ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಲೀಲಾವತಿ ಬಡಾವಣೆಯ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಮನೆ ಸೇರಿದಂತೆ ಎರಡು ಮನೆಗಳ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕು, ಮೇಳೆಕೋಟೆ ಗ್ರಾಮದವನಾದ ಹಾಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಆಲೂರು ಗ್ರಾಮದ ಎಚ್. ಹನುಮಂತರಾಯ ಅಲಿಯಾಸ್ ಹನುಮಂತ ಬಂಧಿತ ಆರೋಪಿ. ಈತನಿಂದ 11 ಲಕ್ಷ ರು. ವೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಹನುಮಂತ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಲೀಲಾವತಿ ಬಡಾವಣೆ ಗೊರವನಹಳ್ಳಿ ರಸ್ತೆಯ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ. ಎಚ್.ಎಸ್. ಶಿವರಾಮು ಅವರ ಮನೆ ಬೀಗ ಮುರಿದು 2.10 ಲಕ್ಷ ರು. ವೌಲ್ಯದ 37 ಗ್ರಾಂ ಚಿನ್ನದ ಚೈನು, ಉಂಗುರ ದೋಚಿದ್ದನು.ಅಲ್ಲದೇ ಇದೇ ಆರೋಪಿ ಆಗಸ್ಟ್ ತಿಂಗಳಲ್ಲಿ ಹೊಳೇ ಬೀದಿ ರಂಗಸ್ವಾಮಿ ಎಂಬುವವರ ಮನೆ ಬಾಗಿಲ ಬೀಗ ಮುರಿದು 4 ಲಕ್ಷ ರು. ಚಿನ್ನಾಭರಣ ಮತ್ತು ಬೆಳ್ಳಿ ಪದಾರ್ಥಗಳನ್ನು ಕಳವು ಮಾಡಿ ಪರಾರಿಯಾಗಿದ್ದನು.
ಎರಡೂ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದ ಮದ್ದೂರು ಪೊಲೀಸರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು.ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಸಿಪಿಐ ವೆಂಕಟೇಗೌಡ, ಪಿಎಸ್‌ಐ ಮಂಜುನಾಥ್, ಅಪರಾಧ ವಿಭಾಗದ ಪಿ. ರವಿ, ಸಿಬ್ಬಂದಿ ಚಿರಂಜೀವಿ, ಪೂಜಾರ್, ಪ್ರಸನ್ನ, ವಿಷ್ಣುವರ್ಧನ, ಓಂಕಾರಪ್ಪ, ಗಿರೀಶ, ಮಂಡ್ಯ ಡಿಆರ್ ವಿಭಾಗದ ರವಿಕಿರಣ್, ಲೋಕೇಶ್, ರಜಿತ್, ಚಲುವರಾಜು ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ನೆಲಮಂಗದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.