ಭಾರಿ ಮಳೆಗೆ ಕುಸಿದ ವಾಸದ ಮನೆ

KannadaprabhaNewsNetwork |  
Published : May 29, 2025, 12:04 AM IST
ಚಿತ್ರ : 28ಎಂಡಿಕೆ2 : ಹಳ್ಳಿಗಟ್ಟಿನಲ್ಲಿ ಮನೆ ಕುಸಿದು ಹಾನಿಯಾಗಿರುವುದು. | Kannada Prabha

ಸಾರಾಂಶ

ಧಾರಾಕಾರ ಮಳೆಗೆ ವಾಸದ ಮನೆಯೊಂದು ಕುಸಿದು ಸಂಪೂರ್ಣ ಹಾನಿ ಸಂಭವಿಸಿದ ಘಟನೆ ಪೊನ್ನಂಪೇಟೆ ಅರುವತ್ತೋಕ್ಲು ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಟ್ಟುವಿನಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಆದರೆ ಮನೆಯವರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಧಾರಾಕಾರ ಮಳೆಗೆ ವಾಸದ ಮನೆಯೊಂದು ಕುಸಿದು ಸಂಪೂರ್ಣ ಹಾನಿ ಸಂಭವಿಸಿದ ಘಟನೆ ಪೊನ್ನಂಪೇಟೆ ಅರುವತ್ತೋಕ್ಲು ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಟ್ಟುವಿನಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಆದರೆ ಮನೆಯವರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.ಹಳ್ಳಿಗಟ್ಟು ಗ್ರಾಮದ ಚಿಮ್ಮಿಚ್ಚಿರ ಕೆ. ಅಬ್ದುಲ್ಲಾ ಎಂಬವರ ಮನೆ ಕುಸಿದಿದೆ. ಎಂದಿನಂತೆ ಅಬ್ದುಲ್ಲಾ ಅವರು ತಮ್ಮ ಕುಟುಂಬದವರೊಂದಿಗೆ ರಾತ್ರಿ ಊಟ ಮುಗಿಸಿ ಮಲಗಿದ್ದರು. ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಗೋಡೆ ಬಿರುಕು ಬಿಡುತ್ತಾ ಮೆಲ್ಲನೆ ಕುಸಿಯುತ್ತಿರುವುದನ್ನು ಗಮನಿಸಿದ ಅಬ್ದುಲ್ಲಾ ಮತ್ತು ಅವರ ಸಹೋದರ ಮುಜೀಬ್, ಪಕ್ಕದ ಕೋಣೆಯಲ್ಲಿ ಮಲಗಿದ್ದ ಇವರ ತಾಯಿ ಮತ್ತು ಮಕ್ಕಳನ್ನು ಕೂಡಲೇ ಎಬ್ಬಿಸಿ ಬೇರೆಡೆಗೆ ಕರೆದೊಯ್ದು ಪ್ರಾಣ ರಕ್ಷಣೆ ಮಾಡಿದ್ದಾರೆ.

ಸೋಮವಾರ ಸಂಜೆಯಿಂದಲೇ ಈ ಭಾಗಕ್ಕೆ ವ್ಯಾಪಕ ಮಳೆಯಾಗುತ್ತಿತ್ತು. ಜೊತೆಗೆ ಭಾರಿ ಪ್ರಮಾಣದ ಗಾಳಿಯೂ ಬೀಸುತ್ತಿತ್ತು. ರಾತ್ರಿ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಯ ಗೋಡೆಯ ಭಾಗಕ್ಕೆ ನೀರು ನುಗ್ಗಿದ್ದೇ ಮನೆ ಕುಸಿಯಲು ಕಾರಣ ಎನ್ನಲಾಗಿದೆ.

ವಾಸಿಸುವ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಈ ಮನೆಯಲ್ಲಿ ಇನ್ನು ವಾಸಿಸಲು ಸಾಧ್ಯವಿಲ್ಲ. ಮನೆಯೊಳಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದು, ಭಾರಿ ನಷ್ಟ ಸಂಭವಿಸಿದೆ ಎಂದು ಅಬ್ದುಲ್ಲಾ ತಿಳಿಸಿದ್ದಾರೆ.

ವಿಷಯ ತಿಳಿದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಕುಟುಂಬಕ್ಕೆ ತಾತ್ಕಾಲಿಕವಾಗಿ ವಾಸಿಸಲು ಅಗತ್ಯ ವ್ಯವಸ್ಥೆಗೊಳಿಸುವಂತೆಯೂ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯತಿ ಸದಸ್ಯರಾದ ಮೂಕಳೇರ ಸುಮಿತಾ, ಕೊಳೇರ ಭಾರತಿ ಮೊದಲಾದವರು ಹಾಜರಿದ್ದರು. ನಂತರ ಘಟನಾ ಸ್ಥಳಕ್ಕೆ ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಮೋಹನ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ