ಕನ್ನಡಪ್ರಭ ವಾರ್ತೆ ಕಂಪ್ಲಿ ಬಿಸಿಯೂಟದ ಅಡುಗೆಗೆಂದು ಒಲೆಯ ಮೇಲಿಟ್ಟಿದ್ದ ಕುಕ್ಕರ್ ಸ್ಫೋಟಗೊಂಡು ಅಡುಗೆ ಮಾಡುತ್ತಿದ್ದ ಮಹಿಳೆಯೋರ್ವಳು ಗಾಯಗೊಂಡ ಘಟನೆ ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.ಶಾಲೆಯ ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಗ್ಯಾಸ್ ಒಲೆ ಮೇಲೆ 20 ಲೀಟರ್ ಕುಕ್ಕರ್‌ನಲ್ಲಿ 3 ಸೇರು ತೊಗರಿಬೇಳೆ ಬೇಯಿಸುತ್ತಿದ್ದಾಗ ವಿಸಿಲ್ ಬಾರದೇ ಏಕಾಏಕಿ ಸ್ಫೋಟಗೊಂಡಿತು. ಅದರಿಂದ ಕೊಠಡಿಯ ಚಾವಣಿ, ಅಕ್ಕಪಕ್ಕದ ಗೋಡೆಗೆ ತೊಗರಿಬೇಳೆ ಸಿಡಿದಿದೆ. ಅಲ್ಲದೇ ಅಡುಗೆ ಕೆಲಸದಲ್ಲಿ ತೊಡಗಿಕೊಂಡಿದ್ದ ಲೋಕಮ್ಮ ಎಂಬವರ ಮುಖಕ್ಕೆ ಬಿಸಿನೀರು ಸಿಡಿದಿದೆ. ಇನ್ನುಳಿದ ಮೂವರು ಅಡುಗೆಯವರು ತಕ್ಷಣ ಹೊರಗಡೆ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಲೋಕಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಬಿಸಿಯೂಟ ತಯಾರಿಸುವ ಪಾತ್ರೆ, ಇತರೆ ಸಾಮಾನುಗಳು ತುಂಬಾ ಹಳತಾಗಿವೆ. ಸುಸ್ಥಿತಿಯಲ್ಲಿ ಇಲ್ಲದ ಕಾರಣ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. 600 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು, ಶಿಕ್ಷಕರು ಪಾಠದ ಕಡೆ ಗಮನಹರಿಸಲು ಆಗದೇ ಬಿಸಿಯೂಟದ ಕಡೆಗೆ ಹೆಚ್ಚಿನ ಲಕ್ಷ್ಯ ಕೊಡಬೇಕಾದ ಸ್ಥಿತಿ ಇದೆ. ಶಿಕ್ಷಕರು ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಇಸ್ಕಾನ್ ಬಿಸಿಯೂಟ ಸೌಲಭ್ಯ ಒದಗಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಎಚ್. ಜಗದೀಶ್ ಸೇರಿದಂತೆ ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.