ರಾಜ್ಯಾದ್ಯಂತ ಮುಂದುವರಿದ ಬಿಸಿಹವೆ : ಕಲಬುರಗಿಯಲ್ಲಿ 42 ಡಿಗ್ರಿ ಸೆ.

KannadaprabhaNewsNetwork |  
Published : Apr 17, 2026, 02:00 AM ISTUpdated : Apr 17, 2026, 11:19 AM IST
heat

ಸಾರಾಂಶ

ಕಲಬುರಗಿ, ರಾಯಚೂರು, ವಿಜಯಪುರ ಸೇರಿ ರಾಜ್ಯದ ಬಹುತೇಕ ಕಡೆ ಉಷ್ಣ ಹವೆ ಮುಂದುವರಿದಿದ್ದು, ಗುರುವಾರ ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನ, 42.1 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಲಬುರಗಿಯಲ್ಲಿ ದಾಖಲಾಗಿದೆ.

 ಬೆಂಗಳೂರು : ಕಲಬುರಗಿ, ರಾಯಚೂರು, ವಿಜಯಪುರ ಸೇರಿ ರಾಜ್ಯದ ಬಹುತೇಕ ಕಡೆ ಉಷ್ಣ ಹವೆ ಮುಂದುವರಿದಿದ್ದು, ಗುರುವಾರ ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನ, 42.1 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಲಬುರಗಿಯಲ್ಲಿ ದಾಖಲಾಗಿದೆ. ಬುಧವಾರಕ್ಕೆ (45 ಡಿಗ್ರಿ ಸೆಲ್ಸಿಯಸ್‌) ಹೋಲಿಸಿದರೆ ಗುರುವಾರ ಕಲಬುರಗಿಯಲ್ಲಿ ಉಷ್ಣಾಂಶ ಕೊಂಚ ತಗ್ಗಿತ್ತು. ಆದರೆ, ಇತರೆಡೆ ಬಿಸಿಹವೆ ಹಾಗೆಯೇ ಮುಂದುವರಿದಿದೆ. ಹೀಗಾಗಿ, ಕಲಬುರಗಿ ಸೇರಿ ರಾಜ್ಯದ ಹಲವು ಜಿಲ್ಲೆಗಳು ಗುರುವಾರವೂ ಇಡೀ ದಿನ ಬಿಸಿಲಿಗೆ ಕಾದು ಕೆಂಡವಾಗಿದ್ದವು. ಸಾಮಾನ್ಯವಾಗಿ ಈ ಪರಿಯ ತಾಪಮಾನ ಮೇ ತಿಂಗಳಲ್ಲಿ ದಾಖಲಾಗುತ್ತಿತ್ತು. ಆದರೆ, ಈ ಬಾರಿ 1 ತಿಂಗಳ ಮುಂಚೆಯೇ ಉಷ್ಣಾಂಶ ಏಕಾಏಕಿ ಏರಿರೋದು ಆತಂಕ ಮೂಡಿಸಿದೆ.

ವಿಜಯಪುರ, ರಾಯಚೂರಿನಲ್ಲಿ 40 ಡಿಗ್ರಿ

ಇದೇ ವೇಳೆ, ವಿಜಯಪುರ, ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌, ಬೀದರ್‌, ಗದಗದಲ್ಲಿ 39 ಡಿಗ್ರಿ ಸೆಲ್ಸಿಯಸ್‌, ಬಾಗಲಕೋಟೆ, ಧಾರವಾಡಗಳಲ್ಲಿ 38 ಡಿಗ್ರಿ ಸೆಲ್ಸಿಯಸ್‌, ದಾವಣಗೆರೆ, ಹಾವೇರಿ, ಬೆಳಗಾವಿ, ಚಿತ್ರದುರ್ಗ, ಶಿವಮೊಗ್ಗಗಳಲ್ಲಿ 37 ಡಿಗ್ರಿ ಸೆಲ್ಸಿಯಸ್‌, ಮೈಸೂರು, ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

ವಿಪರೀತ ಬಿಸಿಲು, ಸೆಖೆ, ಝಳ

ವಿಪರೀತ ಬಿಸಿಲು, ಸೆಖೆ, ಝಳದಿಂದಾಗಿ ಕಲಬುರಗಿ ಜಿಲ್ಲಾಡಳಿತ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಬೆಳಗ್ಗೆ 11ರಿಂದ ಮನೆಯಿಂದ ವಿನಾಕಾರಣ ಹೊರಗೆ ಬಾರದಂತೆ ಜನತೆಗೆ ಜಿಲ್ಲಾಡಳಿತ ಮನವಿ ಮಾಡಿದೆ. ಹೆಚ್ಚಿನ ನೀರು ಸೇವನೆ, ನೆರಳಲ್ಲೇ ಹೆಚ್ಚಿನ ಸಮಯ ಕಳೆಯುವುದು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಹೇಳಿದೆ.ಕಲಬುರಗಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಏ.15 ರಿಂದ ಏ.17ರ ವರೆಗೂ ಉಷ್ಣ ಅಲೆ ಬೀಸಲಿರುವ ಬಗ್ಗೆ ಮುಂಜಾಗ್ರತೆ ನೀಡಲಾಗಿತ್ತಾದರೂ ಏಕಾಏಕಿ ತಾಪಮಾನ ಈ ಪರಿ ಹೆಚ್ಚಿರೋದರಿಂದಾಗಿ ಜನಜೀವನ ತತ್ತರಿಸಿದೆ. ಬೆಳಗ್ಗೆ 8 ಆಗುತ್ತಿದ್ದಂತೆ ಬಿಸಿಲು ಶುರುವಾಗುತ್ತಿದ್ದು, ಉರಿ ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ರಸ್ತೆಗಳು ಬೀಕೋ ಎನ್ನುತ್ತಿವೆ. ಸಂಜೆ 6 ಗಂಟೆ ಬಳಿಕ, ಬಿಸಿಲು ತಗ್ಗಿದ ನಂತರವೇ ಜನ ಮನೆಯಿಂದ ಹೊರ ಬೀಳುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಉತ್ತಮ ಸಂಸ್ಕಾರದಿಂದ ಮಕ್ಕಳ ಭವಿಷ್ಯ ಉಜ್ವಲ
ಬಸ್-ಲಾರಿ ನಡುವೆ ಭೀಕರ ಅಪಘಾತ: ಇಬ್ಬರ ಸಾವು