ಕನ್ನಡಪ್ರಭ ವಾರ್ತೆ ಮಂಗಳೂರು
ಸಮಿತಿ ಅಧ್ಯಕ್ಷ ಶರವಣ ಟಿ.ಎ. ನೇತೃತ್ವದ ಸಮಿತಿಯು ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಭರವಸೆಗಳನ್ನು ಪರಿಶೀಲಿಸಿತು.
ಸುರತ್ಕಲ್ ವಲಯದಲ್ಲಿ ಒಳಚರಂಡಿ ಕಾಮಗಾರಿಯಲ್ಲಿ 116 ಕಿ.ಮೀ. ಪೈಪ್ ಲೈನ್ ಹಾಗೂ 824 ಮ್ಯಾನ್ ಹೋಲ್‌ಗಳನ್ನು ಮಾಡಲಾಗಿದೆ. ಇಲ್ಲಿನ ಬಹುತೇಕ ಪ್ರದೇಶಗಳಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಸಮಿತಿಗೆ ವಿವರಿಸಿದರು.
ಈ ಎರಡೂ ಒಳಚರಂಡಿ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗಮನಹರಿಸಿ, ಮುಂದಿನ 15 ದಿನಗಳೊಳಗೆ ವರದಿ ನೀಡುವಂತೆ ಸಮಿತಿಯ ಅಧ್ಯಕ್ಷ ಶರವಣ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.ಮಾಲಿನ್ಯ ನಿಯಂತ್ರಣ ಮಂಡಳಿಯು ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಕೆರೆಗಳ ಸಂರಕ್ಷಣೆ, ನೀರು ಮಾಲಿನ್ಯದಂತಹ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸಲು ಸಮಿತಿಯು ಮಂಡಳಿಗೆ ಸೂಚಿಸಿತು. ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಸಮರ್ಥವಾಗಿ ದಾಖಲೆಗಳನ್ನು ಮಂಡಿಸಬೇಕು ಎಂದು ಸೂಚಿಸಿತು. ಮಾಲಿನ್ಯ ಮಂಡಳಿಗೆ ಪ್ರತ್ಯೇಕ ಕಾನೂನು ಕೋಶ ಒದಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದ 3 ಪ್ರಕರಣ ಹಾಗೂ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ 1 ಪ್ರಕರಣವು ರಾಷ್ಟ್ರೀಯ ಹಸಿರು ಪೀಠ (ಎನ್.ಜಿ.ಟಿ)ದ ಮುಂದೆ ಇದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸಮಿತಿಗೆ ವಿವರಿಸಿದರು.ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಅಗತ್ಯ ಜಾಗ ಒದಗಿಸಲು ಅಧ್ಯಕ್ಷರು ಮಹಾನಗರ ಪಾಲಿಕೆಗೆ ಸೂಚಿಸಿದರು.ಸಭೆಯಲ್ಲಿ ವಿಧಾನಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿಯ ಸದಸ್ಯರಾದ ಮಂಜುನಾಥ ಭಂಢಾರಿ, ಪ್ರತಾಪ ಸಿಂಹ ನಾಯಕ್, ಡಿ.ಎಸ್. ಅರುಣ್, ಕೆ.ಎಸ್. ನವೀನ್, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮತ್ತಿತರರು ಇದ್ದರು. ಇದಕ್ಕೂ ಮೊದಲು ಸಮಿತಿಯು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ, ಸರ್ಕಾರಿ ಭರವಸೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಅನುಷ್ಠಾನ ಕುರಿತು ಸಭೆ ನಡೆಸಿತು.