ಕೃಷ್ಣ ಎನ್. ಲಮಾಣಿ
ಕೊರೋನಾ ಹಾವಳಿ ವೇಳೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಗಳು ಆಸರೆಯಾಗಿದ್ದವು. ಈ ಹಾಸ್ಟೆಲ್‌ಗಳಲ್ಲಿ ಕೊರೋನಾ ಪೀಡಿತರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆಸ್ಪತ್ರೆಗಳಲ್ಲಿ ಬೆಡ್‌ಗಳು ಭರ್ತಿ ಆಗಿದ್ದರಿಂದ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿಟ್ಟು ಜನರನ್ನು ಆರೈಕೆ ಮಾಡಲಾಗಿತ್ತು.
ಅಲೆಗಳ ಅಬ್ಬರ: ಜಿಲ್ಲೆಯಲ್ಲಿ ಒಂದನೇ, ಎರಡನೇ ಮತ್ತು ಮೂರನೇ ಅಲೆಗಳಲ್ಲಿ ಜನರು ತತ್ತರಿಸಿದ್ದರು. ಅದರಲ್ಲೂ ಎರಡನೇ ಅಲೆ ಜನರಲ್ಲಿ ಆತಂಕವನ್ನು ತಂದಿತ್ತು. ಹಾಗಾಗಿ ಜಿಲ್ಲೆಯ ಕೂಡ್ಲಿಗಿ, ಹೊಸಪೇಟೆ, ಹರಪನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿಗಳಲ್ಲಿ ಹಾಸ್ಟೆಲ್‌ಗಳೇ ಕ್ವಾರಂಟೈನ್ ಕೇಂದ್ರಗಳಾಗಿದ್ದವು. ಜನರ ಪ್ರಾಣ ರಕ್ಷಣೆ ಕೇಂದ್ರಗಳಾಗಿದ್ದವು. ಕೊರೋನಾದಿಂದ ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದ್ದರಿಂದ ಜಿಲ್ಲಾಡಳಿತವೇ ಕ್ವಾರಂಟೈನ್ ಕೇಂದ್ರಗಳನ್ನು ತೆರೆದು, ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿತ್ತು.ಅದರಲ್ಲೂ ಸೋಂಕಿತರ ಸಂಪರ್ಕಿತರು, ಟ್ರಾವೆಲ್ ಹಿಸ್ಟರಿಯುಳ್ಳವರಿಗೆ ಕ್ವಾರಂಟೈನ್ ಮಾಡಲಾಗುತ್ತಿತ್ತು. ಸರ್ಕಾರದ ಮಾರ್ಗಸೂಚಿಯಂತೆ ಹಾಸ್ಟೆಲ್‌ಗಳನ್ನೇ ಕ್ವಾರಂಟೈನ್ ಕೇಂದ್ರಗಳನ್ನಾಗಿಸಿತ್ತು. ಜತೆಗೆ ಈ ಕ್ವಾರಂಟೈನ್ ಕೇಂದ್ರಗಳಲ್ಲೂ ವೈದ್ಯರು, ನರ್ಸ್‌ಗಳು ಚಿಕಿತ್ಸೆ ನೀಡುತ್ತಿದ್ದರು. ಬರುಬರುತ್ತಾ ಈ ಕ್ವಾರಂಟೈನ್ ಕೇಂದ್ರಗಳು ಕೋವಿಡ್ ಸೆಂಟರ್‌ಗಳಾಗಿ ಮಾರ್ಪಟ್ಟಿದ್ದವು.
ಜಿಲ್ಲೆಯ ಆರು ತಾಲೂಕುಗಳಲ್ಲೂ ಈ ಕ್ರಮ ಅನುಸರಿಸಲಾಗಿತ್ತು. ಆಗ ಜನಪ್ರತಿನಿಧಿಗಳು, ಸಮಾಜಸೇವಕರು, ಉದ್ಯಮಿಗಳು ಸೇರಿದಂತೆ ಪ್ರಮುಖ ಮುಖಂಡರು ಕೂಡ ಜಿಲ್ಲಾಡಳಿತಕ್ಕೆ ಸಾಥ್ ನೀಡಿದ್ದರು. ಎಲ್ಲರೂ ಒಗ್ಗೂಡಿ ಕೊರೋನಾ ನಿಯಂತ್ರಣಕ್ಕೆ ಟೊಂಕಕಟ್ಟಿ ನಿಂತಿದ್ದರು.
ಜಿಂದಾಲ್ ಆಸರೆ: ತೋರಣಗಲ್‌ನ ಜಿಂದಾಲ್ ಬಳಿ ಒಂದು ಸಾವಿರ ಬೆಡ್‌ನ ಕೋವಿಡ್ ಸೆಂಟರ್ ಮಾಡಲಾಗಿತ್ತು. ಈ ಕೋವಿಡ್ ಸೆಂಟರ್ ಜನರಿಗೆ ಆಸರೆಯಾಗಿತ್ತು. ಜಿಲ್ಲೆಯ ಜನರಿಗೂ ಚಿಕಿತ್ಸೆಗೆ ಅನುಕೂಲ ಕಲ್ಪಿಸಲಾಗಿತ್ತು. ಹಾಗಾಗಿ ಸಮುದಾಯ ಭವನ, ಶಾಲೆಗಳನ್ನೇ ಕೋವಿಡ್ ಸೆಂಟರ್ ಇಲ್ಲವೇ ಕ್ವಾರಂಟೈನ್ ಕೇಂದ್ರ ಮಾಡುವ ತಾಪತ್ರಯ ತಪ್ಪಿತ್ತು. ಬೆಡ್‌ಗಳು ಸಿಗದೇ ಜನರು ಪರದಾಡುವುದನ್ನು ತಪ್ಪಿಸಲು ಜಿಂದಾಲ್‌ನ ಕೋವಿಡ್ ಸೆಂಟರ್‌ಗೆ ಕಳುಹಿಸಲಾಗುತ್ತಿತ್ತು. ಆನಂತರ ಸರ್ಕಾರವೇ ಕೊರೋನಾ ಪೀಡಿತರನ್ನು ಹೋಂ ಐಸೋಲೇಶನ್ ಮಾಡುವ ಮಾರ್ಗಸೂಚಿ ಹೊರಡಿಸಿದ ಬಳಿಕ ಬೆಡ್‌ಗಳನ್ನು ಹುಡುಕುವ ತಾಪತ್ರಯ ತಪ್ಪಿತ್ತು.ಜಿಲ್ಲೆಯ ಆರು ತಾಲೂಕುಗಳಲ್ಲೂ ಈಗ ಕ್ವಾರಂಟೈನ್ ಕೇಂದ್ರ, ಕೋವಿಡ್ ಸೆಂಟರ್, ಕೋವಿಡ್ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಒಂದು ವೇಳೆ ಕೊರೋನಾ ಅಬ್ಬರ ಶುರುವಾದರೆ, ಈ ಕೇಂದ್ರಗಳನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈಗ ಹಾಸ್ಟೆಲ್‌ಗಳಲ್ಲಿ ಶಾಲಾ- ಕಾಲೇಜು ಮಕ್ಕಳು ಇರುವುದರಿಂದ ಹಾಸ್ಟೆಲ್‌ಗಳನ್ನು ಗುರುತಿಸಲಾಗಿಲ್ಲ.
ಜಿಲ್ಲೆಯಲ್ಲಿ ಕೊರೋನಾದ ಅಬ್ಬರ ಹೆಚ್ಚಳವಾದಾಗ ಆರೋಗ್ಯ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಆಗ ಹಾಸ್ಟೆಲ್‌ಗಳನ್ನೇ ಕ್ವಾರಂಟೈನ್ ಸೆಂಟರ್ ಮಾಡಿಕೊಳ್ಳಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಕೊರೋನಾ ಮತ್ತೆ ಕಾಣಿಸಿಕೊಂಡಿರುವ ಹಿನ್ನೆಲೆ ಜಿಲ್ಲಾಡಳಿತ ಕೊರೋನಾ ನಿಯಂತ್ರಣಕ್ಕೆ ಕ್ರಮ ಅನುಸರಿಸಲು ಈಗಾಗಲೇ ವರ್ಚುವಲ್ ಸಭೆ ಕೂಡ ಮಾಡಿದೆ. ಈ ಸಭೆಯಲ್ಲಿ ಪ್ರಾಥಮಿಕವಾಗಿ ಚರ್ಚೆ ನಡೆದಿದ್ದು, ಈ ಹಿಂದೆ ಕೈಗೊಂಡ ಕ್ರಮಗಳ ಬಗ್ಗೆಯೂ ಚರ್ಚೆಯಾಗಿದ್ದು, ಲಭ್ಯ ಇರುವ ಕಟ್ಟಡಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು "ಕನ್ನಡಪ್ರಭ "ಕ್ಕೆ ತಿಳಿಸಿದರು.ಮಾರ್ಗಸೂಚಿಯಂತೆ ಕ್ರಮ: ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಹಾಸ್ಟೆಲ್ ಮತ್ತು ಹೋಟೆಲ್‌ಗಳನ್ನು ಕೋವಿಡ್ ಸೆಂಟರ್ ಮಾಡಲಾಗಿತ್ತು. ಕೊರೋನಾ ಈಗ ಶುರುವಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್‌ಒ ಡಾ. ಶಂಕರ್ ನಾಯ್ಕ ತಿಳಿಸಿದರು.