ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ, ಹೆಚ್ಚುವರಿ ಸಿಬ್ಬಂದಿಗೆ ಸೂಚನೆ

KannadaprabhaNewsNetwork |  
Published : Nov 21, 2025, 01:15 AM IST
20ಕೆಜಿವಿಜಿ7, 8, 9, 10-ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಒಳ ರೋಗಿಗಳು, ಹೊರ ರೋಗಿಗಳ ಜೊತೆ ಚರ್ಚಿಸಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್‌, ಸದಸ್ಯ ಎಸ್.ಕೆ.ವಂಟಿಗೋಡಿ. ಅಧಿಕಾರಿಗಳು ಇದ್ದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಅಡುಗೆ ಸಿಬ್ಬಂದಿ ಇಲ್ಲವಾಗಿದ್ದಾರೆ. ನಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಪರಿಶಿಷ್ಟ ಪಂಗಡದ ಹಾಸ್ಟೆಲ್ ಅಡುಗೆ ಸಿಬ್ಬಂದಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್‌, ಸದಸ್ಯ ಎಸ್.ಕೆ.ವಂಟಿಗೋಡಿ ಎದುರು ಅಳಲು ತೋಡಿಕೊಂಡಿದ್ದಾರೆ.

- ಬಾಡಿಗೆ ಕಟ್ಟಡದಲ್ಲಿ ಸರ್ಕಾರಿ ಹಾಸ್ಟೆಲ್‌ಗಳು: ಮಾನವ ಹಕ್ಕುಗಳ ಆಯೋಗ ಬೇಸರ ।

- ಅಡುಗೆ ಸಮಸ್ಯೆಗಳ ತೆರೆದಿಟ್ಟ ಸಿಬ್ಬಂದಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಅಡುಗೆ ಸಿಬ್ಬಂದಿ ಇಲ್ಲವಾಗಿದ್ದಾರೆ. ನಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಪರಿಶಿಷ್ಟ ಪಂಗಡದ ಹಾಸ್ಟೆಲ್ ಅಡುಗೆ ಸಿಬ್ಬಂದಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್‌, ಸದಸ್ಯ ಎಸ್.ಕೆ.ವಂಟಿಗೋಡಿ ಎದುರು ಅಳಲು ತೋಡಿಕೊಂಡರು.

ನಗರದ ಜೆ.ಎಚ್. ಪಟೇಲ್ ಬಡಾವಣೆಯ ಬಿಸಿಎಂ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಆಯೋಗದ ಅಧ್ಯಕ್ಷರು, ಸದಸ್ಯರಿಗೆ ಎಲ್ಲ ಕಡೆಗಳಲ್ಲೂ ಒಂದಿಲ್ಲೊಂದು ಸಮಸ್ಯೆಗಳನ್ನು ಅಲ್ಲಿನ ಸಿಬ್ಬಂದಿ, ವಿದ್ಯಾರ್ಥಿಗಳು ಹೇಳಿಕೊಂಡರು.

ಹಾಸ್ಟೆಲ್‌ಗೆ ಭೇಟಿ ನೀಡಿದ್ದ ವೇಳೆ ಅಡುಗೆ ಕೋಣೆ, ಭೋಜನಾಲಯ, ಕೊಠಡಿಗಳಿಗೆ ಆಯೋಗದ ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು. ಅನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದ ವೇಳೆ ಸರಿಯಾಗಿ ಊಟೋಪಚಾರ, ಕುಡಿಯುವ ನೀರು, ಇತರೆ ಸೌಲಭ್ಯಗಳ ಮಾಹಿತಿ ಪಡೆದರು. ಅನಂತರ ಮಕ್ಕಳಿಗೆ ಶುಚಿ ಮತ್ತು ರುಚಿಯಾದ ಆಹಾರ ನೀಡುವುದರ ಜೊತೆಗೆ ಸ್ವಚ್ಛತೆ ಕಾಪಾಡುವಂತೆ ಆಯೋಗ ಸೂಚಿಸಿತು.

ಹಾಸ್ಟೆಲ್‌ಗಳಿಗೆ 22 ನಿವೇಶನ:

ಮಕ್ಕಳಿಗೆ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೊಳಪಡಿಸಬೇಕು. ನಗರ ವ್ಯಾಪ್ತಿಯಲ್ಲೇ ಒಟ್ಟು 29 ಹಾಸ್ಟೆಲ್ ಕಟ್ಟಡಗಳಿದ್ದು, ಅನೇಕ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿವೆ. ಅವುಗಳಿಗೆ ಸ್ವಂತ ಕಟ್ಟಡಗಳನ್ನು ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆಯೋಗ ಸೂಚನೆ ನೀಡಿತು. ಆಗ ಅಧಿಕಾರಿಗಳು, ಹಾಸ್ಟೆಲ್‌ಗಳಿಗೆ 22 ನಿವೇಶನಗಳನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ. ಶೀಘ್ರವೇ ಅನುದಾನ ಮಂಜೂರು ಮಾಡಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಗಮನಕ್ಕೆ ತಂದರು.

ಸಿಬ್ಬಂದಿ ಮಾತನಾಡಿ, ಪರಿಶಿಷ್ಟ ಪಂಗಡದ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಅಗತ್ಯಕ್ಕೆ ತಕ್ಕಂತೆ ಅಡುಗೆ ಸಿಬ್ಬಂದಿ ಇಲ್ಲ. ಆದ್ದರಿಂದ ಕೆಲಸದ ಒತ್ತಡ ಹೆಚ್ಚಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಆಗ ಮಾರ್ಗಸೂಚಿ ಅನ್ವಯ ಸಿಬ್ಬಂದಿ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಲು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿಗೆ ಆಯೋಗದ ಅಧ್ಯಕ್ಷರು, ಸದಸ್ಯರು ಸೂಚನೆ ನೀಡಿದರು.

ಬಿಸಿಎಂ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್, ಕಾರಾಗೃಹ ಹಾಗೂ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡಲಾಯಿತು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ರೋಗಿಗಳ ಆರೋಗ್ಯ ಕ್ಷೇಮ ವಿಚಾರಿಸಿದರು. ವೈದ್ಯರು ಸರಿಯಾದ ಸ್ಪಂದನೆ, ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ಪಡೆದರು. ಆರೋಗ್ಯ ಸೇವೆ ಬಯಸಿ ಬಂದವರಿಗೆ ಹೆಚ್ಚು ಸಮಯ ಕಾಯಿಸದೇ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

- - -

(ಬಾಕ್ಸ್‌)

* ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆಗಳಿಗೆ ಆಯೋಗ ಬೇಸರ ಜಿಲ್ಲಾಸ್ಪತ್ರೆ ಕಟ್ಟಡ ಅತ್ಯಂತ ಹಳೆಯದಾಗಿದ್ದು, ದುರಸ್ತಿಗೊಳಪಡಿಸಲು ಸಾಧ್ಯವಿಲ್ಲ. ಆದ್ದರಿಂದ ನೂತನ ಕಟ್ಟಡ ಅವಶ್ಯಕತೆ ಇದೆ. ಸ್ವಚ್ಛತೆ ಕೂಡ ಮರೀಚಿಕೆಯಾಗಿದೆ ಎಂದು ಆಯೋಗ ಅಧ್ಯಕ್ಷ ಟಿ.ಶ್ಯಾಮ್ ಭಟ್ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ನಾಗೇಂದ್ರಪ್ಪ ಮಾತನಾಡಿ, ನಿತ್ಯ 1500-2000 ಹೊರ ರೋಗಿಗಳು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ. ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿದ್ದಾರೆ. ಆದರೆ, ಇನ್ನಷ್ಟು ಸಿಬ್ಬಂದಿ ಕೊರತೆ ಕಾಡುತ್ತಿದೆ ಎಂದರು. ಆಗ ಆಯೋಗ ಅಧ್ಯಕ್ಷರು ಮಾತನಾಡಿ, ದಾವಣಗೆರೆಯಲ್ಲಿ 2 ವೈದ್ಯಕೀಯ ಕಾಲೇಜುಗಳಿವೆ. ಅವರೊಂದಿಗೆ ಒಪ್ಪಂದ ಮಾಡಿಕೊಂಡು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಸೇವೆ ಬಳಸಿಕೊಳ್ಳಿ ಎಂದು ಸೂಚನೆ ನೀಡಿದರು.

ಅನಂತರ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ವೇಳೆ, ಇಡೀ ರಾಜ್ಯದಲ್ಲೇ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಬಸ್ ನಿಲ್ದಾಣ ಅತ್ಯಂತ ಸುಂದರ ಮತ್ತು ಸ್ವಚ್ಛ ನಿಲ್ದಾಣಗಳಾಗಿವೆ ಎಂದು ಶ್ಲಾಘಿಸಿದರು. ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದ ವೇಳೆ, ಇದು ಅತ್ಯಂತ ಕಿರಿದಾದಿದೆ, ಸ್ಥಳಾಂತರಿಸಬೇಕೆಂದು ಹೇಳಿದರು. ಆಗ ಕಾರಾಗೃಹ ಅಧೀಕ್ಷಕರು 10 ಎಕರೆ ಜಾಗ ಹೊಸ ಬಂಧೀಖಾನೆಗಾಗಿ ಮಂಜೂರಾಗಿದೆ. ಅನುದಾನ ಪಡೆದು ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದರು.

ಕಾರಾಗೃಹದ ವಿಚಾರಣಾಧೀನ ಕೈದಿಗಳನ್ನು ಮಾತನಾಡಿಸಿದ ಆಯೋಗದ ಅಧ್ಯಕ್ಷರು, ಸದಸ್ಯರು ಊಟೋಪಚಾರದ ಕೊರತೆ ಬಗ್ಗೆ ಮಾಹಿತಿ ಪಡೆದರು. ತಮಗೆ ಸೌಲಭ್ಯದ ಕೊರತೆ ಇಲ್ಲ, ವಿಚಾರಣೆಗೆ ನ್ಯಾಯಾಲಯಕ್ಕೆ ಕರೆದುಕೊಂಡು ಹೋದಾಗ ಎಸ್ಕಾರ್ಟ್ ನೀಡುವಂತೆ ವಿಚಾರಣಾಧೀನ ಕೈದಿಗಳು ಮನವಿ ಮಾಡಿದರು. ಆಗ ಆಯೋಗದ ಅಧ್ಯಕ್ಷರು, ಇದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ಉತ್ತರಿಸಿದರು.

- - -

(ಟಾಪ್‌ ಕೋಟ್) ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ತಾವು ಅಧಿಕಾರ ವಹಿಸಿಕೊಂಡಾಗ 5400 ಪ್ರಕರಣ ಬಾಕಿ ಇದ್ದು, ಈಗ ಅವುಗಳ ಸಂಖ್ಯೆ 3413 ಆಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ ಒಟ್ಟು 6 ದೂರುಗಳು ಬಂದಿವೆ. ಈ ಬಗ್ಗೆ ವರದಿ ಕೇಳುತ್ತೇವೆ. ಜಿಲ್ಲಾಧಿಕಾರಿ ಅವರೇ ಬಗೆಹರಿಸುವುದಾಗಿ ಹೇಳಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ 15 ಪ್ರಕರಣಗಳು ಇವೆ.- ಡಾ.ಶಾಮ ಭಟ್, ಅಧ್ಯಕ್ಷ, ರಾಜ್ಯ ಮಾನವ ಹಕ್ಕುಗಳ ಆಯೋಗ.

- - -

-20ಕೆಜಿವಿಜಿ7, 8, 9, 10.ಜೆಪಿಜಿ:

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್‌, ಸದಸ್ಯ ಎಸ್.ಕೆ.ವಂಟಿಗೋಡಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಒಳರೋಗಿಗಳು, ಹೊರರೋಗಿಗಳ ಜೊತೆ ಚರ್ಚಿಸಿದರು. ಈ ಸಂದರ್ಭ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ