ಶಿಗ್ಗಾಂವಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಆಡಳಿತ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಶಿಗ್ಗಾಂವಿ: ಮಹಿಳಾ ನೌಕರರು ಕೇವಲ ಮಹಿಳೆಯರು ಎಂಬ ಕಾರಣಕ್ಕೆ ಅನಗತ್ಯ ಸೌಲತ್ತುಗಳನ್ನು ಬಳಸಿಕೊಳ್ಳಬಾರದು. ನಾವು ಕರ್ತವ್ಯದಲ್ಲಿರುವಾಗ ನಮ್ಮನ್ನು ಅಧಿಕಾರಿಗಳೆಂದು ನೋಡಬೇಕೇ ಹೊರತು ಕೇವಲ ಮಹಿಳೆಯರೆಂದಲ್ಲ. ಮಹಿಳೆಯರು ಜೈವಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಆಡಳಿತ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ವ್ಯಾಮೋಹದಿಂದ ಮಕ್ಕಳು ಆತ್ಮಹತ್ಯೆಯಂತಹ ಹಾದಿ ಹಿಡಿಯುತ್ತಿರುವುದು ದುರಂತ. ತಾಯಂದಿರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಹಾಗೆಯೇ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಈ ಕಾಲದಲ್ಲಿಯೂ ಕೆಲವು ಮಹಿಳೆಯರೇ ಭ್ರೂಣಹತ್ಯೆಗೆ ಪ್ರೇರೇಪಿಸುತ್ತಿರುವುದು ಬೇಸರದ ಸಂಗತಿ. ಮಹಿಳೆಯರು ಧಾರಾವಾಹಿಗಳನ್ನು ನೋಡುವುದನ್ನು ಬಿಟ್ಟು, ಆರೋಗ್ಯ ಹಾಗೂ ಸೃಜನಶೀಲ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಸಹೋದ್ಯೋಗಿ ಮಹಿಳೆಯರ ಬಗ್ಗೆ ಗಾಸಿಪ್ ಮಾಡುವುದನ್ನು ಬಿಡಬೇಕು. ದೌರ್ಜನ್ಯ ನಡೆದಾಗ ಮೌನವಾಗಿರದೆ ಧ್ವನಿ ಎತ್ತಬೇಕು, ಆದರೆ ಕಾನೂನನ್ನು ದುರುಪಯೋಗಪಡಿಸಿಕೊಳ್ಳಬಾರದು. ವೈಯಕ್ತಿಕ ಗೌರವ ಕಾಪಾಡಿಕೊಂಡಾಗ ಇಲಾಖೆಯ ಹೆಸರೂ ವೃದ್ಧಿಯಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಸಿ. ವಾಲಿ ಮಹಾರಾಜರು ಮಾತನಾಡಿ, ಭಾರತೀಯ ಮಹಿಳೆಯರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ತಮ್ಮ ಸಂಸ್ಕಾರವನ್ನು ಬಿಡದಿರುವುದು ಹೆಮ್ಮೆಯ ವಿಷಯ. ಉದ್ಯೋಗಸ್ಥ ಮಹಿಳೆಯರು ಸಮಾಜದ ಕೆಳಹಂತದ ಜನರ ಏಳಿಗೆಗೂ ಶ್ರಮಿಸಬೇಕು ಎಂದು ಹೇಳಿದರು.
ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರುಣ ಹುಡೇದಗೌಡ್ರ, ಮಲ್ಲೇಶ ಕರಿಗಾರ, ಶೈಲಜಾ ಹುದ್ದಾರ, ವಿಜಯಾ ಪಾಟೀಲ, ಸರಸ್ವತಿ ಗಜಕೋಶ, ನಾಗಮ್ಮ ಮಣ್ಣಣ್ಣನವರ, ಗೀತಾಂಜಲಿ ತೆಪ್ಪದ, ವಿನೋದಾ ಪಾಟೀಲ, ಶಬ್ಬೀರ ಮುನಿಯಾರ, ರಮೇಶ ಹರಿಜನ, ಶಾಂತಕುಮಾರ ಎತ್ತಿನಹಳ್ಳಿ, ವಿದ್ಯಾ ಖುರ್ಸಾಪುರ, ಮಂಜುಳಾ ಹೊಳೆಸಿರಿಯಾರ, ಎಂ.ಬಿ. ಅಂಬಿಗೇರ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.