ಕಟ್ಟಿಗೆ ಒಲೆಯಿಂದ ಅಡುಗೆ ಮಾಡಲು ಮುಂದಾದ ಹೋಟೆಲ್ ಮಾಲಿಕರು

KannadaprabhaNewsNetwork |  
Published : Mar 13, 2026, 02:15 AM IST
12ಕೆಪಿಎಲ್21 ಕೊಪ್ಪಳ ನಗರದ ಆರೂಢ ಹೋಟೆಲ್ ನಲ್ಲಿ ಕಟ್ಟಿಗೆಯ ಒಲೆ ಉರಿಯುತ್ತಿರುವುದು. | Kannada Prabha

ಸಾರಾಂಶ

ಕೊಪ್ಪಳ ನಗರದಲ್ಲಿಯೇ ಸುಪ್ರಸಿದ್ಧ ಹೋಟೆಲ್‌ಗಳಲ್ಲೊಂದಾಗಿರುವ ಆರೂಢ ಹೋಟೆಲ್ ನಲ್ಲಿ ನಿತ್ಯವೂ ಸಾವಿರಾರು ಜನರು ಬಂದು, ಹೋಗುತ್ತಾರೆ. ಎರಡು, ಮೂರು ಹೋಟೆಲ್ ಇರುವುದರಿಂದ ಎಲ್ಲ ಹೋಟೆಲ್‌ಗಳಲ್ಲಿಯೂ ಸಿಲಿಂಡರ್ ಸಮಸ್ಯೆಯಾಗಿದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಸಿಲಿಂಡರ್ ಸಿಗದೇ ಇರುವುದರಿಂದ ಈಗ ಒಂದು ಕಟ್ಟಿಗೆ ಒಲೆ ಹೂಡಿದ್ದು, ಅದರಲ್ಲಿಯೇ ಕೆಲವೊಂದು ಅಡುಗೆ ಮಾಡುತ್ತಿದ್ದೇವೆ. ಹಾಗೊಂದು ವೇಳೆ ಇನ್ನೆರಡು ದಿನ ಸಿಗದಿದ್ದರೆ ಹೋಟೆಲ್ ಆಚೆ ಒಲೆ ಹೂಡಿ ಅಡುಗೆ ಸಿದ್ಧ ಮಾಡಿ ಹೋಟೆಲ್ ನಡೆಸುತ್ತೇವೆ.

ಇದು, ಕೊಪ್ಪಳ ನಗರದ ಆರೂಢ ಹೋಟೆಲ್ ಮಾಲಿಕ ಲಿಂಗರಾಜ ಅವರು ಸಿಲಿಂಡರ್ ಸಮಸ್ಯೆಯಿಂದ ಮಾಡಿಕೊಂಡಿರುವ ತಯಾರಿಯ ಕುರಿತು ಹೇಳುವ ಮಾತು.

ಕೊಪ್ಪಳ ನಗರದಲ್ಲಿಯೇ ಸುಪ್ರಸಿದ್ಧ ಹೋಟೆಲ್‌ಗಳಲ್ಲೊಂದಾಗಿರುವ ಆರೂಢ ಹೋಟೆಲ್ ನಲ್ಲಿ ನಿತ್ಯವೂ ಸಾವಿರಾರು ಜನರು ಬಂದು, ಹೋಗುತ್ತಾರೆ. ಎರಡು, ಮೂರು ಹೋಟೆಲ್ ಇರುವುದರಿಂದ ಎಲ್ಲ ಹೋಟೆಲ್‌ಗಳಲ್ಲಿಯೂ ಸಿಲಿಂಡರ್ ಸಮಸ್ಯೆಯಾಗಿದೆ. ವಾರದಿಂದ ಒಂದೇ ಒಂದು ಸಿಲಿಂಡರ್ ಸಿಕ್ಕಿಲ್ಲ (ವಾಣಿಜ್ಯ ಬಳಕೆ ಸಿಲಿಂಡರ್) ಇದರಿಂದ ಸಮಸ್ಯೆಯಾಗಿದ್ದು,ಈಗ ಅಡುಗೆ ಮನೆಯಲ್ಲಿಯೇ ಒಂದು ಕಟ್ಟಿಗೆ ಒಲೆಯಲ್ಲಿಯೇ ಬಹುತೇಕ ಅಡುಗೆ ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಹಾಗಂತ ಹೋಟೆಲ್ ಬಂದ್ ಮಾಡಲು ಸಾಧ್ಯವಿಲ್ಲ. ಹೋಟೆಲ್ ಒಳಗಡೆ ಎಲ್ಲ ಕಟ್ಟಿಗೆ ಒಲೆ ಹೂಡಿ ಅಡುಗೆ ಮಾಡುವುದು ಸಾಧ್ಯವಿಲ್ಲ. ಹೀಗಾಗಿ, ಹೋಟೆಲ್ ಹಿಂದುಗಡೆ ಬಯಲು ಜಾಗೆಯಿದ್ದು, ಮದುವೆ ಮನೆಯಲ್ಲಿ ಮಾಡುವಂತೆ ಒಲೆ ಮಾಡಿಕೊಂಡು ಮಾಡುವ ಚಿಂತನೆ ಮಾಡಿದ್ದು,ಈಗಾಗಲೇ ಜಾಗ ಸ್ವಚ್ಛ ಮಾಡಿದ್ದೇವೆ. ಕಲ್ಲು ಹೂಡಿ, ಕಟ್ಟಿಗೆ ಕೊಂಡು ತಂದು ಕಟ್ಟಿಯ ಒಲೆಯ ಮೇಲೆಯೇ ಹೋಟೆಲ್ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ.

ಇದು, ಲಿಂಗರಾಜ ಅವರ ಮಾತಾದರೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಖರ ಹೇಳುವುದೇ ಬೇರೆ, ನಾವೆಲ್ಲ ಕಟ್ಟಿಗೆಯ ಒಲೆಯಲ್ಲಿ ಅಡುಗೆ ಮಾಡುವುದು ಅಸಾಧ್ಯ. ಹೀಗಾಗಿ, ಕರೆಂಟ್ ಒಲೆ ಬಳಕೆ ಮಾಡಿ ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ಮಾಡಿ ಕೊಡುತ್ತೇವೆ. ಟಿ.ಕಾಫಿ, ಗಿರ್ಮೀಟ್‌, ಉಪ್ಪಿಟ್ಟನಂತ ಅಡುಗೆ ಮಾತ್ರ ಮಾಡಿ ಕೊಡುತ್ತೇವೆ ಎನ್ನುತ್ತಾರೆ.

ಮೆಡಿಕಲ್ ಕಾಲೇಜು ಹಾಸ್ಟೆಲ್‌ ನಲ್ಲಿ ಸಿಲಿಂಡರ್ ಸಮಸ್ಯೆ: ಕೊಪ್ಪಳ ನಗರದ ಕಿಮ್ಸ್ ಮೆಡಿಕಲ್ ಕಾಲೇಜು ಹಾಸ್ಟೆಲ್ ನಲ್ಲಿಯೂ ಸಿಲಿಂಡರ್ ಸಮಸ್ಯೆಯ ಬಿಸಿ ತಟ್ಟಿದ್ದು ಗ್ಯಾಸ್ ಟ್ರಬಲ್ ಜೋರಾಗಿದೆ. ಎಷ್ಟು ಸಮಸ್ಯೆಯಾಗಿದೆ ಎಂದರೆ ಗುರುವಾರ ಬಾಲಕರ ಹಾಸ್ಟೆಲ್ ನಲ್ಲಿ ಅಡುಗೆ ಮಾಡಿಲ್ಲ, ಹೊರಗೆ ತಿಂದು ಬರಲು ಹೇಳಿದ್ದಾರೆ. ಇನ್ನು ಬಾಲಕೀಯರಿಗೆ ಮಾತ್ರ ಇರುವ ಸಿಲಿಂಡರ್ ಬಳಕೆ ಮಾಡಿ ಅಡುಗೆ ಸಿದ್ಧ ಮಾಡಿ ಹಾಕಿದ್ದಾರೆ. ಆದರೆ, ಇನ್ನೆರಡು ದಿನ ಮಾತ್ರ ಹೀಗೆ ಮಾಡಲು ಸಾಧ್ಯ. ಅದಾದ ಮೇಲೆ ಏನು ಮಾಡಬೇಕು ಎನ್ನುವುದು ಗೊತ್ತಿಲ್ಲ ಎನ್ನುತ್ತಾರೆ ಹಾಸ್ಟೆಲ್ ಸಿಬ್ಬಂದಿ.

ಕೇವಲ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗಳಲ್ಲಿ ಅಲ್ಲ, ಬಹುತೇಕ ಹಾಸ್ಟೆಲ್ ಗಳಲ್ಲಿಯೂ ಸಮಸ್ಯೆಯಾಗಿದೆ. ಮಠಮಾನ್ಯಗಳಲ್ಲಿಯೂ ಸಮಸ್ಯೆಯಾಗಿದೆ. ಕೊಪ್ಪಳ ಗವಿಮಠದ ದಾಸೋಹಕ್ಕೂ ಸಮಸ್ಯೆಯಾಗಿದೆ. ಆದರೆ, ಇಲ್ಲಿ ಬಹುತೇಕ ಕಟ್ಟಿಗೆಯ ಒಲೆ ಬಳಕೆ ಮಾಡಿ ಸ್ಟೀಮ್ ನಲ್ಲಿ ಅಡುಗೆ ಸಿದ್ಧ ಮಾಡುವುದರಿಂದ ಸಮಸ್ಯೆಯಾಗಿಲ್ಲ ಎನ್ನುತ್ತಾರೆ ದಾಸೋಹದ ಉಸ್ತುವಾರಿ ವಹಿಸಿರುವ ರಾಮನಗೌಡ.

ವಾಣಿಜ್ಯ ಬಳಕೆ ಸಿಲಿಂಡರ್ ಇನ್ನು ಬಂದಿಲ್ಲ, ಬರುವ ಲಕ್ಷಣಗಳೂ ಇಲ್ಲದಿರುವುದು ಸಮಸ್ಯೆಯಾಗಿದೆ. ನಿತ್ಯವೂ ಬಂದು ಕೇಳಿ ಹೋಗುತ್ತಿದ್ದಾರೆ ಎಂದು ಗುರುಪ್ರಸಾದ ಗ್ಯಾಸ್ ಎಜೆನ್ಸಿಯ ರಾಘವೇಂದ್ರ ಹೇಳಿದರು.

ಸಿಲಿಂಡರ್ ಸಮಸ್ಯೆಯಾಗಿದೆ ಅಂತಾ ಹೋಟೆಲ್ ಬಂದ್ ಮಾಡುವುದಿಲ್ಲ. ಹೋಟೆಲ್ ಹಿಂದುಗಡೆ ಇರುವ ಜಾಗೆಯಲ್ಲಿ ಕಟ್ಟಿಯ ಒಲೆ ಹೂಡಿ, ನಮ್ಮ ಮೂರು ಹೋಟೆಲ್‌ಗಳಿಗೂ ಅಡುಗೆ ಸಿದ್ಧ ಮಾಡಿ, ಕಳುಹಿಸುವ ತಯಾರಿ ಮಾಡಿಕೊಂಡಿದ್ದೇವೆ. ಸದ್ಯಕ್ಕೊಂದು ಕಟ್ಟಿಗೆಯ ಒಲೆ ಹೋಟೆಲ್‌ನಲ್ಲಿಯೇ ಪ್ರಾರಂಭಿಸಿದ್ದೇವೆ ಎಂದು ಆರೂಢ ಹೋಟೆಲ್ ಮಾಲಿಕ ಲಿಂಗರಾಜ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾಟೆ ಸ್ವಯಂ ರಕ್ಷಣೆಗೆ ಆಗತ್ಯ
ಕಾಳಸಂತೆಯಲ್ಲಿ ಸಿಲಿಂಡರ್‌ ಮಾರಾಟ: ಕ್ರಮಕ್ಕೆ ಆಗ್ರಹ