ಕನ್ನಡಪ್ರಭ ವಾರ್ತೆ ಗುಬ್ಬಿ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ಎಲ್ಲಾ ಆಸ್ಪತ್ರೆಗಳಲ್ಲಿ 24/7 ವೈದ್ಯರು ಲಭ್ಯವಿರಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.ಗುಬ್ಬಿ ತಾಲೂಕಿನ ಮೂಗನಾಯಕನಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೆಳ್ಳಂಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಆರೋಗ್ಯ ಕೇಂದ್ರದಲ್ಲಿ ಯಾವುದೇ ಡ್ಯೂಟಿ ಡಾಕ್ಟರ್ ಇಲ್ಲದಿರುವುದನ್ನು ಕಂಡು ಗರ್ಭಿಣಿಯರ ಹೆರಿಗೆ, ಮತ್ತಿತರ ತುರ್ತು ಸಂದರ್ಭಗಳಲ್ಲಿ ವೈದ್ಯರ ಉಪಸ್ಥಿತಿ ಅಗತ್ಯವಿರುತ್ತದೆ. ಕರ್ತವ್ಯದಲ್ಲಿರದ ಡ್ಯೂಟಿ ಡಾಕ್ಟರ್ ಅವರಿಗೆ ಶೋಕಾಸ್ ನೋಟೀಸ್ ನೀಡಲು ತಹಶೀಲ್ದಾರ್ ಆರತಿ ಅವರಿಗೆ ಸೂಚಿಸಿದರು. ಆಸ್ಪತ್ರೆ ವಾರ್ಡುಗಳನ್ನು ಪರಿಶೀಲಿಸಿದ ಅವರು ಯಾರೊಬ್ಬರೂ ಒಳ ರೋಗಿಗಳು ಇಲ್ಲದ್ದನ್ನು ಕಂಡು ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಇನ್ನು ರೋಗಿಗಳು ಹೇಗೆ ಬರಲು ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಜರಾತಿ ವಹಿ ಪರಿಶೀಲಿಸುತ್ತಾ 34 ಅಧಿಕಾರಿ, ಸಿಬ್ಬಂದಿ ವರ್ಗವಿದ್ದರೂ ವೈದ್ಯರೇ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ಪಾಳಿ ಆಧಾರದ ಮೇಲೆ ದಿನದ ೨೪ ಗಂಟೆಯೂ ವೈದ್ಯರು ಲಭ್ಯವಿರಬೇಕೆಂದು ನಿರ್ದೇಶನ ನೀಡಿದರು.ನಂತರ ಆರೋಗ್ಯ ಕೇಂದ್ರದ ಎನ್‌ಸಿಡಿ ಕ್ಲಿನಿಕ್, ಹೆರಿಗೆ ವಿಭಾಗ, ಇಸಿಜಿ ಕೊಠಡಿ, ವೈದ್ಯಕೀಯ ಸಲಕರಣೆಗಳನ್ನು ಪರಿಶೀಲಿಸಿದ ಅವರು, ಹೆಸರಿಗೆ ಮಾತ್ರ ಇರುವ ಇಸಿಜಿ ಕೊಠಡಿ ಸ್ಟೋರ್ ರೂಂ ಆಗಿ ಪರಿವರ್ತನೆಯಾಗಿದೆ. ಕೇಂದ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವಾರ್ಡ್ ಗಳು ಸ್ವಚ್ಛತೆಯಿಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ವಾರ್ಡ್ ಗಳಲ್ಲಿರುವ 40 ಬೆಡ್‌ಗಳಲ್ಲಿ ಯಾವ ಹಾಸಿಗೆಯೂ ಸ್ವಚ್ಛವಾಗಿಲ್ಲ. ಬೆಡ್ ಮೇಲೆ ಹೊದಿಕೆಗಳಿಲ್ಲದಿರುವುದನ್ನು ಕಂಡು ಅಸಮಧಾನ ವ್ಯಕ್ತಪಡಿಸಿದರು.ಈ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ಅನುಕೂಲಗಳಿದ್ದರೂ, ಅಗತ್ಯ ಸಿಬ್ಬಂದಿಗಳಿದ್ದರೂ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ರೆಫರ್ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಒಬ್ಬರೂ ಒಳರೋಗಿಯಾಗಿ ದಾಖಲಾಗಿಲ್ಲ. ಎಲ್ಲಾ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ರೆಫರ್ ಮಾಡದೆ ಇಲ್ಲಿಯೇ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ಇಲ್ಲಿ ಸಾಧ್ಯವಿಲ್ಲದಾಗ ಮಾತ್ರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಬೇಕೆಂದು ತಾಕೀತು ಮಾಡಿದರು.