ಬೆಂಗಳೂರು ನಗರದಲ್ಲಿ ಹೋಟೆಲ್‌ಗಳಿಗೀಗ ಸೌದೆಯ ಗತಿ!

KannadaprabhaNewsNetwork |  
Published : Mar 15, 2026, 02:00 AM IST
ವಿಜಯಪುರ | Kannada Prabha

ಸಾರಾಂಶ

ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಅಭಾವ ಹೋಟೆಲ್‌ ಉದ್ಯಮದ ಮೇಲೇ ಭಾರೀ ಪರಿಣಾಮ ಉಂಟು ಮಾಡುತ್ತಿದ್ದು ದಿನಕಳೆದಂತೆ ಹಲವು ಹೋಟೆಲ್‌ಗಳು ಬಾಗಿಲು ಮುಚ್ಚುತ್ತಿವೆ. ಕೆಲವು ಹೋಟೆಲ್‌ಗಳು ಸೌದೆಯಂತಹ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದರೂ ಉರುವಲು ಸಿಗದೇ ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಅಭಾವ ಹೋಟೆಲ್‌ ಉದ್ಯಮದ ಮೇಲೇ ಭಾರೀ ಪರಿಣಾಮ ಉಂಟು ಮಾಡುತ್ತಿದ್ದು ದಿನಕಳೆದಂತೆ ಹಲವು ಹೋಟೆಲ್‌ಗಳು ಬಾಗಿಲು ಮುಚ್ಚುತ್ತಿವೆ. ಕೆಲವು ಹೋಟೆಲ್‌ಗಳು ಸೌದೆಯಂತಹ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದರೂ ಉರುವಲು ಸಿಗದೇ ಪರದಾಡುವಂತಾಗಿದೆ.

ಕಾಮಾಕ್ಷಿಪಾಳ್ಯದಲ್ಲಿರುವ ನ್ಯೂ ಸಮೃದ್ಧಿ ಗ್ರ್ಯಾಂಡ್‌ ಹೋಟೆಲ್‌ ಮುಖ್ಯ ರಸ್ತೆಯಲ್ಲೇ ಇದ್ದು ಇಡ್ಲಿ, ದೋಸೆ ಮತ್ತು ಊಟಕ್ಕೆ ಹೆಸರುವಾಸಿಯಾಗಿದೆ. ಆದ್ದರಿಂದ ಪ್ರತಿನಿತ್ಯ ಇಲ್ಲಿ ಸಾವಿರಾರು ಜನ ಊಟ-ತಿಂಡಿ ಸೇವಿಸುತ್ತಿದ್ದರು. ಆದರೆ ಗ್ಯಾಸ್‌ ಸಿಲಿಂಡರ್‌ ಸಮಸ್ಯೆಯಿಂದ ಗುರುವಾರದಿಂದಲೇ ಹೋಟೆಲ್‌ ಬಂದ್‌ ಆಗಿದೆ. ಶನಿವಾರವೂ ಗ್ರಾಹಕರು ಆಗಮಿಸಿದ್ದು ಹೋಟೆಲ್‌ ಬಂದ್‌ ಆಗಿರುವುದನ್ನು ನೋಡಿ ವಾಪಸ್‌ ತೆರಳುತ್ತಿರುವುದು ಕಂಡುಬಂತು.ಗ್ಯಾಸ್‌ ಸಿಲಿಂಡರ್‌ ವ್ಯತ್ಯಯದಿಂದಾಗಿ ಬಹುತೇಕ ಹೋಟೆಲ್‌ಗಳು ಸೌದೆಯತ್ತ ಮುಖ ಮಾಡಿದ್ದು ನವಯುಗ ಹೋಟೆಲ್‌ನಲ್ಲಿ ಒಂದು ವಾರಕ್ಕೆ ಸಾಕಾಗುವಷ್ಟು ಸೌದೆ ಸಂಗ್ರಹ ಮಾಡಿಕೊಳ್ಳಲಾಗಿದೆ. ಮೆನುವಿನಲ್ಲಿ ಮಾಂಸಾಹಾರ ಮಾತ್ರ ಇದ್ದು ಅದರಲ್ಲೂ ಚಿಕನ್‌ ಮತ್ತು ಮಟನ್‌ ಬಿರಿಯಾನಿ ಮಾತ್ರ ಸಿಗಲಿದೆ. ಸಸ್ಯಾಹಾರ ಸಿಗುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದರು. ಸಿಲಿಂಡರ್‌ ಅಭಾವದ ಹಿನ್ನೆಲೆಯಲ್ಲಿ ರಾಜಾಜಿನಗರದ ಅಂಬಿಕಾ ಹೋಟೆಲ್‌ ಶನಿವಾರ ಮಧ್ಯಾಹ್ನದಿಂದ ಬಂದ್‌ ಆಗಿತ್ತು.

ದರ ಏರಿಕೆ ಅನಿವಾರ್ಯ

ಲಾಲ್‌ಬಾಗ್‌ ರಸ್ತೆಯ ಸತ್ಕಾರ್‌ ಉಪಾಹಾರ ಹೋಟೆಲ್‌ನಲ್ಲಿ ಸಿಲಿಂಡರ್‌ ಕೊರತೆಯಿಂದ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದು ಪದಾರ್ಥಗಳ ಬೆಲೆಯನ್ನು 5 ರಿಂದ 20 ರುಪಾಯಿಯವರೆಗೂ ಹೆಚ್ಚಳ ಮಾಡಲಾಗಿದೆ. ಸಿಬ್ಬಂದಿಯ ಸಂಬಳ ಸೇರಿದಂತೆ ಎಲ್ಲದರ ಬೆಲೆಯೂ ಹೆಚ್ಚಾಗಿದೆ. ಆದ್ದರಿಂದ ದರ ಏರಿಕೆ ಅನಿವಾರ್ಯ ಎಂದು ಹೋಟೆಲ್‌ ಮಾಲೀಕ ಸದಾಶಿವ ಸ್ಪಷ್ಟಪಡಿಸಿದರು.

ಚೌಲ್ಟ್ರಿ ಮುಂದೆ ಸೌದೆ ರಾಶಿವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೂ ಗ್ಯಾಸ್‌ ಸಿಲಿಂಡರ್‌ ಬಿಸಿ ತಟ್ಟಿದ್ದು ದೊಡ್ಡ ದೊಡ್ಡ ಕಲ್ಯಾಣ ಮಂಟಪಗಳಿಗೂ ಅಡುಗೆ ಅನಿಲದ ಕೊರತೆ ಕಾಡುತ್ತಿದೆ. ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾಗುವುದಕ್ಕೂ ಮುನ್ನ ನಿಗದಿಯಾಗಿದ್ದ ವಿವಾಹಗಳಿಗೆ ಗ್ಯಾಸ್‌ ಬಿಸಿ ಉಂಟಾಗಿದೆ. ರಾಜಾಜಿನಗರದ ಸಪ್ತಗಿರಿ ಹಾಲ್‌ನಲ್ಲಿ ಭಾನುವಾರ ವಿವಾಹವೊಂದು ನೆರವೇರಲಿದ್ದು ಈ ಹಿನ್ನೆಲೆಯಲ್ಲಿ ಶನಿವಾರ ಸೌದೆಯನ್ನು ತಂದು ರಾಶಿ ಹಾಕಿಕೊಳ್ಳಲಾಗಿತ್ತು.

ಎಂದೂ ಸಹ ಸೌದೆ ಬಳಸದ ಹೋಟೆಲ್‌ಗಳೂ ಇದೀಗ ಅನಿಲ ಸಿಲಿಂಡರ್‌ ಅಭಾವದಿಂದ ಒಲೆಗಳತ್ತ ಮುಖ ಮಾಡಿವೆ. ಒಂದು ಕೆಜಿ ಸೌದೆಗೆ 22 ರುಪಾಯಿ ನೀಡಿ ಹೋಟೆಲ್‌ ಮಾಲೀಕರು ಖರೀದಿಸುತ್ತಿದ್ದಾರೆ. ಕೆಲವರು ಪೂರ್ಣ ಪ್ರಮಾಣದಲ್ಲಿ ಸೌದೆ ಬಳಸಿದರೆ ಇನ್ನು ಕೆಲವರು ಅರ್ಧ ಗ್ಯಾಸ್‌ ಮತ್ತು ಇನ್ನರ್ಧ ಸೌದೆ ಉಪಯೋಗಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕಾರಿಗಳ ಅರ್ಧ ದಿನದ ಕೆಲಸಕ್ಕೆ ಡಿಸಿ ಸಿಡಿಮಿಡಿ
ಸುಳ್ಳು ಮಾಹಿತಿಗೆ ಕಿವಿಗೊಡದಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ: ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್