ಮುಳಗುಂದ: ಗ್ರಾಮದಲ್ಲಿ ಸ್ಮಶಾನ ಇಲ್ಲದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆಯಲ್ಲೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ ಘಟನೆ ಸಮೀಪದ ಹೊಸೂರು ಗ್ರಾಮದಲ್ಲಿ ಬುಧವಾರ ಜರುಗಿದ್ದು, ಅಧಿಕಾರಿಗಳ ಮನವೊಲಿಕೆಯಿಂದ ಬೇರೆಡೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಗ್ರಾಮದಲ್ಲಿ ಯಾವುದೇ ಜನಾಂಗದವರು ಮೃತಪಟ್ಟರೂ ಅನೇಕ ದಶಕಗಳಿಂದ ಗ್ರಾಮದ ಬಶೆಟ್ಟಿ ಎಂಬವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಆದರೆ ಬುಧವಾರ ಬಶೆಟ್ಟಿ ಕುಟುಂಬಸ್ಥರು ಬಸವಣ್ಣೆಮ್ಮನ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮದ ಬಸ್ ನಿಲ್ದಾಣ ಎದುರು ಕಟ್ಟಿಗೆ ಇಟ್ಟು ಅಂತ್ಯಕ್ರಿಯೆಗೆ ಮುಂದಾದರು.
ಸ್ಥಳಕ್ಕೆ ಆಗಮಿಸಿದ ಎಸಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ಮುಳಗುಂದ ಪೊಲೀಸ್ ಠಾಣೆಯ ಸಿಪಿಐ ಬಿ.ಜಿ. ಸುಬ್ಬಾಪುರಮಠ ಅವರು, ಗ್ರಾಮಸ್ಥರೊಂದಿಗೆ ಘಟನೆ ಕುರಿತು ಚರ್ಚಿಸಿ, ಮನವೊಲಿಸಲು ಮುಂದಾದರು. ಆದರೆ ಹೊಸೂರು ಗ್ರಾಮದಲ್ಲಿ ಸ್ಮಶಾನಕ್ಕೆ ಶಾಶ್ವತ ಪರಿಹಾರ ಸಿಗದಿದ್ದಲ್ಲಿ ಗ್ರಾಮದ ಮಧ್ಯೆ ಅಂತ್ಯಸಂಸ್ಕಾರ ಮಾಡುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದರು.ನಂತರ ಅಧಿಕಾರಿಗಳು ಸ್ಥಳೀಯರನ್ನು ಹಾಗೂ ಜಮೀನು ಮಾಲೀಕರನ್ನು ಮನವೊಲಿಸಿ, ಅಂತ್ಯಸಂಸ್ಕಾರಕ್ಕೆ ಅನುಕೂಲ ಮಾಡಿಕೊಟ್ಟರು. ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಅಂತ್ಯಸಂಸ್ಕಾರಕ್ಕೆ ಸಮಸ್ಯೆಯಾಗದಂತೆ ಶೀಘ್ರ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಕುಟುಂಬಸ್ಥರ ವಿರೋಧ: ನಮ್ಮ ಪೂರ್ವಜರ ಕಾಲದಿಂದಲೂ ಗ್ರಾಮದ ಯಾವುದೇ ಜನಾಂಗದವರು ಮೃತಪಟ್ಟರೂ ಗ್ರಾಮದ ಬಶೆಟ್ಟಿ ಎಂಬವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದೇವೆ. ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲು ಸ್ಮಶಾನಕ್ಕೆ ಹೋದಾಗ ಬಶೆಟ್ಟಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಗ್ರಾಮಸ್ಥರೆಲ್ಲ ಸೇರಿ ಅಂತ್ಯಸಂಸ್ಕಾರವನ್ನು ಗ್ರಾಮದ ಮಧ್ಯ ಭಾಗದಲ್ಲಿ ಮಾಡೋಣವೆಂದು ನಿರ್ಧರಿಸಲಾಯಿತು ಎಂದು ಹೊಸೂರು ಗ್ರಾಮಸ್ಥರಾದ ಅಜ್ಜಣ್ಣ ಹುಗ್ಗೆಣ್ಣವರ ತಿಳಿಸಿದರು.