ಹಾಸ್ಟೆಲ್‌ ದುರವಸ್ಥೆ: ಅಧಿಕಾರಿಗಳಿಗೆ ಲೋಕಾ ತರಾಟೆ

KannadaprabhaNewsNetwork |  
Published : Nov 15, 2025, 04:00 AM IST
Lokayuktha 1 | Kannada Prabha

ಸಾರಾಂಶ

ಲೋಕಾಯುಕ್ತರು ವಿದ್ಯಾರ್ಥಿನಿಯರೊಂದಿಗೆ ಸಮಸ್ಯೆಗಳ ಬಗ್ಗೆ ವಿಚಾರಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿರುವ ಸರ್ಕಾರಿ ಹಾಸ್ಟೆಲ್‌ಗಳಿಗೆ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯವನ್ನು ಎರಡನೇ ದಿನವಾದ ಶುಕ್ರವಾರ ಮುಂದುವರಿಸಿದ್ದು, ಈ ವೇಳೆ ವಿದ್ಯಾರ್ಥಿಗಳು ಅಲ್ಲಿನ ಸಮಸ್ಯೆಗಳನ್ನು ಲೋಕಾಯುಕ್ತರ ಮುಂದೆ ತೆರೆದಿಟ್ಟರು.

ನಗರದಲ್ಲಿರುವ 28 ವಸತಿ ನಿಲಯಗಳ ತಪಾಸಣೆಗೆ ನಿಯೋಜಿಸಲಾಗಿದ್ದ ನ್ಯಾಯಾಂಗ ಹಾಗೂ ಪೊಲೀಸ್‌ ಅಧಿಕಾರಿಗಳ 15 ತಂಡಗಳು ಗುರುವಾರ ತಡರಾತ್ರಿವರೆಗೂ ಪರಿಶೀಲನೆ ನಡೆಸಿತ್ತು.

ಶುಕ್ರವಾರ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಲಗ್ಗೆರೆ ಬಿಎಂಟಿಸಿ ಬಸ್‌ ನಿಲ್ದಾಣದ ಎದುರು ಇರುವ ಹಿಂದುಳಿದ ವರ್ಗದ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ನ್ಯೂನತೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳ ತಂಡ ಈ ಬಗ್ಗೆ ತನಿಖೆ ಕೈಗೊಂಡು ಲೋಕಾಯುಕ್ತರಿಗೆ ವರದಿ ಸಲ್ಲಿಸಲಿದೆ. ಆನಂತರ ಇನ್ನಷ್ಟು ಅಕ್ರಮಗಳು ಬಯಲಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಸ ತೆರವುಗೊಳಿಸಲು ಆದೇಶ

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌ ಅವರು, ವಸತಿ ನಿಲಯಕ್ಕೆ ಭೇಟಿ ನೀಡುವ ಮಾರ್ಗ ಮಧ್ಯದಲ್ಲಿ ಮುನೇಶ್ವರ ಲೇಔಟ್‌ನ 3 ನೇ ಅಡ್ಡರಸ್ತೆಯ ಇಕ್ಕೆಲೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವುದನ್ನು ಕಂಡರು. ಲೋಕಾಯುಕ್ತರು ಕೂಡಲೇ ತಮ್ಮ ವಾಹನವನ್ನು ನಿಲ್ಲಿಸುವಂತೆ ತಮ್ಮ ಚಾಲಕನಿಗೆ ಹೇಳಿ, ಕಸ ಬಿದ್ದಿದ್ದ ಸ್ಥಳವನ್ನು ತಪಾಸಣೆ ನಡೆಸಿ, ಸ್ಥಳಕ್ಕೆ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳನ್ನು ಕರಿಸಿಕೊಂಡು ಈ ಕೂಡಲೇ ಕಸವನ್ನು ತೆರವುಗೊಳಿಸುವಂತೆ ಆದೇಶಿಸಿದರು. ಈ ಬಗ್ಗೆ ಅನುಸರಣಾ ವರದಿಯನ್ನು ನ.17 ರ ಒಳಗೆ ಕಚೇರಿಗೆ ಹಾಜರಾಗಿ ಸಲ್ಲಿಸುವಂತೆ ಸೂಚಿಸಿದರು.

ಕಂಡು ಬಂದ ಲೋಪದೋಷಗಳು:

* ತಪಾಸಣೆ ಸಮಯದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಹಾಜರಾಗಿ ಮಾಹಿತಿ ಒದಗಿಸಿದರು. ಆದರೆ ವಾರ್ಡನ್ ಇರಲಿಲ್ಲ.

*ವಿದ್ಯಾರ್ಥಿಗಳಿಗೆ ಬಟ್ಟೆ ಬದಲಿಸಲು ಮತ್ತು ಅವರ ವಸ್ತುಗಳ ಇಟ್ಟುಕೊಳ್ಳಲು ಪ್ರತ್ಯೇಕ ಕೊಠಡಿ ಇರಲಿಲ್ಲ. ಇದರಿಂದ ವಿದ್ಯಾರ್ಥಿನಿಯರಿಗೆ ಮುಜುಗರ.

*ಶೌಚಾಲಯಗಳಲ್ಲಿ ಸ್ವಚ್ಛತೆ ಇರಲಿಲ್ಲ.

* ಆಹಾರದ ಗುಣಮಟ್ಟ ಸರಿಯಿರಲಿಲ್ಲ.

*ನಾಲ್ಕು ಮಹಡಿಯಲ್ಲಿ ಒಂದೇ ಒಂದು ಫ್ಯಾನ್‌ ಇರಲಿಲ್ಲ.

*ವಿದ್ಯಾರ್ಥಿಗಳಿಗೆ ಯಾವುದೇ ಪಠ್ಯೇತರ ಚಟುವಟಿಕೆಗಳು ನಡೆಸುತ್ತಿರಲಿಲ್ಲ.

*ಸಿಬ್ಬಂದಿ, ದಾಸ್ತಾನು, ಇಂಡೆಂಟ್‌, ಇತರೆ ವಹಿ, ಕಡತವನ್ನು ಹಾಜರುಪಡಿಸಿರಲಿಲ್ಲ.

PREV

Recommended Stories

ಬಿಹಾರ ಚುನಾವಣೆ ಗೆಲುವು: ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
ಹಗಲಿನಲ್ಲೇ ಗುಣಮಟ್ಟದ ವಿದ್ಯುತ್ ಪೂರೈಕೆ