಕೆಮ್ಮು, ಶೀತ ವಕ್ಕರಿಸುತ್ತಲೇ ಇವೆ. ವೈದ್ಯರ ಸೂಚನೆಗಳನ್ನು ಪಾಲಿಸಿಕೊಂಡು, ಕಾಯಿಲೆಗೆ ಒಳಗಾದವರಿಗೆ ಔಷದೋಪಚಾರಗಳನ್ನು ಮಾಡಲಾಗುತ್ತಿದೆ.ಐಶ್ವರ್ಯ, ಬಾಬಾನಗರ, ಪೋಷಕರು.ಕೋಟ್:
ವೈರಲ್ ಫೀವರ್‌ನಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಅಧಿಕ ಅನಾರೋಗ್ಯವಿದ್ದವರನ್ನು ಮಾತ್ರ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡು ಹೋಗುವ ಮಕ್ಕಳ ಹಾಗೂ ವೃದ್ದರ ಸಂಖ್ಯೆ ಹೆಚ್ಚಿದೆ. ವಾತಾವರಣ ಬದಲಾವಣೆಯೇ ಇದಕ್ಕೆ ಕಾರಣ. ಈ ಕಾಯಿಲೆಗೆ ರೋಗಿಗಳು ತಾತ್ಸಾರ ಮಾಡದೆ ಆರಂಭದಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು.ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಶಸ್ತ್ರಚಿಕಿತ್ಸಕರು