ರಾಮನಗರ: ವೇತನ ಹೆಚ್ಚಳ ಮತ್ತು ಅಪಘಾತ ಪರಿಹಾರ ಜಾರಿ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಬಳಿ ಸಭೆ ನಡೆಸಿದ ಬಳಿಕ ಅಕ್ಷರ ದಾಸೋಹ ಬಿಸಿಯೂಟ ತಯಾಕರ ಯೂನಿಯನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಸಹಾಯಕ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.ರಾಜ್ಯದಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಸರ್ಕಾರಿ ಶಾಲೆಗಳಲ್ಲಿ 1 ಲಕ್ಷ 20 ಸಾವಿರಕ್ಕೆ ಹೆಚ್ಚು ಬಿಸಿಯೂಟ ತಯಾರಕರು ಇದ್ದಾರೆ. ಈ ತಯಾರಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 60-40ರ ಅನುಪಾತದಲ್ಲಿ ಅನುದಾನ ನೀಡುತ್ತಿದೆ. ಈ ಪ್ರಕಾರ ಕೇಂದ್ರ ಸರ್ಕಾರ ಒಬ್ಬರು ಅಡುಗೆ ಸಿಬ್ಬಂದಿಗೆ ಮಾಸಿಕ 600 ರುಪಾಯಿ ಮಾತ್ರ ಸಂಭಾವನೆ ನೀಡುತ್ತಿದೆ. ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ದೂರಿದರು.
ಈ ವರ್ಷ ರಾಜ್ಯಾದ್ಯಂತ 60 ವರ್ಷ ವಯಸ್ಸಾಗಿ ಬಿಡುಗಡೆಗೊಳಿಸಿರುವ ಎಲ್ಲಾ ಬಿಸಿಯೂಟ ತಯಾರಕರಿಗೆ 1.50 ಲಕ್ಷ ಇಡಗಂಟು ಹಣ ಕೊಡಬೇಕು. ಮುಂದಿನ ವರ್ಷಗಳಲ್ಲಿ 60 ವರ್ಷ ದಾಟಿದ ಎಲ್ಲ ಬಿಸಿಯೂಟ ತಯಾರಕಿರಗೂ ಇದು ಅನ್ವಯಿಸಬೇಕು. ಬಿಸಿಯೂಟ ತಯಾರಕರಿಗೆ 2 ಲಕ್ಷ ಅಪಘಾತ ಪರಿಹಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಬಿಸಿಯೂಟ ತಯಾರಕರಿಗೆ ಕೆಲಸ ಸಂದರ್ಭದಲ್ಲಿ ಆಗುವ ಅಪಘಾತ ಪರಿಹಾರ ಹಣ ಪಡೆಯು ಇಲಾಖೆ ಕಡ್ಡಾಯಗೊಳಿಸಿರುವ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಮಾಡುವುದನ್ನು ರದ್ದುಗೊಳಿಸಿ ಪರಿಹಾರ ಹಣ ಪಡೆಯಲು ಸುಲಭವಾಗುವಂತೆ ಘೋಷಿಸಬೇಕು.
ಬಿಸಿಯೂಟ ತಯಾರಕರಿಗೆ ದಸರಾ ರಜೆ, ಬೇಸಿಗೆ ರಜೆ ಸೇರಿದಂತೆ ಒಟ್ಟು 12 ತಿಂಗಳ ವೇತನ ಕೊಡಬೇಕು. ಹಾಲಿ ಇರುವ ನಿಯಮದಂತೆ ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು 5ನೇ ತಾರೀಖಿನಂದು ವೇತನ ಸೌಲಭ್ಯ ನೀಡಬೇಕು. ಅಕಾಲಿಕ ಮರಣಕ್ಕೆ ತುತ್ತಾದ ಬಿಸಿಯೂಟ ಕಾರ್ಮಿಕ ಹೆಣ್ಣು ಮಕ್ಕಳಿಗೆ ಕೂಡಲೇ ಸೇವಾಭದ್ರತೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯು ಖಾಸಗೀಕರಣ ಆಗಬಾರದು. ಸರ್ಕಾರದ ಕೈಪಿಡಿಯಲ್ಲಿಯೇ ನಡೆಯಬೇಕು. ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ಯೋಜನೆಯಡಿ ಮೊಟ್ಟೆ ಬಿಡಿಸಲು 20 ಪೈಸೆ ನೀಡುತ್ತಿದ್ದು, ಇದನ್ನು ಸಂಭಾವನೆಗೆ ಸೇರ್ಪಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯೂನಿಯನ್ ರಾಜ್ಯಾಧ್ಯಕ್ಷ ಹೊನ್ನಪ್ಪ ಮರಿಯಂನವರ್ , ಜಿಲ್ಲಾಧ್ಯಕ್ಷೆ ಎಚ್.ನಿರ್ಮಲಾ, ಕಾರ್ಯದರ್ಶಿ ರೋಸ್ ಮೇರಿ, ಖಜಾಂಚಿ ಶಶಿಕಲಾ, ತಾಲೂಕು ಅಧ್ಯಕ್ಷೆ ಅನುಸೂಯಮ್ಮ, ತಾಲೂಕು ಕಾರ್ಯದರ್ಶಿ ಮಂಗಳ, ಚನ್ನಪಟ್ಟಣ ತಾಲೂಕು ಅಧ್ಯಕ್ಷೆ ಸಾಕಮ್ಮ, ಮಾಗಡಿ ತಾಲೂಕು ಅಧ್ಯಕ್ಷೆ ಲಲಿತಾ , ಕನಕಪುರ ತಾಲೂಕು ಅಧ್ಯಕ್ಷೆ ರತ್ನಮ್ಮ, ಎಸ್ ಡಿಎಂಸಿ ರಾಜ್ಯ ಉಪಾಧ್ಯಕ್ಷ ಎನ್.ಎಂ.ಶಂಭುಗೌಡ ಮತ್ತಿತರರು ಭಾಗವಹಿಸಿದ್ದರು.19ಕೆಆರ್ ಎಂಎನ್ 2.ಜೆಪಿಜಿ
ರಾಮನಗರ ಸರ್ಕಾರಿ ಜ್ಯೂನಿಯರ್ ಕಾಲೇಜು ಬಳಿ ಬಿಸಿಯೂ ತಯಾರಕರನ್ನು ಉದ್ದೇಶಿಸಿ ಯೂನಿಯನ್ ರಾಜ್ಯಾಧ್ಯಕ್ಷ ಹೊನ್ನಪ್ಪ ಮರಿಯಂನವರ್ ಮಾತನಾಡಿದರು.