ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಕಳೆದ ಒಂದು ವರ್ಷದಿಂದ 10 ಚೀಲ ಗೋಧಿಯ ಕಾಳುಗಳು ನುಸಿ ಹಿಡಿದು ಹಾಳಾಗಿವೆ. ಗಬ್ಬು ನಾರುವ ಹಾಗೂ ಸ್ವಚ್ಚತೆ ಕಾಣದ ಶೌಚಾಲಯ, ಕೊಳತೆ ಈರುಳ್ಳಿ, ಟೊಮೆಟೊ, ಸ್ವಚ್ಚತೆ ಕಾಣದ ಕುಡಿಯುವ ನೀರು ಟ್ಯಾಂಕ್, ತುಕ್ಕು ಹಿಡಿದಿರುವ ಚಪಾತಿ ಹಂಚು, 8 ತಿಂಗಳ ಹಿಂದೆ ಬಂದಿರುವ ಪ್ರೀಡ್ಜ್ ನ್ನು ಉಪಯೋಗಿಸದೆ ಹಾಗೇ ಇಟ್ಟಿರುವುದು, ಹೀಗೆ ಸಮಸ್ಯೆಗಳ ಸರಮಾಲೆ ಹೊತ್ತಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟು 50 ವಿದ್ಯಾರ್ಥಿಗಳ ಈ ವಸತಿ ನಿಲಯದಲ್ಲಿ ಈಗ 14 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ವಾರ್ಡನ್ ಈ ಕುರಿತು ಪ್ರಶ್ನಿಸಿದರೆ, ಊರಿಗೆ ಹೋಗಿದ್ದಾರೆ, ಕೆಲವರು ಮುಂದಿನ ವಾರ ಬರುತ್ತಾರೆ ಎಂಬ ಸಬೂಬು ಹೇಳುತ್ತಾರೆ. ಒಟ್ಟಿನಲ್ಲಿ 50 ವಿದ್ಯಾರ್ಥಿಗಳಿಗೆ ಬೇಕಾಗುವಷ್ಟು ದವಸ ದಾನ್ಯಗಳನ್ನು ತರಿಸಿಕೊಳ್ಳುತ್ತಿದ್ದರೂ ಒಂದು ಚಿಕನ್ ಪೀಸ್ ಹೆಚ್ಚು ಹಾಕಿರಿ ಎಂದರೆ ವಾರ್ಡನ್ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಹಾಗೂ ಜೀವ ಬೆದರಿಕೆ ಹಾಕುತ್ತಾರೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.ವಿದ್ಯಾರ್ಥಿಗಳಾದ ಇರ್ಫಾನ ಮಾಚೇನಹಳ್ಳಿ ಹಾಗೂ ದಾದಾಪೀರ್ ವಾಲಿಕಾರ ಮಾತನಾಡಿ, ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಸರಿಯಿಲ್ಲ. ಒಂದು ವರ್ಷದಿಂದ ಸಂಜೆಯ ಉಪಾಹಾರವಿಲ್ಲ, ಕಂಪ್ಯೂಟರ್ ವ್ಯವಸ್ಥೆಯಿಲ್ಲ, ದಿನಪತ್ರಿಕೆ ತರಿಸಲು ಹಿಂದೇಟು, ಕೊಬ್ಬರಿ ಎಣ್ಣೆ ನೀಡದಿರುವುದು, ಕುಡಿಯುವ ನೀರಿನ ಟ್ಯಾಂಕರ ಗಬ್ಬೆದು ನಾರುತ್ತಿದೆ, ಸ್ನಾನ ಮಾಡಿದರೆ ಮೈಯೆಲ್ಲಾ ಕೆರೆತ, ಕೊಳತೆ ತರಕಾರಿ ಹಾಕಿ ಅಡುಗೆ ಮಾಡುತ್ತಾರೆ. ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳು ಇಲ್ಲದೆ ವೇಳೆ ಭೇಟಿ ಕೊಡುತ್ತಾರೆ. ನಿಲಯ ಪಾಲಕರಿಗೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಮೊಬೈಲ್ ಕರೆ ಮಾಡಿದರೆ ಸ್ವೀಕಾರ ಮಾಡುವುದಿಲ್ಲ. ವಿದ್ಯಾರ್ಥಿಗಳು ಏನಾದರೂ ಸಮಸ್ಯೆ ಹೇಳಿಕೊಂಡರೆ ಹೊರಗಡೆ ಬನ್ನಿ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಬಟ್ಟೆ ಒಗೆಯುವ ವಾಷಿಂಗ್ ಮಿಷನ್ ಸರಿಯಾಗಿ ವರ್ಕ್ ಮಾಡ್ತಾ ಇಲ್ಲ. ಶುದ್ಧ ನೀರಿನ ಘಟಕವಿದ್ದರೂ ರಿಪೇರಿ ಮಾಡಿಸಿಲ್ಲ, ಗ್ರಂಥಾಲಯದ ಬುಕ್ ಟ್ರೇಜುರಿಯಲ್ಲಿ ಇಟ್ಟಿದ್ದು ಒಮ್ಮೆಯೂ ಓದಲಿಕ್ಕೆ ಕೊಡಲ್ಲ, ಹೀಗೆಯೆ ಹಿಂದೆ ಇದ್ದ ವಿದ್ಯಾರ್ಥಿಗಳು ಹಾಸ್ಟೆಲ್ ಬಿಟ್ಟು ಮನೆ ಸೇರಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಆಗಮಿಸಿ ನಮ್ಮ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.